Advertisement

ಕುಂದಾಪುರ: ಸರಕಾರಿ ಆಸ್ಪತ್ರೆಯಲ್ಲಿ ಮಾತಿನ ಜಟಾಪಟಿ

10:33 AM Dec 11, 2019 | sudhir |

– ತಡವಾಗಿ ಬರುವ ವೈದ್ಯರು
– ಬ್ರಾಂಡೆಡ್‌ ಔಷಧಿಗೆ ಚೀಟಿ
– ಸೇವಾ ನಿರ್ಲಕ್ಷ್ಯ ಆರೋಪ

Advertisement

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕರ್ತವ್ಯದಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಸಾರ್ವಜನಿಕರು ಹಾಗೂ ವೈದ್ಯರ ಜತೆಗೆ ಕೆಲಕಾಲ ಮಾತಿನ ಜಟಾಪಟಿ ನಡೆಯಿತು. ತನಗೆ ವೈಯಕ್ತಿಕ ಸಮಸ್ಯೆಗಳು ಇರುವ ಕಾರಣದಿಂದ ಕೆಲಬಾರಿ ಆಸ್ಪತ್ರೆಗೆ ಬರುವುದು ವಿಳಂಬವಾಗುತ್ತದೆ ಎಂದು ವೈದ್ಯರು ಸಮಜಾಯಿಷಿ ನೀಡಿದರು.

ನಾಲ್ಕು ಬಾರಿ ಆಗಮನ
ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್‌ ಅವರು ತಮ್ಮ ಪುತ್ರನ ಚಾಲನಾ ಪರವಾನಗಿ ನವೀಕರಣಕ್ಕಾಗಿ ವೈದ್ಯಕೀಯ ಪ್ರಮಾಣಪತ್ರಕ್ಕಾಗಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುತ್ರನ ಜತೆ ತೆರಳಿದ್ದರು. ಅಲ್ಲಿನ ವೈದ್ಯೆ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದಾರೆ ಎಂದು ರಾಧಾದಾಸ್‌ ಆಪಾದಿಸಿದ್ದು ನಂತರ ಕುಂದಾಪುರ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ ಮೂರ್ನಾಲ್ಕು ಬಾರಿ ಬಂದಾಗಲೂ ಒಬ್ಬ ವೈದ್ಯರು ಲಭ್ಯರಿರಲಿಲ್ಲ. ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸಿರಲಿಲ್ಲ. ಹಾಗಾಗಿ ಬೇರೆ ವೈದ್ಯೆಯ ಬಳಿ ತಾನು ಪ್ರಮಾಣಪತ್ರ ಮಾಡಿಸಿಕೊಂಡೆ. ಇದಕ್ಕಾಗಿ ನಾಲ್ಕು ದಿನಗಳ ಕಾಲ ತನ್ನ ಬಸ್‌ಗೆ ಬದಲಿ ನಿರ್ವಾಹಕನನ್ನು ಹಾಕಿದ್ದೂ ಸೇರಿದಂತೆ ನನ್ನ ಶ್ರಮ, ಹಣ ವ್ಯಯವಾಗಿದೆ. ಜಿಲ್ಲಾ ಆರೋಗ್ಯ ಸಮಿತಿ ಸದಸ್ಯೆಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರವನ್ನು ನಡೆಸುವವಳಾಗಿ ನನಗೇ ಇಷ್ಟು ಕಷ್ಟವಾದರೆ ಸಾರ್ವಜನಿಕರ ಪರಿಸ್ಥಿತಿ ಹೇಗಿರಬೇಕು ಎಂದು ಕೇಳಿದರು.

ಆಡಳಿತ ಶಸ್ತ್ರಚಿಕಿತ್ಸಕರಾಗಿ ಅಧಿಕಾರ ಸ್ವೀಕರಿಸಲು ಆಗಮಿಸಿದ್ದ ಡಾ| ರಾಬರ್ಟ್‌ ರೆಬೆಲ್ಲೋ ಅವರ ಜತೆ ಸಮಸ್ಯೆಯನ್ನು ಹೇಳಿಕೊಂಡರು. ಇದಕ್ಕೆ ಪೂರಕವಾಗಿ ಸಾರ್ವಜನಿಕರು, ರಾಜಕೀಯ ಪಕ್ಷದ ಮುಖಂಡರು, ಮಾಧ್ಯಮದವರು ಇರುವಾಗಲೇ ವೈದ್ಯರು ಮಂಗಳವಾರ ಕೂಡಾ ತಡವಾಗಿಯೇ ಕರ್ತವ್ಯಕ್ಕೆ ಆಗಮಿಸಿದರು.

