Advertisement
ಶಶಿಕಾಂತ ಶೆಟ್ಟಿ ಕಾರ್ಕಳದ ಧರ್ಣಪ್ಪ ಶೆಟ್ಟಿ ಮತ್ತು ಲಲಿತಾ ದಂಪತಿಯ ಪುತ್ರ. ಎಸ್‌ಎನ್‌ವಿ ಹಿರಿಯಂಗಡಿ ಪ್ರೌಢಶಾಲೆ ವಿದ್ಯಾಭ್ಯಾಸ ಮಾಡಿ, ಸತೀಶ್ ಎಂ. ಕಾರ್ಕಳ ಅವರಿಂದ ತೆಂಕುತಿಟ್ಟು ನಾಟ್ಯ ಕಲಿತು, ಬಡಗುತಿಟ್ಟಿನ ಆಕರ್ಷಣೆಯಿಂದ ಬಡಗು ಮೇಳಗಳಲ್ಲಿ ಸ್ತ್ರೀ ವೇಷ ಆರಂಭಿಸಿದರು. ಸ್ತ್ರೀ ಸಹಜವಾದ ವಯ್ನಾರ, ಲಾಲಿತ್ಯ ಮತ್ತು ಹಾವಭಾವಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಯಕ್ಷಚಂದ್ರಿಕೆ ಎಂದು ಕರೆಯುತ್ತಿದ್ದಾರೆ. ಮಂದಾರ್ತಿ ಮೇಳದಲ್ಲಿ ನಾಲ್ಕು ವರ್ಷ, ಸಾಲಿಗ್ರಾಮ ಮೇಳದಲ್ಲಿ ಸತತ 15 ವರ್ಷದಿಂದ ಪಾತ್ರ ಮಾಡುತ್ತಿದ್ದಾರೆ.
ಗರತಿ -ಗಯ್ನಾಳಿ ಪಾತ್ರದಲ್ಲಿ ಸೈ ಎನಿಸಿಕೊಂಡಿರುವ ಶಶಿಕಾಂತರವರು ಮೇರೆಗೆ ಈಚೆಗೆ ಪುರುಷ ವೇಷದಲ್ಲೂ ಮಿಂಚುತ್ತಿದ್ದಾರೆ. ಅಂಬೆಯ ಪಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ. ಈಶ್ವರಿ, ಪರಮೇಶ್ವರಿಯಲ್ಲಿ ಹೆಸರು ಗಳಿಸಿದ ಇವರು ದಾಕ್ಷಾಯಿಣಿ, ಚಂದ್ರಮತಿ, ಸಾವಿತ್ರಿ ಗರತಿ ಪಾತ್ರಗಳು, ದೇವಯಾನಿ, ಸತ್ಯಭಾಮೆ ಗಯ್ನಾಳಿ ಪಾತ್ರಗಳನ್ನು ಅಭಿಮಾನಿಗಳು ಮೆಚ್ಚುತ್ತಾರೆ. ಇತ್ತೀಚೆಗೆ ರಾಮ, ಕೃಷ್ಣ, ವಾಲಿ, ಹನುಮಂತನ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀದೇವಿ ಲಲಿತಕಲಾ ಸಂಘ ಸ್ಥಾಪಿಸಿರುವ ಶಶಿಕಾಂತ ಶೆಟ್ಟಿ, ಮಳೆಗಾಲದಲ್ಲಿ ಸಮಾನ ಮನಸ್ಕರು ಸೇರಿಕೊಂಡು ಯಕ್ಷಗಾನ, ಕಲಾವಿದರಿಗೆ ಸಮ್ಮಾನ ಮಾಡುತ್ತಾರೆ. ತಮಗೆ ಮೊದಲು ಬಣ್ಣ ಹಚ್ಚಿದ ಕರಿಯಕಲ್ಲಿನ ರಮೇಶ್ ದೇವಾಡಿಗ ಅವರನ್ನು ಗೌರವಿಸುವ ಮೂಲಕ ತಮ್ಮ ಬದುಕಿನ ಯಶಸ್ಸಿನ ಕಾರಣಕರ್ತರನ್ನು ನೆನಪಿಟ್ಟುಕೊಳ್ಳುವ ಗುಣ ಹೊಂದಿದ್ದಾರೆ.
Related Articles
ಶಶಿಕಾಂತ್ ತನ್ನ ಪಾತ್ರಗಳ ವೇಷ, ಭೂಷಣ ವಸ್ತ್ರವಿನ್ಯಾಸ ಮಾಡಿಕೊಳ್ಳುತ್ತಾರೆ. ಪತ್ನಿ ದೇವಿಕಾ ಕೂಡಾ ನೆರವು ನೀಡುತ್ತಿದ್ದಾರೆ.
Advertisement
ಜಗದೀಶ್ ಅಂಡಾರು