Advertisement

ಕುಂದಾಪುರ ಪುರಸಭೆ ವಿಶೇಷ ಸಭೆ : ಹೊರೆಯಾಗದ ಕರ ಏರಿಕೆಗೆ ಪುರಸಭೆ ನಿರ್ಧಾರ

10:38 PM Mar 15, 2021 | Team Udayavani |

ಕುಂದಾಪುರ: ಜನರ ಹಾಗೂ ವಿಪಕ್ಷದ ಬೇಡಿಕೆಗೆ ಸ್ಪಂದಿಸಿದ ಪುರಸಭೆ ಆಡಳಿತ ಹೊರೆಯಾಗದ ಕರ ಏರಿಕೆಗೆ ಮುಂದಾ ಗಿದೆ.
ಸೋಮವಾರ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಸ್ತಿ ತೆರಿಗೆ ಏರಿಕೆ ಕುರಿತು ಸರಕಾರದ ಸುತ್ತೋಲೆಯನ್ನು ಅನುಮೋದಿಸಿ ಕಳುಹಿಸುವ, ತೆರಿಗೆ ಏರಿಸುವ ಜವಾಬ್ದಾರಿ ಹೊರಿಸಲಾಗಿತ್ತು.

Advertisement

ಸಭಾತ್ಯಾಗ ಸರಿಯಲ್ಲ
ಮೋಹನದಾಸ ಶೆಣೈ ಮಾತನಾಡಿ, ಕಾಂಗ್ರೆಸ್‌ನವರು ಕಳೆದ ಸಭೆಯಲ್ಲಿ ತೆರಿಗೆ ವಿಚಾರ ಪ್ರಸ್ತಾವಕ್ಕೆ ಬರುವ ಮುನ್ನವೇ ಸಭಾತ್ಯಾಗ ಮಾಡಿದರು. ಅವರಿಗಾಗಿಯೇ ವಿಶೇಷ ಸಭೆ ಮಾಡಿದಾಗಲೂ ಬಹಿಷ್ಕಾರ ಹಾಕಿದ್ದಾರೆ. ಭಾಗವಹಿಸಿದರೆ ಚರ್ಚೆಗೆ ಅವಕಾಶ ಇತ್ತು. ಎಲ್ಲಿ ಹೆಚ್ಚಳ ಇತ್ಯಾದಿ ಗಮನಿಸಿ ಸಲಹೆಗಳನ್ನು ನೀಡಬಹುದಿತ್ತು ಎಂದರು.

ಜನರಿಗೆ ಸ್ಪಷ್ಟ ಮಾಹಿತಿ ನೀಡಿ
ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಯೇ ತೆರಿಗೆ ಏರಿಸಬೇಕು. ಕಳೆದ ಬಾರಿ ತೆರಿಗೆ ಏರಿಸಿದ್ದಲ್ಲದೆ ಆರೋಗ್ಯ ಕರವನ್ನೂ ಏರಿಸಲಾಗಿದೆ. ವರ್ಷವೂ ಪೂರ್ತಿಯಾಗದೆ ಈಗ ಮತ್ತೆ ಏರಿಸಿದರೆ ಜನರಿಗೆ ಹೊರೆಯಾಗುತ್ತದೆ. ಅದನ್ನೇ ಮುಂದುವರಿಸಲು ಸಾಧ್ಯವೇ, ಸರಕಾರಿ ಆದೇಶ ಉಲ್ಲಂ ಸದೆ ಪುರಸಭೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಮಾಧ್ಯಮಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕವಾದರೂ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದರು.

