ಕೋಟ: ಎಲ್ಲದಕ್ಕೂ ಒಂದೊಂದ್ ದಿವ್ಸ ಅಂದ್ಹೇಳಿ ಇಪ್ಪತಿಗೆ ನಮ್ಮ ಕುಂದಾಪ್ರ ಭಾಷಿಗೆ ಒಂದ್ ದಿವಸ ಬೇಡದ ಅಂದ್ಹೇಳಿ ಒಂದಷ್ಟ್ ಮಂದಿ ಒಟ್ಟಾಯಿ ಆಟಿ ಅಮಾವಾಸ್ಯೆ ಆ. 1ರಂದು ಹಮ್ಮಿಕೊಂಡ ಕುಂದಾಪ್ರ ಕನ್ನಡ ದಿನಾಚರಣೆ ಭಾರೀ ಗಡ್ಜ್ ಆಯಿ ನಡಿತ್.ಈ ಆಚರಣಿ ಇಂದಿನ ಯುವಪೀಳಿಗಿಗೆ ಭಾಷಿ ಜತೆಗೆ ನಮ್ಮ ಕುಂದಗನ್ನಡಿಗರ ಬದ್ಕ್ ಕೂಡ ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ವಿವಿಧ ಕಡೆಗಳಲ್ಲಿ ಕಾರ್ಯಕ್ರಮ
ಕೋಟ ಹೋಬಳಿಯ ಹಲವು ಕಡೆಗಳಲ್ಲಿ ಈ ಪ್ರಯುಕ್ತ ಹಲವಾರು ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಹಾಗೂ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಲಕ್ಷ್ಮೀಸೋಮಬಂಗೇರ ಸ.ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕರೆ ಆಶ್ರಯದಲ್ಲಿ ಕಡಲಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅನಂತರ ಕುಂದಗನ್ನಡಕ್ಕಾಗಿ ಸೇವೆ ಸಲ್ಲಿಸಿದ ಹಿರಿಯರಿಗೆ ಸಮ್ಮಾನ, ಕುಂದಾಪ್ರ ಭಾಗದ ಹಿಂದಿನ ಆಚರಣೆ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ನಡೆಯಿತು. ಗೀತಾನಂದ ಫೌಂಡೇಶನ್, ಜನತಾ ಫಿಶ್‌ಮಿಲ್ ಪಡುಕರೆ, ಬಿಲ್ಲಾಡಿ, ಯಡ್ತಾಡಿ ಗ್ರಾಮ ಪಂಚಾಯತ್ ಜೇಸಿಐ ಕೋಟ ಮತ್ತು ವಿವಿಧ ಸಂಘಟನೆಗಳು, ಲಕ್ಷ್ಮೀ ಸೋಮಬಂಗೇರ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವಾರು ಶಾಲಾ-ಕಾಲೇಜು, ಸಂಘ-ಸಂಸ್ಥೆ ವತಿಯಿಂದ ಕುಂದಗನ್ನಡಕ್ಕೆ ಸಂಬಂಧಿಸಿದ ವಿಭಿನ್ನ ಕಾರ್ಯಕ್ರಮಗಳು ಜರಗಿದವು.
ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಶುಭಾಶಯ
ಸಾಮಾಜಿಕ ಜಾಲತಾಣದಲ್ಲಿ ಕುಂದಗನ್ನಡ ಭಾಗದ ಸ್ನೇಹಿತರು ಪರಸ್ಪರ ಕುಂದಾಪ್ರ ಕನ್ನಡ ದಿನದ ಶುಭಾಶಯ ಎನ್ನವು ಸಂದೇಶ ವಿನಿಮಯ ಮಾಡಿಕೊಳ್ಳುವುದು ಕಂಡು ಬಂತು ಹಾಗೂ ಸಾಮಾಜಿಕ ತಾಣದ ರೇಡಿಯೋಗಳಲ್ಲೂ ಹಲವಾರು ಕಾರ್ಯಕ್ರಮ ನಡೆಯಿತು.