Advertisement
ಈಗಿನ್ನು ಮಳೆಗಾಲ ಮುಗಿದು, ಚಳಿಗಾಲ ಆರಂಭಗೊಂಡಿದ್ದಷ್ಟೇ. ಈಗಲೇ ಈ ಕೊರಗ ಕಾಲೋನಿಯ ಮನೆಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ. ಮೋಟಾರು ಪಂಪ್ ಹಾಳಾಗಿದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಮೇಲೆತ್ತಲು ಆಗುತ್ತಿಲ್ಲ. ಇದರಿಂದ ಬೇಸಗೆ ಆರಂಭಕ್ಕೆ ಇನ್ನೂ 3-4 ತಿಂಗಳು ಇರುವಾಗಲೇ ಇಲ್ಲಿನ ಜನ ದಿನ ಬಳಕೆಗೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಪಂಚಾಯತ್ನಿಂದ ಬರುವ ಜಲಜೀವನ್ ಮಿಷನ್ನಡಿಯ ನಳ್ಳಿ ನೀರು ಸಹ ವಾರದಲ್ಲಿ 3 ದಿನ ಬರುತ್ತದೆ. ಅದು ಕೂಡ ಕೆಲ ಸಮಯ ಮಾತ್ರ ಬರುತ್ತದೆ. ಜಾಸ್ತಿ ಹೊತ್ತು ಬಿಡಲ್ಲ. ಅದಕ್ಕಾಗಿಯೇ ದಿನ ಕಾಯಬೇಕಾಗಿದೆ. ಅದು ಸಹ ಜಾಸ್ತಿ ನೀರು ಸಿಗದ ಕಾರಣ ಮತ್ತೆ ಆಸುಪಾಸಿನ ಬಾವಿಗಳಿಂದ ಕೊಡಪಾನದಲ್ಲಿ ನೀರು ಹೊತ್ತು ತರಬೇಕಾಗಿದೆ. ಇನ್ನು ಕೆಲ ದಿನ ಕಳೆದರೆ ಈ ನಳ್ಳಿ ನೀರು ಸಹ ಉಪ್ಪು ನೀರಾಗುತ್ತದೆ. ಅದನ್ನು ನಾವು ಕುಡಿಯುವುದು ಹೇಗೆ ಎನ್ನುತ್ತಾರೆ ಇಲ್ಲಿನ ನಿವಾಸಿ ಕುಸುಮಾ. 15 ವರ್ಷದ ಹಿಂದೆ ಬಾವಿ ನಿರ್ಮಾಣ
ದರ್ಲೆಗುಡ್ಡೆಯ ಕೊರಗ ಕಾಲನಿಯಲ್ಲಿ ಪ್ರಸ್ತುತ ಹೊನ್ನಮ್ಮ, ಕುಸುಮಾ, ಬೇಬಿ, ಮಂಜು ಹಾಗೂ ಮಹೇಶ್ ಅವರ ಕುಟುಂಬಗಳಿದ್ದು, ಈ 5 ಮನೆಗಳಲ್ಲಿ ಒಟ್ಟಾರೆ 30 ಜನ ನೆಲೆಸಿದ್ದಾರೆ. ಇಲ್ಲಿನ ಮನೆಗಳಿಗಾಗಿ ಸುಮಾರು 15 ವರ್ಷಗಳ ಹಿಂದೆ ಇಲ್ಲಿ ಸಾರ್ವಜನಿಕ ಬಾವಿ ತೋಡಿದ್ದು, ಅದರೊಂದಿಗೆ ನೀರು ಮೇಲೆತ್ತಿ ಸರಬರಾಜು ಮಾಡುವ ಸಲುವಾಗಿ 3 ಸಣ್ಣ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಆ ಬಾವಿಯ ಸ್ವತ್ಛತೆಯನ್ನು ಸಹ ಮಾಡದಿರುವುದರಿಂದ ನೀರು ಕಲುಷಿತಗೊಂಡಿದೆ. ಆದರೆ ಈಗ ಮೋಟಾರು ಪಂಪ್ ಹಾಳಾಗಿದ್ದರಿಂದ ಈ ಟ್ಯಾಂಕ್ಗಳಿಗೆ ನೀರು ಬರುತ್ತಿಲ್ಲ. ಈ ಮೋಟಾರು ಕೆಟ್ಟು 4 ತಿಂಗಳು ಕಳೆದಿದ್ದು, ದುರಸ್ತಿಗೆ ಮನವಿ ಮಾಡಿದ್ದರೂ, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
Related Articles
ಸಾರ್ವಜನಿಕ ಬಾವಿಯ ಮೋಟಾರು ಪಂಪ್ ಹಾಳಾಗಿ, 4 ತಿಂಗಳಿನಿಂದ ಹಾಳಾಗಿ, ನೀರು ಪೂರೈಕೆ ಆಗದಿರುವುದರ ಬಗ್ಗೆ ನಾಡ ಗ್ರಾ.ಪಂ. ಪರಿಶಿಷ್ಟ ಜಾತಿ- ಪಂಗಡದವರ ವಿಶೇಷ ಗ್ರಾಮಸಭೆಯಲ್ಲೂ ಪ್ರಸ್ತಾವವಾಯಿತು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಮನವಿ ಸಹ ಸಲ್ಲಿಸಲಾಯಿತು. ನೀರಿನ ಬಿಲ್ ಕಟ್ಟಿ ಕಟ್ಟಿ ಅಂತಾರೆ. ಬೇಸಗೆಯಲ್ಲಿ ಬಾವಿ ನೀರು ತೆಗೆಯಲು ಆಗುತ್ತಿಲ್ಲ. ನಳ್ಳಿ ನೀರು ಉಪ್ಪಾಗಿರುತ್ತದೆ. ಉಪ್ಪು ನೀರಿಗೆ ನಾವು ಬಿಲ್ ಕಟ್ಟಬೇಕಾ ಅನ್ನುವುದಾಗಿ ಇಲ್ಲಿನ ನಿವಾಸಿಗರು ಸಭೆಯಲ್ಲಿ ಪ್ರಶ್ನಿಸಿದ್ದಾರೆ.
