Advertisement
ವಿಳಂಬ :
Related Articles
Advertisement
ಪ್ರವೇಶಿಕೆ:
ಕುಂದಾಪುರ ನಗರಕ್ಕೆ ಫ್ಲೈಓವರ್ ಆರಂಭಕ್ಕೆ ಮುನ್ನ ಪ್ರವೇಶ ನೀಡಬೇಕೆಂದು ಅನೇಕ ಸಮಯಗಳಿಂದ ಹೋರಾಟ ನಡೆಯುತ್ತಿದೆ. ಪುರಸಭೆ ವ್ಯಾಪ್ತಿ ಆರಂಭವಾಗುವ ಮುನ್ನವೇ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಅವಕಾಶ ನೀಡಲಾಗಿದೆ. ಅದಾದ ಬಳಿಕ ಪುರಸಭೆ ವ್ಯಾಪ್ತಿ ಮುಗಿಯುವುದಕ್ಕಿಂತ ತುಸುವೇ ಮೊದಲು ಹೆದ್ದಾರಿಯಿಂದ ಇಳಿಯಲು ಅವಕಾಶ ನೀಡಲಾಗಿದೆ. ಹೆದ್ದಾರಿ ವಾಹನಗಳು ಕುಂದಾಪುರ ನಗರಕ್ಕೆ ಪ್ರವೇಶ ಪಡೆಯುವುದು ಗೊಂದಲಕ್ಕೀಡು ಮಾಡುತ್ತದೆ. ಅರಿಯದೇ ಹೆದ್ದಾರಿಯಲ್ಲಿ ಮುಂದುವರಿದರೆ ಕುಂದಾಪುರ ನಗರದೊಳಗೆ ಬರುವುದೇ ತ್ರಾಸದಾಯಕ ಎಂಬ ಸ್ಥಿತಿ ಇದೆ. ಪುರಸಭೆ ವ್ಯಾಪ್ತಿಯ ಜನರಿಗೆ, ವರ್ತಕರಿಗೆ ಇದರಿಂದ ಸಮಸ್ಯೆಯಾಗಿದೆ. ವ್ಯವಹಾರಗಳೆಲ್ಲ ಇಳಿಮುಖವಾಗಿದೆ. ನಗರಕ್ಕೆ ಜನರ ಬರುವಿಕೆ ಕಡಿಮೆಯಾಗಿದೆ. ಅವಶ್ಯವಿದ್ದರೆ, ತುರ್ತು ಕಾರ್ಯವಿದ್ದರೆ ಜನ ಬಂದೇ ಬರುತ್ತಾರೆ. ಆದರೆ ಹೆದ್ದಾರಿಯಲ್ಲಿ ಹೋಗುವವರು ಹೊಟೇಲ್, ಬಟ್ಟೆ ಮಳಿಗೆ, ಪುಸ್ತಕ ಪತ್ರಿಕೆ ಖರೀದಿ, ಆಭರಣ ಮಳಿಗೆ ಅಥವಾ ಇನ್ಯಾವುದಾದರೂ ವ್ಯಾಪಾರಕ್ಕಾಗಿ ಬರುವವರು ನೇರ ಹೆದ್ದಾರಿ ಮೂಲಕ ಹೋಗುತ್ತಾರೆ. ಹೀಗೆ ಬಂದು ಹಾಗೆ ಹೋಗುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಮೊದಲೇ ಲಾಕ್‌ಡೌನ್ ಮತ್ತೂಂದು ಮಗದೊಂದು ಎಂದು ವ್ಯಾಪಾರದಲ್ಲಿ ಏರುಗತಿ ಕಾಣುತ್ತಿದೆಯಷ್ಟೆ. ಅದರ ಮಧ್ಯೆಯೇ ಫ್ಲೈಓವರ್ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಪತ್ರ:
ಸಂಸದೆ ಶೋಭಾ ಕರಂದ್ಲಾಜೆ ಸ್ಪಂದಿಸಿದ್ದರು. ಸಚಿವೆಯಾದ ಬಳಿಕ ಈಚೆಗೆ ಕುಂದಾಪುರಕ್ಕೆ ಭೇಟಿ ನೀಡಿದ್ದಾಗ ಗಮನ ಸೆಳೆದಾಗ ಸ್ಪಂದಿಸಿ, ಶಾಸಕರು ಕೂಡ ತಿಳಿಸಿದ್ದು ಹೆದ್ದಾರಿ ಇಲಾಖೆಗೆ ಸೂಚಿಸುವುದಾಗಿ ಹೇಳಿದ್ದರು. ಇದೀಗ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕರಿಗೆ ಪತ್ರ ಬರೆದು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ತೆರಳಲು ಅವಕಾಶ ನೀಡಲು ಪರಿಶೀಲಿಸಲು ಸೂಚಿಸಿದ್ದಾರೆ.
ಹೋರಾಟ :
ಪುರಸಭೆ ಸದಸ್ಯರು ಅನೇಕ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆಸಿ ನಗರದೊಳಗೆ ಪ್ರವೇಶ ನೀಡಲು ಆಗ್ರ ಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿಯೂ ಮನವಿ ನೀಡಿದ್ದರು. ಸಾರ್ವಜನಿಕರು ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ನೀಡಿದ್ದರು.ಎಲ್‌ಐಸಿ, ಡಿವೈಎಸ್‌ಪಿ , ಮೆಸ್ಕಾಂ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಇಲಾಖೆ ಸೇರಿದಂತೆ 15ಕ್ಕೂ ಅಧಿಕ ಸರಕಾರಿ ಕಚೇರಿಗಳಿದ್ದು, ಕಲ್ಯಾಣಮಂಟಪ ಸೇರಿದಂತೆ ತೆರಳಲು ಸಾರ್ವಜನಿಕರಿಗೆ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಹೋಗಲು ಅವಕಾಶ ನೀಡದೇ ಇದ್ದರೆ ತೊಂದರೆಯಾಗುತ್ತದೆ. ಈಗ ಹಾಕಿದ ಕಬ್ಬಿಣದ ಗೇಟನ್ನು ಸಾಹಸದ ಮೂಲಕ ದಾಟಿ ಹೋಗುವ ಜನ ಆಯತಪ್ಪಿ ಬೀಳುತ್ತಿದ್ದಾರೆ. ಮಹಿಳೆಯರ ಪಾಡು ಹೇಳತೀರದು. ಬಸ್ರೂರು ಮೂರುಕೈ ಅಂಡರ್‌ಪಾಸ್ ಮುಗಿದು, ಶಾಸ್ತ್ರಿ ಸರ್ಕಲ್ ಫ್ಲೈಓವರ್ ಆರಂಭಕ್ಕೆ ಮುನ್ನ ಬೊಬ್ಬರ್ಯನಕಟ್ಟೆ ಬಳಿ ಸರ್ವಿಸ್ ರಸ್ತೆಗೆ ಹೋಗಲು ಅವಕಾಶ ಬೇಕಿದೆ. ಇದೇ ರೀತಿ ವಿರುದ್ಧ ದಿಕ್ಕಿನಲ್ಲಿಯೂ ಬೇಕು. ಇಂತಹ ಪ್ರವೇಶಾವಕಾಶಗಳು ಮಂಗಳೂರಿನಿಂದ ಕುಂದಾಪುರವರೆಗೆ ಅನೇಕ ಕಡೆ ಇದೆ.
ಸಚಿವರ ಕಡೆಯಿಂದ ಬಂದ ಸೂಚನೆಯಂತೆ ಹೆದ್ದಾರಿ ಇಲಾಖೆಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದೇವೆ. -ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