ಜನಪ್ರತಿನಿಧಿಗಳ ಲಕ್ಷಣ ಅಲ್ಲ
ಗಿರೀಶ್‌ ಜಿ.ಕೆ., ವಿಪಕ್ಷ ಬಹಿಷ್ಕಾರ ಸರಿ ಅಲ್ಲ. ಸಾರ್ವಜನಿಕ ಕಾಳಜಿ ಇದ್ದರೆ ಸಭೆಗೆ ಬಂದು ಚರ್ಚಿಸಬೇಕಿತ್ತು. ಮನೆಯಲ್ಲಿ ಕುಳಿತು ಬಹಿಷ್ಕಾರ ಅಂದರೆ ಅದು ಪಲಾಯನವಾದದಂತೆ ಎಂದರು. ಖಾಲಿ ಜಾಗಕ್ಕೆ ತೆರಿಗೆ ಏರಿಕೆ ಸರಿ ಅಲ್ಲ. ಈಗ ಏರಿಸದೆ ಮುಂದಿನ ದಿನಗಳಲ್ಲಿ ಏರಿಸಲು ಸಾಧ್ಯವಾದರೆ ಉತ್ತಮ ಎಂದರು.

ಪ್ರಭಾಕರ್‌ ವಿ. ಕೊರೊನಾ ಸಂಕಷ್ಟದ ಸಂದರ್ಭ ದಲ್ಲಿ ಜನರಿಗೆ ತೆರಿಗೆ ಭಾರವಾಗಬಾರದು. ಆಡಳಿತ ವನ್ನು ಜನ ದೂರುವಂತಾಗಬಾರದು ಎಂದರು.

Advertisement

ಕಾಂಗ್ರೆಸ್‌ನ 7 ಸದಸ್ಯರು ಪೂರ್ವಸೂಚನೆ ನೀಡಿಯೇ ಬಹಿಷ್ಕಾರ ಹಾಕಿದ್ದರು. ಬಿಜೆಪಿಯ ಅಧ್ಯಕ್ಷೆ, ಸ್ಥಾಯೀ ಸಮಿತಿ ಅಧ್ಯಕ್ಷೆ ಸೇರಿ 11 ಮಂದಿ ಹಾಜರಾಗಿದ್ದರೆ ಪಕ್ಷೇತರ ಸದಸ್ಯೆ ಕಮಲಾ ಅವರು ಆಗಮಿಸಿದ್ದರು. ಒಟ್ಟು 23 ಸದಸ್ಯ ಬಲದಲ್ಲಿ ಮೀಟಿಂಗ್‌ ನಡೆಸಲು ಕೋರಂಗಾಗಿ 8 ಮಂದಿ ಅಗತ್ಯವಿತ್ತು.

ಹೆಚ್ಚಿಲ್ಲ
ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜನರಿಗೆ ಬಾಧೆಯಾಗದ ರೀತಿ ತೆರಿಗೆ ವಿಧಿಸ ಲಾಗಿದೆ. ಕಳೆದ ವರ್ಷ 2.5 ಕೋ.ರೂ. ಆದಾಯದ ಬಜೆಟ್‌, ಈ ವರ್ಷ 2.7 ಕೋ.ರೂ. ಆದಾಯದ ಬಜೆಟ್‌ ಮಾಡಲಾಗಿದೆ. ತೆರಿಗೆ ಏರಿಕೆಯಿಂದ 2.73 ಕೋ.ರೂ. ದೊರೆಯ ಬಹುದು. 23 ವಾರ್ಡ್‌ಗಳಲ್ಲಿ 48 ರಸ್ತೆಗಳನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ರಸ್ತೆ ಬದಿಯ ಜಾಗಗಳಿಗೆ 2019ರಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹಾಕಿದ ಆಸ್ತಿ ಮೌಲ್ಯದ ಶೇ.25ನ್ನು ಪರಿಗಣಿಸಿ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಅದು ಮನೆಯೊಂದಕ್ಕೆ ಈಗ ಕಟ್ಟುತ್ತಿರುವ ತೆರಿಗೆಯ 50-60 ರೂ.ಗಳಷ್ಟೇ ಹೆಚ್ಚುವರಿಯಾಗಿ ಬರಲಿದೆ.

