Advertisement

Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು

05:31 PM Sep 22, 2024 | Team Udayavani |

ಕುಂದಾಪುರ: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹಲವೆಡೆಗಳಲ್ಲಿ ಬೀದಿ ದೀಪಗಳು ಇದ್ದರೂ, ಉರಿಯುತ್ತಿಲ್ಲ. ಅನೇಕ ವರ್ಷದಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಿ ಅನ್ನುವ ಜನರ ಬೇಡಿಕೆ ಇನ್ನೂ ಈಡೇರಿಲ್ಲ. ಇದರಿಂದ ರಾತ್ರಿ ವೇಳೆ ಜಂಕ್ಷನ್‌ಗಳಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

Advertisement

ಕುಂದಾಪುರ – ಬೈಂದೂರು ಹೆದ್ದಾರಿಯ ಕೆಲವೆಡೆಗಳಲ್ಲಿ ಮಾತ್ರ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಇರುವಂತಹ ಕೆಲವೇ ಕೆಲವು ಬೀದಿ ದೀಪಗಳು ಗಾಳಿ – ಮಳೆಗೆ ಕೈಕೊಟ್ಟರೆ, ಮತ್ತೆ ದುರಸ್ತಿ ಅನ್ನುವುದು ಕನಸಿನ ಮಾತು. ಸ್ಥಳೀಯರು, ಗ್ರಾ.ಪಂ.ನವರು ನಿರಂತರ ದುಂಬಾಲು ಬಿದ್ದರಷ್ಟೇ ಸರಿಪಡಿಸುತ್ತಾರೆ. ಈ ಬಾರಿಯೂ ಗಾಳಿ- ಮಳೆಗೆ ಹೆದ್ದಾರಿಯ ಅನೇಕ ಬೀದಿ ದೀಪಗಳು ಉರಿಯುತ್ತಿಲ್ಲ. ಅದನ್ನು ತ್ವರಿತಗತಿಯಲ್ಲಿ ಸರಿಪಡಿಸುವ ಕಾರ್ಯವೂ ಹೆದ್ದಾರಿ ಇಲಾಖೆ ಯಿಂದ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ತ್ರಾಸಿ ಜಂಕ್ಷನ್‌ನಿಂದ ಗಂಗೊಳ್ಳಿ ಅಣ್ಣಪ್ಪಯ್ಯ ಸಭಾಭವನದವರೆಗೆ ಬೀದಿ ದೀಪಗಳಿವೆ. ಆದರೆ ಅದು ಯಾವುದು ಈಗ ಉರಿಯುತ್ತಿಲ್ಲ. ನಿರ್ವಹಣೆ ಸಮಸ್ಯೆಯಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಸರ್ವಿಸ್‌ ರಸ್ತೆಗಳು ಇಲ್ಲದೇ ಇರುವುದರಿಂದ ಸ್ಥಳೀಯ ಕೆಲವರು ವಿರುದ್ಧ ದಿಕ್ಕಿನಿಂದ ನಿಯಮ ಉಲ್ಲಂಘಿಸಿ ಬರುತ್ತಿರುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿದೆ.

ಎಲ್ಲೆಲ್ಲ ಸಮಸ್ಯೆ?

ಕುಂದಾಪುರದ ಸಂಗಮ್‌ ಜಂಕ್ಷನ್‌ನಲ್ಲಿ ಹೈಮಾಸ್ಟ್‌ ಮಾತ್ರವಲ್ಲ, ಸಾಮಾನ್ಯ ಬೆಳಕಿನ ವ್ಯವಸ್ಥೆಯೂ ಇಲ್ಲದೇ ಅವಘಡಗಳಿಗೆ ಕಾರಣವಾಗುತ್ತಿದೆ.

ಹೇರಿಕುದ್ರು ಅಂಡರ್‌ಪಾಸ್‌ನ ಕೆಳಗಡೆ ಯಾವುದೇ ಬೀದಿ ದೀಪಗಳನ್ನು ಅಳವಡಿಸಿಲ್ಲ. ತಲ್ಲೂರು ಹಾಗೂ ಹೆಮ್ಮಾಡಿ, ಮುಳ್ಳಿಕಟ್ಟೆ ಜಂಕ್ಷನಲ್ಲಿ ಬೀದಿ ದೀಪದ ವ್ಯವಸ್ಥೆಯಿದೆ. ಆದರೆ ಪ್ರಮುಖ ಜಂಕ್ಷನ್‌ ಆಗಿರುವುದರಿಂದ ಹೈಮಾಸ್ಟ್‌ ದೀಪ ಅಳವಡಿಸಬೇಕು ಅನ್ನುವ ಬೇಡಿಕೆ ಬಹುದಿನಗಳಿಂದ ಇದೆ. ಇನ್ನೂ ಈ ಸಮಸ್ಯೆ ಬಗೆಹರಿದಿಲ್ಲ.

