Advertisement

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

01:35 PM Dec 18, 2024 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಫ್ಲೈಓವರ್‌ ಕಾಮಗಾರಿ ಮುಗಿದು 4 ವರ್ಷಗಳಾದರೂ ಸಂಗಮ್‌ ಬಳಿಯ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಸರ್ವಿಸ್‌ ರಸ್ತೆ ಸೇರಿದಂತೆ ಆಗಬೇಕಾದ ಹಲವಾರು ಕೆಲಸಗಳು ಇನ್ನೂ ಮುಗಿದಿಲ್ಲ. ಆದರೆ, ಇದೆಲ್ಲ ನಮಗೆ ಸಂಬಂಧಪಟ್ಟದ್ದೇ ಅಲ್ಲ ಎಂಬಂತೆ ಎಲ್ಲರೂ ವರ್ತಿಸುತ್ತಿದ್ದಾರೆ!

Advertisement

ಕೆಎಸ್‌ಆರ್‌ಟಿಸಿ ಬಳಿ ಎರಡೂ ಬದಿ ಸರ್ವಿಸ್‌ ರಸ್ತೆ ಕಾಮಗಾರಿಯೇ ಆಗಿಲ್ಲ. ನಗರಕ್ಕೊಂದು ಪ್ರವೇಶಿಕೆ ಇರಲಿ ಎಂದು ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಅವಕಾಶ ಕೊಟ್ಟು ಹೆದ್ದಾರಿಗೆ ಬರಬೇಡಿ ಎಂದರೆ ಅಲ್ಲೇ ಪ್ರವೇಶಿಸಿ ಅಪಘಾತಕ್ಕೆ ಕಾರಣವಾಗುತ್ತಿದೆ. ಇನ್ನೊಂದು ಬದಿಯಿಂದ ಹೆದ್ದಾರಿಗೆ ಪ್ರವೇಶ ನೀಡುವ ಯೋಚನೆ ಇತ್ತಾದರೂ ಯಾರೂ ಮುಂದುವರಿಯಲೇ ಇಲ್ಲ.

ಸರ್ವಿಸ್‌ ರಸ್ತೆ ಬಾಕಿ
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ, ಹಳೆ ಆದರ್ಶ ಆಸ್ಪತ್ರೆ ಬಳಿ ಹೆದ್ದಾರಿಯ ಎರಡೂ ಪಾರ್ಶ್ವದಲ್ಲಿ ಸರ್ವಿಸ್‌ ರಸ್ತೆ ಇನ್ನೂ ಆಗಿಲ್ಲ. 50 ಮೀ. ಬಾಕಿ ಇತ್ತು. ಈ ಕಾಮಗಾರಿ ಇತ್ತ ನವಯುಗ, ಅತ್ತ ಐಆರ್‌ಬಿ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಮಂಜೂರಾಗದೇ ಅಳತೆಯಲ್ಲಿ ತಪ್ಪಿಸಿಕೊಂಡಿತ್ತು! ಕೊನೆಗೂ 2020ರ ಸೆಪ್ಟಂಬರ್‌ನಲ್ಲಿ ಸರ್ವಿಸ್‌ ರಸ್ತೆಗೆ ಭೂಸ್ವಾಧೀನ ಆದೇಶ ಆಗಿದ್ದು ಕಾಮಗಾರಿ ಇನ್ನೂ ನಡೆದಿಲ್ಲ. ಅತ್ತ ಸರ್ವಿಸ್‌ ರಸ್ತೆಯೂ ಇಲ್ಲ, ಇತ್ತ ಚರಂಡಿ ವ್ಯವಸ್ಥೆಯೂ ಇಲ್ಲ. ಐಆರ್‌ಬಿ ಸಂಸ್ಥೆ ಈ ಕಾಮಗಾರಿ ನಡೆಸಬೇಕಿದೆ.

