Advertisement

ಕತ್ತಲಲ್ಲಿ ವೃತ್ತಗಳು, ಸಂಪರ್ಕ ಕೂಡದ ರಸ್ತೆಗಳು

07:40 PM Oct 10, 2021 | Team Udayavani |

ಕುಂದಾಪುರ: ನಗರಕ್ಕೆ ಸ್ವಾಗತ ಕೋರುವ, ನಗರದ ಪ್ರವೇಶಿಕೆಯಾದ ಶಾಸ್ತ್ರೀ ಸರ್ಕಲ್‌ ರಾತ್ರಿ ವೇಳೆ ಕತ್ತಲಲ್ಲಿ ಇರುತ್ತದೆ. ಇಲ್ಲಿ ಅಳವಡಿಸಿದ ಬೃಹತ್‌ ಹೈ ಮಾಸ್ಟ್‌ ದೀಪಗಳು ಕಳೆದ ಕೆಲವು ತಿಂಗಳಿನಿಂದ ಉರಿಯುತ್ತಿಲ್ಲ. ಇದರಿಂದಾಗಿ ಬೇರೆ ಬೇರೆ ಊರುಗಳಿಂದ ನಗರಕ್ಕೆ ವಾಹನಗಳಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕತ್ತಲ ಲೋಕಕ್ಕೆ ಸ್ವಾಗತ ಕೋರಿದಂತಾಗುತ್ತದೆ.

Advertisement

ಪ್ರಧಾನ ವೃತ್ತವೇ ಕತ್ತಲಲ್ಲಿ ಇರುವ ಕಾರಣ ವಿವಿಧ ಅಪರಾಧ ಚಟುವಟಿಕೆಗಳಿಗೂ ಎಡೆ ಮಾಡಿಕೊಟ್ಟಂತಾಗುತ್ತದೆ. ಅಂಗಡಿಗಳು ತೆರೆದಿದ್ದಾಗ ಇಲ್ಲಿ ಅಷ್ಟೊಂದು ಸಮಸ್ಯೆ ಗೊತ್ತಾಗುವುದಿಲ್ಲ. ಏಕೆಂದರೆ ಅವುಗಳ ಬೆಳಕೇ ತುಂಬಿರುತ್ತದೆ. ಆದರೆ ರಾತ್ರಿ ಎಂಟಾಗುತ್ತಿದ್ದಂತೆಯೇ ಒಂದೊಂದೇ ಮಳಿಗೆಗಳು ಬಾಗಿಲು ಹಾಕಲಾರಂಭಿಸಿ ರಾತ್ರಿ 10ರ ವೇಳೆಗೆ ಶಾಸ್ತ್ರೀ ವೃತ್ತದ ಆಜೂಬಾಜು ಪೂರ್ಣ ಕತ್ತಲಾಗಿರುತ್ತದೆ.

ಪೌಲ್‌ ಹ್ಯಾರಿಸ್‌ ವೃತ್ತ
ಸ್ಥಳೀಯವಾಗಿ ಪಾರಿಜಾತ ವೃತ್ತ ವೃತ್ತ ಎಂದೂ ಕರೆಯಲ್ಪಡುವ ಪೌಲ್‌ ಹ್ಯಾರಿಸ್‌ ವೃತ್ತದಲ್ಲಿ ಕೂಡಾ ರಾತ್ರಿ ವೇಳೆ ಹೈ ಮಾಸ್ಟ್‌ ದೀಪದ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದ ಪ್ರಧಾನ ಪ್ರವೇಶಿಕೆ ಶಾಸ್ತ್ರೀ ವೃತ್ತವನ್ನು ಹೇಗೋ ಕತ್ತಲಲ್ಲಿ ದಾಟಿ ಬಂದು ನಂತರ ದೊರೆಯುವ ಬೀದಿ ದೀಪದ ಬೆಳಕು ಆಶ್ರಯಿಸಿದರೂ ಆ ಬಳಿಕ ಸಿಗುವ ಪೌಲ್‌ ಹ್ಯಾರಿಸ್‌ ವೃತ್ತ ಮತ್ತೆ ಕತ್ತಲ ಕಡೆಗೆ ಬೆಟ್ಟು ಮಾಡುತ್ತದೆ. ದೀಪಗಳ ನಿರ್ವಹಣೆ ಪುರಸಭೆ ಪಾಲಿಗೆ ಸವಾಲಾಗಿದೆ.