ಹೇಳಿದ್ದು ಕೇಳಲ್ಲ
ವೈದ್ಯರು ಬೆಳಗ್ಗೆ 9 ಗಂಟೆಗೆ ಆಗಮಿಸಬೇಕು. 9ರಿಂದ 1, ಮಧ್ಯಾಹ್ನ 1.45ರಿಂದ 4.30 ಕರ್ತವ್ಯದ ಅವಧಿಯಾಗಿರುತ್ತದೆ. ಸಮಯ ತಪ್ಪಿದರೆ ಆಧಾರ್‌ ಆಧಾರಿತ ಬಯೋಮೆಟ್ರಿಕ್‌ನಲ್ಲಿ ಹಾಜರಿ ನಮೂದಾಗುತ್ತದೆ. ವೇತನದಲ್ಲಿ ಸಮಸ್ಯೆಯಾಗುತ್ತದೆ. ಔಷಧಿಗೆ ಚೀಟಿ ನೀಡುವಾಗ ಕೂಡಾ ಜೆನೆರಿಕ್‌ ಮೆಡಿಸಿನ್‌ ನೀಡಿ ಜನೌಷಧಿ ಕೇಂದ್ರದಲ್ಲಿ ದೊರೆಯುವಂತಹ ಔಷಧಿಯೇ ಬರೆಯಬೇಕು. ಬೇರೆ ಬ್ರಾಂಡೆಡ್‌ ಔಷಧಿ ಬರೆದರೆ ಅದು ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಅದರ ಹಣವನ್ನು ಸರಕಾರದಿಂದಲೂ ಭರಿಸುವಂತಿಲ್ಲ. ಇದನ್ನು ತಿದ್ದಿಕೊಳ್ಳಲು ಹೇಳಿದರೆ ಕೆಲವರಿಂದ ತನ್ನ ವಿರುದ್ಧ ಮಸಲತ್ತು ನಡೆಯುತ್ತದೆ ಎಂದು ಆಡಳಿತ ಶಸ್ತ್ರಚಿಕಿತ್ಸಕ ಡಾ| ರಾಬರ್ಟ್‌ ರೆಬೆಲ್ಲೋ ಹೇಳಿದರು.

Advertisement

ಸಮಸ್ಯೆಯಿದೆ
ತನಗೆ ಆರೋಗ್ಯದ ಸಮಸ್ಯೆಯಿದೆ. ತಂದೆಗೆ ಅನಾರೋಗ್ಯವಿದೆ. ಊರಿನಿಂದ ಬರುವಾಗ ವಿಳಂಬವಾಗುತ್ತದೆ. ಸಿಬಂದಿ ಕೊರತೆಯಿದೆ. ಎಲ್ಲ ಕೆಲಸಗಳನ್ನೂ ನಾನೇ ಮಾಡಬೇಕಾಗುತ್ತದೆ. ಗ್ರೂಪ್‌ ಡಿ ಕೆಲಸ ಕೂಡಾ ನನ್ನ ಪಾಲಿಗೇ ಬೀಳುತ್ತಿದೆ ಎಂದು ವೈದ್ಯರು ಸಮಜಾಯಿಷಿ ನೀಡಿದರು. ಮಾತಿನ ಭರದಲ್ಲಿ ಸುಳ್ಳು ಅಪವಾದ ಹೊರಿಸುತ್ತಿದ್ದೀರಿ ಎಂದು ಹೇಳಿದಾಗ, ದೂರುದಾರೆ ರಾಧಾದಾಸ್‌ ಅವರ ಸಹನೆ ತಪ್ಪಿತು. ಮಾತಿನ ಚಕಮಕಿ ನಡೆಯಿತು.

ದಾಖಲೆಗಳನ್ನು ಹೊರತೆಗೆದರು. ಡಿ.12ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲೂ ಈ ಕುರಿತು ದೂರು ನೀಡುವುದಾಗಿ ಹೇಳಿದರು.