ಈಚೆಗೆ ಡಿಸಿ ಕಚೇರಿಯಲ್ಲಿ ನಡೆದ ಹೆದ್ದಾರಿ ಸಭೆಯಲ್ಲಿ ಈ ವಿಚಾರವನ್ನು ಕುಂದಾಪುರದ ಹೆದ್ದಾರಿ ಹೋರಾಟ ಸಮಿತಿಯ ರಾಜೇಶ್‌ ಕಾವೇರಿ ಪ್ರಸ್ತಾವ ಮಾಡಿದ್ದಾರೆ. ಸಂಗಮ್‌ ಸೇರಿದಂತೆ ನಗರದ ಯಾವುದೇ ಬ್ಲಾಕ್‌ಸ್ಪಾಟ್‌ಗಳ ಉಲ್ಲೇಖ ಈ ಸಭೆಯಲ್ಲಿ ಇರಲಿಲ್ಲ. ಸಂಗಮ್‌ನಲ್ಲಿ ಹೈಮಾಸ್ಟ್‌ ಬೇಕೆಂಬ ಬೇಡಿಕೆ ಕೂಡ ಚರ್ಚೆ ಪಟ್ಟಿಯಲ್ಲಿ ಇರಲಿಲ್ಲ. ಈ ಸರ್ವಿಸ್‌ ರಸ್ತೆ ಪೂರ್ಣವಾದರೆ ನಗರದ ಸರ್ವಿಸ್‌ ರಸ್ತೆ ಸಮಸ್ಯೆ ನಿವಾರಣೆಯಾಗಲಿದೆ. ನಗರದ ಉದ್ದಕ್ಕೂ ಸರ್ವಿಸ್‌ ರಸ್ತೆ ದೊರೆಯಲಿದೆ.

ಹೈಮಾಸ್ಟ್‌ಗೆ ಬೇಡಿಕೆ
ಸಂಗಂ ಬಳಿ ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ವಾಹನಗಳು ಯೂ ಟರ್ನ್ ಹಾಕುತ್ತವೆ. ಫ್ಲೈ ಓವರ್‌ ಮೇಲಿಂದ ಬರುವ ವಾಹನಗಳೂ ಇಲ್ಲಿ ತಿರುಗುತ್ತವೆ. ಬೈಂದೂರು ಕಡೆಯಿಂದ ಬರುವ ವಾಹನಗಳು ವೇಗದಲ್ಲಿ ಇರುವುದರಿಂದ ಅಪಘಾತ ಸಾಧ್ಯತೆ ಹೆಚ್ಚು. ಹೀಗಾಗಿ ಇಲ್ಲಿ ಹೈಮಾಸ್ಟ್‌ ದೀಪ ಬೇಕು ಎಂದು ಸಾಮಾಜಿಕ ಹೋರಾಟಗಾರ ಉದಯ ಭಂಡಾರ್ಕರ್‌ ಒತ್ತಾಯಿಸಿದ್ದಾರೆ. ಸಂಗಮ್‌ ಹತ್ತಿರ ಫ್ಲೈಓವರ್‌ ಅಥವಾ ಅಂಡರ್‌ ಪಾಸ್‌ ನಿರ್ಮಾಣ ಮಾಡದೇ ಹೋದರೆ ಅಪಾಯ ಕತ್ತಿಟ್ಟ ಬುಟ್ಟಿ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ. ಒಂದು ಜೀವ ಹೋದರೆ ಅದನ್ನು ಮತ್ತೆ ತರಲು ಸಾಧ್ಯವಿಲ್ಲ ಎಂದು ಅಭಿಜಿತ್‌ ಪೂಜಾರಿ ಹೇರಿಕುದ್ರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಏನೂ ಕ್ರಮ ಆಗಲಿಲ್ಲ.