ಸಂಪರ್ಕ ರಸ್ತೆಗಳು
ಸರ್ವಿಸ್‌ ರಸ್ತೆಯನ್ನು ಕೂಡುವ ಪುರಸಭೆ ವ್ಯಾಪ್ತಿಯ ರಸ್ತೆಗಳು ಸರಿಯಾಗಿ ಕೂಡುವುದೇ ಇಲ್ಲ. ಹೆಸರಿಗಷ್ಟೇ ಕೂಡು ರಸ್ತೆಗಳಾಗಿದ್ದು ಸರ್ವಿಸ್‌ ರಸ್ತೆಗೆ ಕೂಡುವಲ್ಲಿ ವಾಹನಗಳನ್ನು ಸರ್ವಿಸ್‌ ರಸ್ತೆಯಿಂದ ಇಳಿಸುವಂತಿಲ್ಲ, ಕೂಡು ರಸ್ತೆಯಿಂದ ಸರ್ವಿಸ್‌ ರಸ್ತೆಗೆ ಕೊಂಡೊಯ್ಯುವಂತಿಲ್ಲ ಎಂಬಂತಹ ಸ್ಥಿತಿ ಇದೆ. ಅತಿ ಹೆಚ್ಚು ವಾಹನಗಳು ಓಡಾಟ ನಡೆಸುವ, ವ್ಯಾಸರಾಜ ಮಂದಿರವೂ ಸೇರಿದಂತೆ, ಮೆಸ್ಕಾಂ, ಎಲ್‌ಐಸಿ ಮೊದಲಾದ ಹತ್ತಾರು ಸರಕಾರಿ ಕಚೇರಿಗಳಿರುವ ಎಲ್‌ಐಸಿ ರಸ್ತೆಯ ಅಭಿವೃದ್ಧಿ ಇನ್ನೂ ಕನಸಿನ ಮಾತಾಗಿದೆ. ಸರ್ವಿಸ್‌ ರಸ್ತೆಗೆ ಕೂಡುವಲ್ಲಿ ಹದಗೆಟ್ಟು ಅದೆಷ್ಟೋ ಸಮಯಗಳಾಗಿವೆ. ಅನೇಕ ಸಾಮಾನ್ಯ ಸಭೆಗಳಲ್ಲಿ ಪುರಸಭೆ ಸದಸ್ಯರ ಮೂಲಕ ಚರ್ಚೆಗಳಾಗಿವೆ. ಆದರೆ ಈವರೆಗೆ ದೊರೆತದ್ದು ಭರವಸೆ ಮಾತ್ರ. ಕೆಲಸ ಆಗಲೇ ಇಲ್ಲ.

ನಂದಿಬೆಟ್ಟು ರಸ್ತೆ
ಹೆದ್ದಾರಿಯ ಕ್ಯಾಟಲ್‌ ಅಂಡರ್‌ಪಾಸ್‌ ಎದುರು ಇರುವ ನಂದಿಬೆಟ್ಟು ರಸ್ತೆಯ ಸಂಪರ್ಕವೂ ಸರ್ವಿಸ್‌ ರಸ್ತೆಯಿಂದ ತೀರಾ ನದುರಸ್ತಿಯಲ್ಲಿದೆ. ಸರ್ವಿಸ್‌ ರಸ್ತೆಯೇ ರಾಷ್ಟ್ರೀಯ ಹೆದ್ದಾರಿಯಾಗಿದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಈಗಲೂ ಅದೇ ಸ್ಥಿತಿ ಇದೆ. ಅಂತೆಯೇ ಶ್ರೀದೇವಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಎರಡೂ ಬದಿ ತಡೆ ಇಲ್ಲದ ಕಾರಣ ಅನೇಕ ವಾಹನಗಳು ಪ್ರತಿನಿತ್ಯ ಎಂಬಂತೆ ಚರಂಡಿ ಬೀಳುತ್ತಿರುತ್ತವೆ. ಈ ಎಲ್ಲ ರಸ್ತೆಗಳ ಸಂಪರ್ಕ ಸರಿಪಡಿಸುವ ಕುರಿತು ಪುರಸಭೆ ಗಮನಹರಿಸಬೇಕಿದೆ. ಸರ್ವಿಸ್‌ ರಸ್ತೆಯಿಂದ ನಗರದ ಸಂಪರ್ಕ ರಸ್ತೆಗೆ ಸರಿಯಾದ ಸಂಪರ್ಕ ನೀಡಬೇಕಾದುದು ಹೆದ್ದಾರಿ ಇಲಾಖೆಯ ಅಧೀನಕ್ಕೆ ಬರುತ್ತದೆ. ಗುತ್ತಿಗೆದಾರರಿಗೂ ಅನ್ವಯವಾಗುತ್ತದೆ. ಆದರೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಕುಂದಾಪುರ ಪುರಸಭೆಗೂ ಅಷ್ಟಕ್ಕಷ್ಟೆ ಎಂಬಂತಿದೆ. ಪುರಸಭೆ ಆಡಳಿತ ಹೇಳಿದ ಯಾವ ಮಾತಿಗೂ, ಮನವಿಗೂ, ಬೇಡಿಕೆಗೂ ಹೆದ್ದಾರಿ ಪ್ರಾಧಿಕಾರ ಬೆಲೆಯೇ ನೀಡುತ್ತಿಲ್ಲ. ಇದರಿಂದಾಗಿ ಜನರ ಗೋಳಿಗೆ ಪರಿಹಾರ ವಿಳಂಬವಾಗುತ್ತಿದೆ.

