Advertisement

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

07:40 PM Apr 18, 2024 | Team Udayavani |

ಕುಣಿಗಲ್ : ತಾಲೂಕಿನ ಅಮೃತ್ತೂರು ಹೋಬಳಿ ಮಂಗಳ ಕೊಡವತ್ತಿ ಕ್ರಾಸ್‌ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಹಬ್ಬದ ದಿನದಂದು ನೀರು ಮಜ್ಜಿಗೆ ಪಾನಕ ಸೇವಿಸಿ 60 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

Advertisement

ದೇವಾಲಯದಲ್ಲಿ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಹಾಗೂ ಹೆಸರು ಬೇಳೆಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು, ಹಬ್ಬದ ಅಂಗವಾಗಿ ಮಂಗಳ ಗೊಲ್ಲರಹಟ್ಟಿ, ಕೊಡವತ್ತಿ ಹಾಗೂ ಮಾಗಡಿಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರು ಭಕ್ತಾಧಿಗಳು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನೀರು ಮಜ್ಜಿಗೆ ಪಾನಕ ಹಾಗೂ ಹೆಸರು ಬೇಳೆ ಪ್ರಸಾದವನ್ನು ಸ್ವೀಕರಿಸಿ, ಸೇವಿಸಿದ್ದರು.

ನೀರು ಮಜ್ಜಿಗೆ ಪಾನಕ ಸೇವಿಸಿದ ಭಕ್ತಾಧಿಗಳಿಗೆ ಬುಧವಾರ ರಾತ್ರಿ ಹೊಟ್ಟೆನೋವು, ವಾಂತಿ ಭೇದಿ, ಹಾಗೂ ಜ್ವರ ಕಾಣಿಸಿಕೊಂಡಿದೆ, ಆಸ್ವಸ್ಥಗೊಂಡ ಭಕ್ತಾಧಿಗಳು ಗ್ರಾಮದ ಸಮೀಪದಲ್ಲಿ ಇದ್ದ ಎಡಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆ ಪಡೆದರೇ ಮತ್ತೆ ಕೆಲವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು, ಅಸ್ವಸ್ಥ 60 ಮಂದಿ ಪೈಕಿ 40 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು, 20 ಮಂದಿ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ಮಂದಿ ಜಿಲ್ಲಾಸ್ಪತ್ರೆಗೆ
ತೀವ್ರ ಅಸ್ವಸ್ಥಗೊಂಡ ಮಂಗಳ ಗೊಲ್ಲರಹಟ್ಟಿ ಗ್ರಾಮದ ಚಿಕ್ಕತಾಯಮ್ಮ (65), ನಾಗರಾಜು (40), ಬಸವರಾಜು (30) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸತ್ರೆಗೆ ಕಳಿಸಿಕೊಡಲಾಗಿದೆ.

ಚಿಕಿತ್ಸೆ ನೀಡಿದ ಶಾಸಕ
ನೀರು ಮಜ್ಜಿಗೆ ಪಾನಕ ಸೇವಿಸಿ ಅಸ್ಪಸ್ಥಗೊಂಡು ಇಲ್ಲಿನ ಸರ್ಕಾರ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ವೈದ್ಯರು ಆಗಿರುವ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ಪರಿಶೀಲಿಸಿದ ಬಳಿಕ ರೋಗಿಗಳಿಗೆ ಚಿಕಿತ್ಸೆ ನೀಡಿದರು.

Advertisement

ಒಂದು ದಿನ ಮುಂಚೆ ತಯಾರಿಸಿದಕ್ಕೆ ಅವಾಂತರ
ಘಟನೆಗೆ ಸಂಬಧಿಸಿದಂತೆ ಪ್ರತಿಕ್ರಿಯಿಸಿದ ತಾಲೂಕು ಡಾ.ಮರಿಯಪ್ಪ ಕೊಡವತ್ತಿ ಕ್ರಾಸ್‌ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಜಯಂತೋತ್ಸವ ಅಂಗವಾಗಿ ಇಟ್ಟುಕೊಂಡಿದ್ದ ಪೂಜೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದಾರೆ. ಭಕ್ತರಿಗೆ ವಿತರಿಸಲೆಂದು ನೀರು ಮಜ್ಜಿಗೆ ಪಾನಕವನ್ನು ಒಂದು ದಿನ ಮುಂಚಿತವಾಗಿ ಅಂದರೇ ಏ16 ಮಂಗಳವಾರ ರಾತ್ರಿಯಂದು ತಯಾರಿಸಿ ಇಟ್ಟಿದ್ದಾರೆ, ತಯಾರಿಸಿದ ನೀರು ಮಜ್ಜಿಗೆ ಪಾನಕವನ್ನು ಬುಧವಾರ ಕುಡಿದ 60 ಮಂದಿ ಭಕ್ತಧಿಗಳಿಗೆ ಹೊಟ್ಟೆನೋವು, ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದೆ, ನಮಗೆ ವಿಚಾರ ತಿಳಿದು ಅಸ್ವಸ್ಥಗೊಂಡಿದ್ದ ರೋಗಿಗಳನ್ನು ಎಡಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 40 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ, 20 ಮಂದಿ ಇಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ತೀವ್ರ ಅಸ್ವಸ್ಥಗೊಂಡ ಮೂರು ಮಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.

ಪಾನಕ ಕುಡಿದ ಹೆಚ್ಚಿನ ಮಂದಿಗೆ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದೆ, ಇದರ ಸ್ಯಾಪಲ್ ಅನ್ನು ಪ್ರಯೋಗಲಾಯಕ್ಕೆ ಕಳಿಸಿಕೊಡಲಾಗಿದ್ದು ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು, ಡಾ.ನವೀನ್ ರೋಗಿಗಳಿಗೆ ಚಿಕಿತ್ಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next