ಬರೆದುಕೊಡಿ
ಸಿಬಂದಿಯನ್ನು ಬೇರೆಡೆ ನಿಯೋಜಿಸದಂತೆ ಪತ್ರ ಕೊಡಿ. ಈ ಕುರಿತು ಕ್ರಮಕೈಗೊಳ್ಳಲಾಗುವುದು. ವೈದ್ಯರ ವೈಯಕ್ತಿಕ ಸಮಸ್ಯೆಗಳಿಗೆ ಸಾರ್ವಜನಿಕರು ಹೊಣೆಯಲ್ಲ. ಇಲ್ಲಿ ಸಮಯಪಾಲನೆ ಅಗತ್ಯ. ಕೇಂದ್ರಸ್ಥಾನ ಬಿಟ್ಟು ಇರುವಂತಿಲ್ಲ. ಕೇಂದ್ರಸ್ಥಾನಕಿಂತ 8 ಕಿ.ಮೀ. ವ್ಯಾಪ್ತಿಯ ಳಗೆ ವಾಸವಿರಬೇಕು. ಇದಕ್ಕಾಗಿ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿದೆ. ಅದನ್ನು ಪಡೆದೂ ದೂರದಲ್ಲಿ ಇದ್ದು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಹೇಗೆ ಎಂದು ವೈದ್ಯಾಧಿಕಾರಿ ಪ್ರಶ್ನಿಸಿದರು. ಬ್ರಾಂಡೆಡ್‌ ಔಷಧಿಗಳಿಗೆ ಚೀಟಿ ನೀಡದಂತೆ ಸೂಚನೆ ನೀಡಿದರು.

ಕೊರತೆಯಿಲ್ಲ
ಆರೋಗ್ಯರಕ್ಷಾ ಸಮಿತಿಯಲ್ಲಿ ಹಣಕಾಸಿನ ಕೊರತೆಯಿಲ್ಲ. ಸ್ಕ್ಯಾನಿಂಗ್‌ ವೈದ್ಯರಿಲ್ಲದ ಕಾರಣ ಖಾಸಗಿಯಾಗಿ ಸ್ಕ್ಯಾನಿಂಗ್‌ ಮಾಡಿಸಿ ಅದರ ಮೊತ್ತವನ್ನು ಸರಕಾರ ಭರಿಸುತ್ತದೆ. ರೋಗಿಗೆ ಯಾವುದೇ ಹೊರೆಯಾಗುವುದಿಲ್ಲ. ಔಷಧ ಕೊರತೆಯಿದ್ದಾಗಲೂ ಆರೋಗ್ಯ ರಕ್ಷಾ ಸಮಿತಿ ಮೂಲಕ ಖರೀದಿಸಿ ಔಷಧಿ ನೀಡಲಾಗುತ್ತದೆ ಎಂದು ಡಾ| ರಾಬರ್ಟ್‌ ಸ್ಪಷ್ಟನೆ ನೀಡಿದರು.
ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ದೇವಕಿ ಸಣ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಸಿಬಂದಿಯಿಲ್ಲ
ಸಿಬಂದಿ ಕೊರೆತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಇದೆ. ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಸರಕಾರಿ ಸೇವೆಯಲ್ಲಿರುವ ವೈದ್ಯರು ಒಂದು ಕ್ಲಿನಿಕ್‌ ಅಥವಾ ಒಂದು ಖಾಸಗಿ ಆಸ್ಪತ್ರೆಗೆ ಮಾತ್ರ ಭೇಟಿ ನೀಡಬಹುದು. ಹೆಚ್ಚು ಮಾಡಿದರೆ ದೂರು ನೀಡಬಹುದು. ಒಂದಿಬ್ಬರು ವೈದ್ಯರ ಮೇಲಷ್ಟೇ ಸಾರ್ವಜನಿಕ ದೂರುಗಳಿದ್ದು ಉತ್ತಮ ಸೇವೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಲಂಚದ ವ್ಯವಸ್ಥೆಯಿಲ್ಲ.

ಪ್ರಾಮಾಣಿಕವಾಗಿ ಸೇವೆ ನೀಡಲಾಗುತ್ತಿದೆ. ದೂರುಗಳನ್ನು ಸರಿಪಡಿಸಿಕೊಂಡು ಹೋಗಲಾಗುವುದು.
– ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next