Advertisement

ಇದನ್ನೂ ಓದಿ:ಖಾಸಗೀಕರಣದಿಂದ ಉದ್ಯೋಗ ಹಾನಿ: ಜಬ್ಟಾರ್‌

ವಾಹನ ಹೋಗದು
ಕುಂದೇಶ್ವರ ದ್ವಾರದ ಎದುರು ರಾಧಾ ಮೆಡಿಕಲ್‌ ಬಳಿಯಿಂದ ಹೋಗಿ ಸರ್ವಿಸ್‌ ರಸ್ತೆಗೆ ಕೂಡುವ ರಸ್ತೆಯಲ್ಲಂತೂ ಸರ್ವಿಸ್‌ ರಸ್ತೆಗೆ ಹೋಗುವುದು ಅಥವಾ ಸರ್ವಿಸ್‌ ರಸ್ತೆಯಿಂದ ಇಳಿಸುವುದು ಶಾಪವೇ ಆಗಿದೆ. ರಿಕ್ಷಾದವರಂತೂ ಯಾಕಾದರೂ ಪ್ರಯಾಣಿಕರು ಈ ರಸ್ತೆ ಮೂಲಕ ಪ್ರಯಾಣ ಅಪೇಕ್ಷಿಸುತ್ತಾರೋ ಎಂದು ಶಾಪ ಹಾಕುವಂತಾಗಿದೆ. ದ್ವಿಚಕ್ರ ವಾಹನಗಳು ಆಯ ತಪ್ಪಿ ಅಪಘಾತಕ್ಕೀಡಾಗುತ್ತಿವೆ. ಮುಕ್ಕಾಲು ಅಡಿಗಿಂತ ಹೆಚ್ಚು ಎತ್ತರದ ಕಾಂಕ್ರಿಟ್‌ ರಸ್ತೆ ತುಂಡಾಗಿ ಎಲ್ಲ ಬಗೆಯ ವಾಹನಗಳ ಅಡಿತಪ್ಪುತ್ತಿವೆ. ಇದರಿಂದ ಚಾಲಕರಿಗೆ ಒಂದೆಡೆ ಕಷ್ಟವಾದರೆ ಅದರೊಳಗೆ ಕುಳಿತವರಿಗೆ ಇನ್ನೊಂದು ಬಗೆಯ ಕಷ್ಟ. ಪುರಸಭೆಯಂತೂ ನಾನಾ ಕಾರಣಗಳನ್ನು ಹೇಳುತ್ತಾ ತಾತ್ಕಾಲಿಕವಾಗಿಯೂ ಇದನ್ನು ದುರಸ್ತಿಗೊಳಿಸುವ ಕುರಿತು ಅಸಡ್ಡೆ ತಳೆದಿದೆ ಎಂದೇ ಬಹಿರಂಗ ಆರೋಪ ಕೇಳಿಬರುತ್ತಿದೆ.

ಸುಳ್ಳು ಭರವಸೆ ನಿಲ್ಲಿಸಲಿ
ಪುರಸಭೆಯವರು ಸುಮ್ಮನೆ ಸುಳ್ಳು ಭರವಸೆ ಕೊಡುವುದು ನಿಲ್ಲಿಸಬೇಕು. ಯಾವಾಗ ದೂರು ನೀಡಿದರೂ, ಸಂಬಂಧಪಟ್ಟವರ ಗಮನಕ್ಕೆ ತಂದರೂ ಮಾಡಲಾಗುವುದು ಎನ್ನುತ್ತಾರೆ ವಿನಾ ಮಾಡಿ ತೋರಿಸಿವುದಿಲ್ಲ. ಇದರಿಂದಾಗಿ ಅವರ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ.
– ರಾಜೇಶ್‌, ರಿಕ್ಷಾ ಚಾಲಕರು

ಗಮನಕ್ಕೆ ತರಲಾಗಿದೆ
ಹೆದ್ದಾರಿ ಪ್ರಾಧಿಕಾರದವರ ಜತೆ ಮಾತನಾಡಲಾಗಿದ್ದು ಈ ರಸ್ತೆಗಳ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಯಲಿದೆ. ಸರ್ಕಲ್‌ನ ಹೈ ಮಾಸ್ಟ್‌ ದೀಪದ ವ್ಯವಸ್ಥೆ ಸರಿಪಡಿಸಲಾಗುವುದು.
 - ವೀಣಾ ಭಾಸ್ಕರ ಮೆಂಡನ್‌,
ಅಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next