Advertisement

15ಕ್ಕೂ ಮಿಕ್ಕಿ ಗ್ರಾ.ಪಂ. ಅಭಿವೃದ್ಧಿಗೆ ತೊಡಕು

11:21 AM Sep 20, 2022 | Team Udayavani |

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ಎರಡು ತಾಲೂಕಿನ ಎಲ್ಲ 60 ಗ್ರಾ.ಪಂ. ಗಳಿಗೆ ಸಂಬಂಧ ಪಡುವ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಬೈಂದೂರು ಉಪವಿಭಾಗ (ರಸ್ತೆ) ಇದರ ಸಹಾಯಕ ಎಂಜಿನಿಯರ್ ಹುದ್ದೆಗಳು ಖಾಲಿಯಿದ್ದು, ಇದರಿಂದ ಉಭಯ ತಾಲೂಕಿನ 15ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳ 15ನೇ ಹಣಕಾಸು ಯೋಜನೆ ಸಹಿತ ಶಾಸಕರ, ಜಿ.ಪಂ., ತಾ.ಪಂ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಕುಂದಾಪುರ ತಾಲೂಕಿನ 44 ಹಾಗೂ ಬೈಂದೂರು ತಾಲೂಕಿನ 16 ಸೇರಿದಂತೆ ಎಲ್ಲ 60 ಗ್ರಾ.ಪಂ.ಗಳ 15ನೇ ಹಣಕಾಸು ಯೋಜನೆ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಕಾಮಗಾರಿ, ಜಿ.ಪಂ., ತಾ.ಪಂ. ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಹೊಣೆ ಬೈಂದೂರಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ್ದಾಗಿರುತ್ತದೆ.

ನಾಲ್ವರಲ್ಲಿ ಒಬ್ಬರು ಮಾತ್ರ

ಈ ವಿಭಾಗದಲ್ಲಿ ಒಬ್ಬರು ಸಹಾಯಕ ಕಾರ್ಯವಾಹಕ ಎಂಜಿನಿಯರ್‌ ಹಾಗೂ ಇನ್ನು ನಾಲ್ಕು ಮಂದಿ ಸಹಾಯಕ ಎಂಜಿನಿಯರ್‌ಗಳಿರುತ್ತಾರೆ. ಈ ಪೈಕಿ ಸಹಾಯಕ ಕಾರ್ಯವಾಹಕ ಎಂಜಿನಿಯರ್‌ ಹಾಗೂ ಒಬ್ಬರು ಸಹಾಯಕ ಎಂಜಿನಿಯರ್‌ ಇದ್ದಾರೆ. ಇನ್ನುಳಿದ ಮೂರು ಹುದ್ದೆ ಖಾಲಿಯಿವೆ. ಒಬ್ಬರಿಗೆ ಜನಸಂಖ್ಯೆ ಆಧಾರದಲ್ಲಿ 7-8 ಗ್ರಾ.ಪಂ.ಗಳನ್ನು ವಹಿಸಲಾಗುತ್ತದೆ. ಕಳೆದ ಜೂನ್‌ನಲ್ಲಿ ಇಬ್ಬರು ಎಂಜಿನಿಯರ್‌ಗಳು ನಿವೃತ್ತಿಯಾಗಿದ್ದು, ಇನ್ನು 15ಕ್ಕೂ ಮಿಕ್ಕಿ ಗ್ರಾ.ಪಂ.ಗಳ ಬಹುತೇಕ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ. ಈಗಿರುವವರಿಗೆ 20 ಹಾಗೂ 14 ಗ್ರಾ.ಪಂ.ಗಳನ್ನು ವಹಿಸಲಾಗಿದೆ.

