Advertisement

Kundapura: ಮಣೂರಿನ ಉದ್ಯಮಿ ಮನೆಗೆ ಬಂದ ಆಗಂತುಕರು

12:58 AM Jul 29, 2024 | Team Udayavani |

ಕುಂದಾಪುರ: ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್‌ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ. ಈ ತಂಡದ ವರ್ತನೆ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಕೋಟ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

Advertisement

ಈ ಬಗ್ಗೆ ದೂರು ನೀಡಿರುವ ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಅವರು, ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾ ಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್‌ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್‌ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ. ಅಪರಿಚಿತರು ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ವಾಪಸ್‌ ಹೋಗಿರುವುದಾಗಿ ತಿಳಿಸಿದ್ದಾರೆ.

ಘಟನೆ ವಿವರ
ಒಂದು ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೂಂದು ಕಾರಿನಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ಒಬ್ಬ ಹಾಗೂ ಇತರರು ಸೇರಿ ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದೆ. 6 ಜನ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳೆಹನಿಯುತ್ತಿದ್ದಾಗ ಕಾರಿನಿಂದ ಇಳಿದ ತಂಡ ಗೇಟು ತೆರೆಯಲು ಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ ಸದ್ದು ಮಾಡಿದೆ. ಆ ಬಳಿಕ ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್‌ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ಮರಳಿದೆ.

ಭದ್ರತಾ ಸಂಸ್ಥೆಯಿಂದ ಕರೆ
ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಸಿಬಂದಿ ಉದ್ಯಮಿ ಮನೆಯ ಸಿಸಿಟಿವಿಯ ಲೈವ್‌ ವೀಕ್ಷಣೆ ಮಾಡುತ್ತಿ ದ್ದಾಗ ಎರಡು ವಾಹನಗಳಲ್ಲಿ ಆಗಂತು ಕರು ಆಗಮಿಸಿದ್ದುದು ಗೊತ್ತಾಗಿದೆ. ಕೂಡಲೇ ಸಿಬಂದಿಯು ಮನೆಯವರಿಗೆ ಕರೆ ಮಾಡಿದ್ದು, ಆ ಕರೆಯನ್ನು ಮನೆ ಯವರು ಸ್ವೀಕರಿಸಲಿಲ್ಲ. ಬಳಿಕ ಸಂಸ್ಥೆಯ ಮಾಲಕ ಕೃಷ್ಣ ಕರೆ ಮಾಡಿದಾಗ ಮನೆಯವರು ಕರೆ ಸ್ವೀಕರಿಸಿದ್ದು, ಮನೆಯ ಹೊರಗಡೆ ನಡೆಯುತ್ತಿರುವ ಸಂಗತಿಯನ್ನು ತಿಳಿಸಿದ್ದಾರೆ. ಆಗಮಿಸಿದ ತಂಡ ಐಟಿ, ಇ.ಡಿ.ಯವರು ಆಗಿರಬಹುದು ಎಂಬ ಅನುಮಾನ ಮನೆಯವರಲ್ಲಿತ್ತು.

ಮನೆಯವರು ಬಾಗಿಲು ತೆರೆಯದ ಕಾರಣ ಮರಳಿದ ಆಗಂತುಕರು ಸಾಸ್ತಾನ ಟೋಲ್‌ ಮಾರ್ಗದಲ್ಲಿ ಸಾಗದೆ, ಬಾಕೂìರು ರಸ್ತೆ ಮೂಲಕ ಟೋಲ್‌ ತಪ್ಪಿಸಿ ಹೋಗಿದೆ. ವಾಹನ ಅತಿವೇಗದಲ್ಲಿ ಸಾಗಿದೆ ಎಂದೂ ಹೇಳಲಾಗುತ್ತಿದೆ. ಕಾರಿನ ನಂಬರ್‌ ಪ್ಲೇಟ್‌ಗಳ ಗುರುತು ಹಚ್ಚಲೂ ಸಾಧ್ಯವಿಲ್ಲದಂತೆ ತಂಡ ಸಿದ್ಧತೆ ಮಾಡಿತ್ತು ಎನ್ನಲಾಗಿದೆ.

Advertisement

ತಪ್ಪಿದ ಅನಾಹುತ
ಸೈನ್‌ ಇನ್‌ ಸೆಕ್ಯುರಿಟಿಯ ಸಿಸಿಟಿವಿ ಲೈವ್‌ ಮಾನಿಟರಿಂಗ್‌ನಿಂದಾಗಿ ಸಂಭಾವ್ಯ ಅನಾಹುತವೊಂದು ತಪ್ಪಿದೆ. ಈವರೆಗೆ 27ಕ್ಕೂ ಅಧಿಕ ಅಪರಾಧಿಕ ಪ್ರಕರಣಗಳನ್ನು ಲೈವ್‌ ಮಾನಿಟರಿಂಗ್‌ ಮೂಲಕ ತಡೆದ ಈ ಸಂಸ್ಥೆ ಈಚೆಗೆ ಕಮಲಶಿಲೆ ಗೋ ಕಳ್ಳತನ ಹಾಗೂ ಮುಳ್ಳಿಕಟ್ಟೆಯಲ್ಲಿ ಸಹಕಾರಿ ಸಂಸ್ಥೆಯ ಕಳ್ಳತನ ಯತ್ನವನ್ನು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ವಿಫಲಗೊಳಿಸಿತ್ತು. ಎರಡೂ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಯಾರಿರಬಹುದು?
ಬಂದವರು ಯಾರು ಎನ್ನುವ ನಿಟ್ಟಿನಲ್ಲಿ ಪೊಲೀಸ್‌ ತನಿಖೆ ನಡೆಯುತ್ತಿದೆ. ಎರಡು ಪ್ರತ್ಯೇಕ ತಂಡಗಳು ಬೇರೆ ಬೇರೆ ಕಡೆ ಹೋಗಿ ತನಿಖೆ ನಡೆಸುತ್ತಿವೆ. ದರೋಡೆ ಮಾಡುವ ಉದ್ದೇಶ ಇತ್ತೇ ಎನ್ನುವುದು ಸದ್ಯದ ಅನುಮಾನ. ಐಟಿ, ಇಡಿ ಮೊದಲಾದ ಸರಕಾರಿ ಇಲಾಖೆ ಅಧಿಕಾರಿಗಳೇ ಆಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆಸುತ್ತಿದ್ದರು ಅಥವಾ ಬಾಗಿಲು ತೆರೆಯಲು ಬೇಕಾದ ಸೂಕ್ತ ಕಾನೂನು ವ್ಯವಸ್ಥೆ ಮಾಡುತ್ತಿದ್ದರು. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವ ಕಾರಣ ಆಗಮಿಸಿದ್ದು ಸರಕಾರಿ ಇಲಾಖೆ ತನಿಖಾಧಿಕಾರಿಗಳು ಅಲ್ಲ ಎನ್ನುವುದು ಬಹುತೇಕ ಖಚಿತ. ಹಾಗಾದರೆ ಆಗಮಿಸಿದ್ದು ಯಾರು, ಯಾಕಾಗಿ ಬಂದರು ಎಂಬ ಪ್ರಶ್ನೆಗಳು ಜೀವಂತವಿವೆ.

Advertisement

Udayavani is now on Telegram. Click here to join our channel and stay updated with the latest news.

Next