Advertisement

ವಿಭಜಕ ತೆರವಿನಿಂದ ತಿರುಗಾಟ ಕಡ್ಡಾಯ
ಹೆದ್ದಾರಿ ನಡುವೆ ಎಪಿಎಂಸಿ ಬಳಿ ಈವರೆಗೆ ಇದ್ದ ವಿಭಜಕವನ್ನು ಮುಚ್ಚಲಾಗಿದೆ. ಫ್ಲೈಓವರ್‌ ಮೂಲಕ ಉಡುಪಿ ಕಡೆಯಿಂದ ಬರುತ್ತಿದ್ದ ವಾಹನಗಳು ಇಲ್ಲೇ ಯೂ ಟರ್ನ್ ಪಡೆದು ಕುಂದಾಪುರ ನಗರದ ಕಡೆಗೆ ಬಂದು ಶಾಸ್ತ್ರಿ ಸರ್ಕಲ್‌ನಲ್ಲಿ ನಗರದೊಳಗೆ ಬರಬೇಕಿತ್ತು. ಈಗ ವಿಭಜಕ ಮುಚ್ಚಿದ ಕಾರಣ ವಾಹನಗಳು ಸಂಗಂವರೆಗೆ ಹೋಗಿ ತಿರುಗಬೇಕಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಇದು ಕಡ್ಡಾಯ ತಿರುಗಾಟ. ಡೀಸೆಲ್‌, ಸಮಯ ಎಲ್ಲವೂ ವ್ಯರ್ಥ.

ಸಂತೆಗೆ ಬರುವ ವಾಹನಗಳಿಗೆ ತೊಂದರೆ
ಸಂತೆ ಮಾರುಕಟ್ಟೆಗೆ ಬೈಂದೂರು ಕಡೆಯಿಂದ ಬರುವ ವಾಹನಗಳು ಕೆಲವೊಮ್ಮೆ ಶಾಸ್ತ್ರಿ ಸರ್ಕಲ್‌ನ ಅಂಡರ್‌ಪಾಸ್‌, ಕೆಟಲ್‌ ಪಾಸ್‌ ಮೂಲಕ ಬರಬೇಕಾಗುತ್ತದೆ. ಇಲ್ಲದಿದ್ದರೆ ಸಂಗಂ ಬಳಿ ಇನ್ನೊಂದು ಪಾರ್ಶ್ವದ ಸರ್ವಿಸ್‌ ರಸ್ತೆಗೆ ಬರಲು ಒದ್ದಾಡಬೇಕಾಗುತ್ತದೆ.

ಖುದ್ದು ಬೆನ್ನು ಹತ್ತುತ್ತೇನೆ
ಈ ಹಿಂದಿನ ಸಹಾಯಕ ಕಮಿಷನರ್‌ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ವಿಸ್‌ ರಸ್ತೆ ಕಾಮಗಾರಿ ಬಗ್ಗೆ ಪತ್ರ ಬರೆದ ಮಾಹಿತಿಯಿದ್ದು ಖುದ್ದು ಅದರ ಬೆನ್ನು ಹತ್ತುವೆ. ಕಾಮಗಾರಿ ನಡೆಸುವಂತೆ ಎಂಜಿನಿಯರ್‌ ಜತೆ ಮಾತನಾಡುವೆ.
-ಕೆ.ಮಹೇಶ್ಚಂದ್ರ, ಸಹಾಯಕ ಕಮಿಷನರ್‌, ಕುಂದಾಪುರ

ಹಲವು ಕೆಲಸ ಬಾಕಿ ಇದೆ
ಸಂಗಂ ಸೇತುವೆ ಬಳಿ ಹೆದ್ದಾರಿ ಬದಿ ರಸ್ತೆ ಸರಿಯಾಗಿ ಕಾಣುವಂತೆ ಕಳೆಗಿಡ ತೆಗೆಯಬೇಕು. ಅಪರಾಧ, ಅಪಘಾತಗಳು ನಡೆಯುತ್ತವೆ. ಚರಂಡಿ, ಹೈಮಾಸ್ಟ್‌, ಸರ್ವಿಸ್‌ ರಸ್ತೆ ಬಾಕಿ ಇದೆ. ಈವರೆಗೂ ಸರಿಮಾಡಿಲ್ಲ.
-ಸಂತೋಷ್‌ ಕುಮಾರ್‌ ಶೆಟ್ಟಿ, ಸದಸ್ಯ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next