ಯಾವೆಲ್ಲ ಗ್ರಾ.ಪಂ.ಗೆ ಸಮಸ್ಯೆ

Advertisement

ಬೀಜಾಡಿ, ಕೋಟೇಶ್ವರ, ಬಳ್ಕೂರು, ಬಸ್ರೂರು, ತಲ್ಲೂರು, ಹೆಮ್ಮಾಡಿ, ವಂಡ್ಸೆ, ಚಿತ್ತೂರು, ಯಡಮೊಗೆ, ಉಳ್ಳೂರು 74, ಹೊಸಂಗಡಿ, ಸಿದ್ದಾಪುರ, ಹೆಂಗವಳ್ಳಿ, ಅಮಾಸೆಬೈಲು, ಶಂಕರನಾರಾಯಣ. ಈಗ ತಾತ್ಕಾಲಿಕವಾಗಿ ಕಾರ್ಕಳ ಹಾಗೂ ಉಡುಪಿ ಉಪ ವಿಭಾಗದ ನಾಲ್ವರು ಎಂಜಿನಿಯರ್‌ಗಳಿಗೆ ಹೆಚ್ಚುವರಿಯಾಗಿ ಈ ಪಂಚಾಯತ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಅವರಿಗೆ ಅಲ್ಲಿನ ಕೆಲಸವು ಇರುವುದರಿಂದ ಹೊರೆಯಾಗಿ ಪರಿಣಮಿಸಿದೆ.

ತುಂಬಾ ಸಮಸ್ಯೆ: ಹೆಮ್ಮಾಡಿಯಲ್ಲಿ ಹಿಂದೆ ಇದ್ದ ಎಂಜಿನಿಯರ್‌ ಜೂನ್‌ನಲ್ಲಿ ನಿವೃತ್ತಿಯಾಗಿದ್ದು, ಆ ಬಳಿಕ ಯಾವುದೇ ರಸ್ತೆ ಕಾಮಗಾರಿ ನಡೆಸಲು ಕಷ್ಟವಾಗಿದೆ. ಕಾಮಗಾರಿ ಮುಗಿಸಿದವರಿಗೆ ಎಂಜಿನಿಯರ್‌ಗಳು ಪರಿಶೀಲಿಸಿ, ವರದಿ ಕೊಡದಿರುವುದರಿಂದ ಗುತ್ತಿಗೆದಾರರಿಗೆ ಅನುದಾನ ಪಾವತಿಯು ಸಕಾಲದಲ್ಲಿ ಆಗುತ್ತಿಲ್ಲ. ಒಟ್ಟಾರೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತುಂಬಾ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದು, ಆದಷ್ಟು ಬೇಗ ನೇಮಕ ಮಾಡಬೇಕಿದೆ. – ಸುಧಾಕರ ದೇವಾಡಿಗ ಕಟ್ಟು, ಹೆಮ್ಮಾಡಿ ಗ್ರಾ.ಪಂ.ಅಧ್ಯಕ್ಷರು

ಗಮನಕ್ಕೆ ತರಲಾಗಿದೆ: ಇಲ್ಲಿದ್ದ ಇಬ್ಬರು ಎಂಜಿನಿಯರ್ ನಿವೃತ್ತಿಯಾಗಿದ್ದರಿಂದ ಇರುವವರ ಕಾರ್ಯಭಾರ ಹೆಚ್ಚಾಗಿದೆ. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ಉಡುಪಿ ಹಾಗೂ ಕಾರ್ಕಳ ಉಪ ವಿಭಾಗದಿಂದ ನಿಯೋಜನೆಗೆ ಸೂಚಿಸಿದ್ದಾರೆ. ಸದ್ಯಕ್ಕೆ ಸಮಸ್ಯೆಯಾಗದಂತೆ ಪ್ರಭಾರ ನೆಲೆಯಲ್ಲಿ ಜವಾಬ್ದಾರಿಯನ್ನು ವಹಿಸಿ ಕೊಡಲಾಗಿದೆ. ಖಾಲಿ ಹುದ್ದೆ ಭರ್ತಿಯಾದರೆ ಸಮಸ್ಯೆ ಪರಿಹಾರವಾಗಲಿದೆ. –ರಾಜ್‌ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗ ಬೈಂದೂರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next