ಕುಂದಾಪುರ : ಪುರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವಾಗ ನಾಮನಿರ್ದೇಶಿತ ಸದಸ್ಯೆ ಪುಷ್ಪ ಶೇಟ್ ಅವರು ತಮ್ಮ ಮೊಬಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಆಕ್ಷೇಪಿಸಿ ನಡೆದ ವಾಕ್ಸಮರದಲ್ಲಿ ವಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.
ಇದೆಂತಹ ಸಭೆ. ನಾಮನಿರ್ದೇಶಿತ ಸದಸ್ಯರು ಸದನದಲ್ಲಿ ಅಗೌರವ ತೋರುತ್ತಿದ್ದಾರೆ. ಗಂಭೀರ ಚರ್ಚೆ ನಡೆಯುತ್ತಿರುವಾಗ ವಿಡಿಯೋ ಮಾಡುವವರು ಎಂಥ ಸದಸ್ಯರು. ಇಂತಹ ಸಭೆಯಲ್ಲಿ ನಾವು ಕೂರಬೇಕಾ ಎಂದು ಪ್ರಶ್ನಿಸಿದ ಸದಸ್ಯರಾದ ಚಂದ್ರಶೇಖರ್ ಖಾರ್ವಿ ಹಾಗೂ ಹಿರಿಯ ಸದಸ್ಯೆ ದೇವಕಿ ಸಣ್ಣಯ್ಯ ಸಭೆಯಿಂದ ಹೊರನಡೆದರು.
ಮಧ್ಯಪ್ರವೇಶಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್, ವಿಡಿಯೋ ಮಾಡಬೇಡಿ ಎಂದು ಸೂಚಿಸಿದಾಗ ಸಭೆ ನಡೆಯುವಾಗ ವಿಡಿಯೋ ತೆಗೆಯಲಿಕ್ಕಿಲ್ಲ ಎಂದು ಕಾನೂನು ಮಾಡಿ ಎಂದು ನಾಮನಿರ್ದೇಶಿತ ಸದಸ್ಯೆ ಪುಷ್ಪಾ ಶೇಟ್ ವಾಗ್ವಾದ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಂದ್ರಶೇಖರ್ ಖಾರ್ವಿ, ಚುನಾಯಿತ ಸದಸ್ಯರು ಹೇಳಿದ ಮೇಲೆಯೂ ನಾಮನಿರ್ದೇಶಿತ ಸದಸ್ಯರು ವಾಗ್ವಾದ ನಡೆಸುತ್ತಾರೆಂದರೆ ಈ ಸದನಕ್ಕೆ ಗೌರವ ಇಲ್ಲವೇ? ಕಳೆದ ಬಾರಿ ನಾನು ಫೋಟೋ ತೆಗೆದಾಗ ದೊಡ್ಡ ಮಟ್ಟದ ಚರ್ಚೆ ನಡೆದು ವಿಡಿಯೋ ಡಿಲೀಟ್ ಮಾಡಿಸಿದ್ದೀರಿ. ಈಗಲೂ ವಿಡಿಯೋ ಡಿಲೀಟ್ ಮಾಡಿಸಿ. ನಾಮನಿರ್ದೇಶಿತ ಸದಸ್ಯರ ಬಾಯಿ ಮುಚ್ಚಿಸಲು ನಿಮಗೆ ಸಾಧ್ಯವಾಗಿಲ್ಲವೆಂದರೆ ಏನು ಆಡಳಿತ ಕೊಡುತ್ತೀರಿ. ಇಂತಹ ಸಭೆಯಲ್ಲಿ ಕೂರಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಭಾತ್ಯಾಗ ಮಾಡಿದರು.
ಆಡಳಿತ ಪಕ್ಷದ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಎದ್ದು ಹೋಗದಂತೆ, ಸಭೆಯಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿಕೊಂಡರೂ ಕೇಳಲಿಲ್ಲ.
ಇದನ್ನೂ ಓದಿ : ರಾಷ್ಟ್ರ ಮಟ್ಟದ ಸಂಸ್ಕೃತ ಒಲಂಪಿಯಾಡ್ ಸ್ಫರ್ಧೆಯಲ್ಲಿ ಫಸ್ಟ್ ರ‍್ಯಾಂಕ್ ಗಳಿಸಿದ ಪ್ರಜ್ಞಾ ಭಟ್
ಈ ಬಗ್ಗೆ ಮಾತನಾಡಿದ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಮಾತನಾಡಿ, ಕಳೆದ ಬಾರಿ ಒಂದು ಘಟನಾವಳಿ ನಡೆದಿತ್ತು. ಬಿಟ್ಟರೆ ನನ್ನ ಅನುಭವದ ಪ್ರಕಾರ ಸದಸ್ಯರು ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ನಡೆದಿಲ್ಲ. ಇದು ಸರಿಯಲ್ಲ. ಇಂತಹ ಘಟನೆಗಳಿಂದ ಚರ್ಚೆ ದಾರಿ ತಪ್ಪುತ್ತದೆ, ವಿನಃ ಏನನ್ನೂ ಸಾಽಸಲು ಸಾಧ್ಯವಿಲ್ಲ. ವೈಯಕ್ತಿಕ ಗಲಾಟೆಗಳನ್ನು ಸದನದೊಳಗೆ ತರುವುದು ಸರಿಯಲ್ಲ. ನಮ್ಮ ನಡತೆಗಳನ್ನು ಮಾಧ್ಯಮದ ಮೂಲಕ ಜನರು ಗಮನಿಸುತ್ತಾರೆ ಎಂದರು. ಬಳಿಕ ಹೊರಗೆ ಹೋಗಿ ಇಬ್ಬರೂ ಸದಸ್ಯರ ಮನವೊಲಿಸಿ, ಕರೆದುಕೊಂಡು ಬಂದರು.