ಆದ್ದರಿಂದ ಒಂದೇ ವಾರ್ಡ್‌ನಲ್ಲಿ ಐದು ರೀತಿಯ ತೆರಿಗೆ ದರಗಳೂ ಇರಬಹುದು. ಈಗ ಇದ್ದ ತೆರಿಗೆಗಿಂತ ಕಡಿಮೆ ಮಾಡುವ ಅಧಿಕಾರ ಇಲ್ಲ. ಹಾಗಾಗಿ ಬೇರೆ ಬೇರೆ ಸ್ಲ್ಯಾಬ್‌ಗಳಲ್ಲಿ ತೆರಿಗೆ ಹಾಕಲಾಗಿದೆ. ಈ ವರೆಗೆ ಖಾಲಿ ಜಾಗಕ್ಕೆ ತೆರಿಗೆ ಇರಲಿಲ್ಲ. ಇನ್ನು ಮುಂದೆ ಭೂ ಪರಿವರ್ತನೆಯಾದ, ಲೇಔಟ್‌ ನಕ್ಷೆಯಾದ, ಖಾತೆ ಹೊಂದಿದ 1 ಸಾವಿರ ಚ.ಅಡಿಗಿಂತ ಹೆಚ್ಚು ಖಾಲಿ ಜಾಗ ಇದ್ದರೆ ಹೆಚ್ಚುವರಿ ಜಾಗಕ್ಕೆ ತೆರಿಗೆ ವಿಧಿಸಲಾಗುವುದು. ಉಪನೋಂದಣಿ ಕಚೇರಿಯಲ್ಲಿ 12,500 ರೂ. ಚದರ ಮೀಟರ್‌ಗೆ ಮೌಲ್ಯ ಇದ್ದರೆ ಅಂತಹ ಹಾಗಕ್ಕೆ 5 ಸೆಂಟ್ಸ್‌ಗೆ ವಸತಿ ಭೂಮಿಗೆ 1,263 ರೂ., ವಾಣಿಜ್ಯ ಉದ್ದೇಶದ ಭೂಮಿಗೆ 1,767 ರೂ. ತೆರಿಗೆ ಬರಲಿದೆ ಎಂದು ವಿವರಿಸಿದರು. ಏರಿಸಿದಾಗ ಯಾವುದೇ ಮನೆಗೆ ಈಗ ಇದ್ದುದಕ್ಕಿಂತ 70 ರೂ.ಗಳಿಗಿಂತ ಹೆಚ್ಚಿನ ತೆರಿಗೆ ಬಂದಿಲ್ಲ ಎಂದರು. ಹೆಚ್ಚುವರಿ ತೆರಿಗೆ ಇಲ್ಲ ಎಂದು ಸಭೆ ಈ ಆಸ್ತಿ ತೆರಿಗೆಯನ್ನು ಅನುಮೋದಿಸಿತು.

“ಸುದಿನ ಸಂಪಾದಕೀಯ’
ತೆರಿಗೆ ಏರಿಕೆ ಕುರಿತು ಪರಾಮರ್ಶೆ ನಡೆಸಿ ಜನರಿಗೆ ಹೊರೆಯಾಗದಂತೆ ತೆರಿಗೆ ಏರಿಸಬೇಕು ಎಂದು ಪ್ರಕಟವಾದ “ಸುದಿನ ಸಂಪಾದಕೀಯ’ವನ್ನು ಮೋಹನದಾಸ ಶೆಣೈ ಅವರು ಸಭೆಯಲ್ಲಿ ಪೂರ್ತಿಯಾಗಿ ವಾಚಿಸಿದರು. ಜನರ ದನಿಯಾಗಿ “ಉದಯವಾಣಿ’ ತೆರಿಗೆ ಏರಿಕೆ ಹೊರೆಯಾಗಬಾರದು ಎಂದು ಬರೆದಿದ್ದು ಈ ಕುರಿತು ಗಮನ ಹರಿಸುವ ಅಗತ್ಯವಿದೆ. ಜನರಿಗೆ ತೊಂದರೆ ಮಾಡುವ ಉದ್ದೇಶ ಆಡಳಿತಕ್ಕೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next