Advertisement

ಕುಂದೇಶ್ವರ ರಸ್ತೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ

01:27 PM Oct 27, 2022 | Team Udayavani |

ಕುಂದಾಪುರ: ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಕುಂದೇಶ್ವರ ರಸ್ತೆ ಅಗಲಗೊಳಿಸುವ ಕಾಮಗಾರಿ ಪುನಾರಂಭವಾಗಿದೆ.

Advertisement

ವಿಸ್ತರಣೆ ಕಾಮಗಾರಿ

ನಗರದ ಮುಖ್ಯ ರಸ್ತೆ ಬದಿಯಲ್ಲಿರುವ ದ್ವಾರದಿಂದ ಕುಂದೇಶ್ವರ ದೇವಸ್ಥಾನವರೆಗೆ ರಸ್ತೆಯನ್ನು ಅಗಲಗೊಳಿಸಬೇಕು. ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬೇಕು. ಚರಂಡಿಯನ್ನು ಮಾಡಬೇಕು ಎಂದು ಸಾರ್ವಜನಿಕರಿಂದ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಪುರಸಭೆ ಜಂಟಿ ಸಭೆ ಕರೆದು ಅಭಿಪ್ರಾಯ ಆಹ್ವಾನಿಸಿತ್ತು. ಅಲ್ಲಿ ಬಂದ ಅಭಿಪ್ರಾಯದಂತೆ ದ್ವಾರ ನವೀಕರಣ, ರಸ್ತೆ ಅಗಲಗೊಳಿಸುವುದು, ಚರಂಡಿ ನಿರ್ಮಿಸುವುದು ಎಂದಾಗಿತ್ತು.

ಚರ್ಚೆ

ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ ಅನುಮೋದನೆಯಾಗಿತ್ತು. ಆದರೆ ಮಂಜೂರಾದ, ಟೆಂಡರ್‌ ಕರೆದ ಮೊತ್ತದ ಕುರಿತು ಊಹಾಪೋಹದ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬರಹದಿಂದ ಪುರಸಭೆ ಸದಸ್ಯರು ನೊಂದು ಸಭೆಯಲ್ಲಿ ಚರ್ಚಿಸಿದ್ದರು. ಬರಹವನ್ನು ಬರೆದವರ ಮೇಲೆ ಕೇಸು ದಾಖಲಿಸುವ ಕುರಿತೂ ಚರ್ಚೆಯಾಗಿತ್ತು. ಪುರಸಭೆ ಆಡಳಿತವೇ ತಲೆತಗ್ಗಿಸುವಂತಾಗಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದರು.

Advertisement

ದೂರು

ಈ ಮಧ್ಯೆಯೇ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ದೂರಿನಲ್ಲಿ ಹೆಸರಿಸಲಾದ ಕಾಮಗಾರಿಗೆ ಪುರಸಭೆಯಿಂದ ಅನುದಾನವೇ ಮಂಜೂರಾಗಿ ಇರಲಿಲ್ಲ, ಟೆಂಡರ್‌ ಕೂಡಾ ಆಗಿರಲಿಲ್ಲ. ಇದರಿಂದಾಗಿ ಲೋಕಾಯುಕ್ತದವರು ತನಿಖೆ ನಡೆಸಿ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದಿದ್ದರು.

ಮರ ಕಡಿತ

ರಸ್ತೆ ಅಗಲಗೊಳಿಸುವ ಕಾಮಗಾರಿಗಾಗಿ ಅನೇಕ ವರ್ಷಗಳಿಂದ ರಸ್ತೆಬದಿಯಲ್ಲಿ ನೆರಳು ಕೊಡುತ್ತಿದ್ದ ಮರಗಳನ್ನು ಕಡಿಯಲಾಗಿದೆ ಎಂದು ದೂರು ಸಲ್ಲಿಸಲಾಗಿತ್ತು. ಆದರೆ ಮರಗಳನ್ನು ಕಡಿದಿಲ್ಲ, ಬದಲಿಗೆ ಅಲ್ಲಿ ಪ್ರತ್ಯೇಕ ವಿಶಿಷ್ಟ ಹಾಗೂ ದೇವರಿಗೆ ಸಂಬಂಧಿಸಿದ ಗಿಡಗಳನ್ನು ನೆಡಲಾಗುತ್ತದೆ ಎಂದು ಸ್ಪಷ್ಟನೆ ನೀಡಲಾಯಿತು.

ಹೀಗೆ ಹಂತ ಹಂತದಲ್ಲೂ ಅಡ್ಡಿಯಾಗುತ್ತಿದ್ದ ಕಾಮಗಾರಿಯ ಎರಡನೇ ಹಂತ ಇದೀಗ ಆರಂಭವಾಗಿದೆ. ಇಂಟರ್‌ಲಾಕ್‌ ಹಾಕುವುದು, ರಸ್ತೆ ಅಗಲಗೊಳಿಸುವುದು, ಚರಂಡಿ ನಿರ್ಮಾಣ ಮಾಡುವುದು ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರಿಂದ ದೇವಸ್ಥಾನವರೆಗೆ ರಸ್ತೆ ಅಗಲಗೊಳ್ಳಲಿದೆ. ಹಬ್ಬದ ದಿನಗಳಲ್ಲಿ, ವಿಶೇಷ ಸಂದರ್ಭದಲ್ಲಿ ಭಕ್ತರ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ ದೊರೆತಂತಾಗಿದೆ. ಅಷ್ಟೆ ಅಲ್ಲ ಕುಂದೇಶ್ವರನ ರಥೋತ್ಸವ ಸಂದರ್ಭದಲ್ಲೂ ನಿರುಮ್ಮಳವಾಗಿ ತೇರೆಳೆಯುವ, ಅದನ್ನು ಕಾಣುವ ಅವಕಾಶ ದೊರೆಯಲಿದೆ.

ಸುದಿನ’ ವರದಿ

ಕುಂದೇಶ್ವರ ರಸ್ತೆ ಅಗಲಗೊಳ್ಳಲಿದೆ ಎಂಬಲ್ಲಿಂದ ತೊಡಗಿ ಬೇರೆ ಬೇರೆ ಬೆಳವಣಿಗೆಗಳು ಆದಾಗ “ಉದಯವಾಣಿ’ “ಸುದಿನ’ ವರದಿ ಮಾಡಿ ಆಡಳಿತವನ್ನು ಎಚ್ಚರಿಸಿ, ಜನರಿಗೆ ನಿಖರ ಮಾಹಿತಿಯನ್ನು ನೀಡುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next