Advertisement
ಅಗತ್ಯ ಸೌಕರ್ಯ ವಂಚಿತ ಪ್ರದೇಶದರ್ಲೆಗುಡ್ಡೆಯ ಈ ಕೊರಗ ಕಾಲೋನಿಯು ಬಹುತೇಕ ಅಗತ್ಯ ಸೌಕರ್ಯ ವಂಚಿತ ಪ್ರದೇಶವಾಗಿದೆ. ಇಲ್ಲಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಇನ್ನೂ ಕೆಲ ದಿನ ಡಾಮರೀಕರಣ ಬಾಕಿಯಿದೆ. ಆರಂಭದಲ್ಲಿ ಡಾಮರೀಕರಣ ಆಗಿಲ್ಲ. ಅನಂತರ ಕೆಲ ದೂರ ಡಾಮರು ಹಾಕಲಾಗಿದೆ. ಮಧ್ಯೆ ಧೂಳುಮಯ ರಸ್ತೆಯಿದೆ. ಇನ್ನು ರಸ್ತೆಗೆ ಬೀದಿ ದೀಪದ ವ್ಯವಸ್ಥೆ ಇಲ್ಲ. ಇದರಿಂದ ರಾತ್ರಿ ವೇಳೆ ಭಯಭೀತಿಯಿಂದ ಸಂಚರಿಸಬೇಕಾಗಿದೆ. ಐಟಿಡಿಪಿ ಇಲಾಖೆಯಿಂದ ಮಂಜೂರಾದ ಮನೆಯಿನ್ನು 7-8 ವರ್ಷವಾದರೂ ಪೂರ್ಣಗೊಂಡಿಲ್ಲ. ದುರಸ್ತಿಗೆ ಸೂಚನೆ
ದರ್ಲೆಗುಡ್ಡೆಯ ಕೊರಗ ಕಾಲೋನಿಯ ಸಾರ್ವಜನಿಕ ಬಾವಿಯ ಮೋಟಾರು ಪಂಪ್ ಹಾಳಾಗಿದ್ದರ ಬಗ್ಗೆ ಪಂಚಾಯತ್ಗೆ ಈಗಷ್ಟೇ ಮನವಿ ಬಂದಿದ್ದು, ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ, ದುರಸ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು.
-ಹರೀಶ್,ನಾಡ ಗ್ರಾ.ಪಂ.ಪಿಡಿಒ ಕನಿಷ್ಠ ನೀರಾದರೂ ಕೊಡಿ
ನಮಗೆ ಬೇರೇನು ಸೌಲಭ್ಯ ಕೊಡುತ್ತಿಲ್ಲ. ಕನಿಷ್ಠ ಕುಡಿಯಲು ಸರಿಯಾದ ನೀರು ಆದರೂ ಕೊಡಿ. 4 ತಿಂಗಳಿನಿಂದ ಪಂಪ್ ಹಾಳಾಗಿದೆ. ಮನವಿ ಮಾಡಿಕೊಂಡು ಸಾಕಾಗಿದೆ. ಇನ್ನು ಏನು ಮಾಡಬೇಕು ನಾವು. ನೀರಿಗಾಗಿ ದೂರದ ಬೇರೆ ಮನೆಗಳಿಗೆ ಅಲೆದಾಟ ನಡೆಸಬೇಕಾಗಿದೆ. ಆದಷ್ಟು ಬೇಗ ಮೋಟಾರು ಪಂಪ್ ದುರಸ್ತಿ ಮಾಡಲಿ.
-ಹೊನ್ನಮ್ಮ, ಸ್ಥಳೀಯರು