Advertisement

ಇನ್ನೆಷ್ಟು ವರ್ಷ ಬೇಕು?

ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಂಡು 6-7 ವರ್ಷಗಳೇ ಕಳೆದಿದೆ. ಚತುಷ್ಪಥ ಕಾಮಗಾರಿಯು ಪೂರ್ಣಗೊಂಡು, ಶಿರೂರಿನಲ್ಲಿ ಟೋಲ್‌ ಆರಂಭಗೊಂಡು 2 ವರ್ಷ ಕಳೆದಿದೆ. ಟೋಲ್‌ ಸಂಗ್ರಹವೂ ನಡೆಯುತ್ತಿದೆ. ಆದರೆ ಇನ್ನೂ ಈ ಹೆದ್ದಾರಿಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾತ್ರ ಇಲ್ಲ. ಇನ್ನೆಷ್ಟು ವರ್ಷ ಬೇಕು ಬೀದಿ ದೀಪ, ಹೈಮಾಸ್ಟ್‌ ದೀಪಗಳನ್ನು ಅಳವಡಿಸಲು ಅನ್ನುವುದಾಗಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ದುರಸ್ತಿಗೆ ಸೂಚನೆ

ಕುಂದಾಪುರ – ಬೈಂದೂರು ಹೆದ್ದಾರಿಯಲ್ಲಿ ಬೀದಿ ದೀಪಗಳು ಹದಗೆಟ್ಟಿರುವ ಬಗ್ಗೆ ಕೂಡಲೇ ಹೆದ್ದಾರಿ ಇಲಾಖೆಗೆ ಸರಿಪಡಿಸಲು ಸೂಚನೆ ನೀಡಲಾಗುವುದು. ಎಲ್ಲೆಲ್ಲ ಹೈಮಾಸ್ಟ್‌ ದೀಪಗಳ ಬೇಡಿಕೆ ಇದೆಯೂ ಅದನ್ನು ಪರಿಶೀಲಿಸಿ, ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು.
– ಮಹೇಶ್ಚಂದ್ರ, ಕುಂದಾಪುರ ಉಪವಿಭಾಗಾಧಿಕಾರಿ

ಮರವಂತೆ ಬೀಚ್‌ಗಿಲ್ಲ ಬೆಳಕು

ವಿಶ್ವ ಪ್ರಸಿದ್ಧ ತ್ರಾಸಿ- ಮರವಂತೆ ಬೀಚ್‌ನ ಹೆದ್ದಾರಿಯುದ್ದಕ್ಕೂ ರಾತ್ರಿ ಹೊತ್ತು ಕಂಡರೆ ಕಗ್ಗತ್ತಲು ಕವಿದ ಪರಿಸ್ಥಿತಿ ಇರುತ್ತದೆ. ಚತುಷ್ಪಥ ಕಾಮಗಾರಿ ನಡೆದ 6-7 ವರ್ಷಗಳಾದರೂ ಇನ್ನೂ ಇಲ್ಲಿ ಮಾತ್ರ ಬೆಳಕಿನ ವ್ಯವಸ್ಥೆಯೇ ಇಲ್ಲ. ರಾತ್ರಿ ಹೊತ್ತಲ್ಲಿ ಇಲ್ಲಿಗೆ ಪ್ರವಾಸಿಗರು ಯಾರಾದರೂ ಬಂದರೆ ಅವರಿಗೆ ಕಗ್ಗತ್ತಲ ಹಾದಿಯೇ ಸ್ವಾಗತಿಸುತ್ತಿದೆ.

ಇನ್ನು ನಾವುಂದ, ಅರೆಹೊಳೆ ಜಂಕ್ಷನ್‌ಗಳಲ್ಲೂ ಕೆಲವೇ ಕೆಲವು ಬೀದಿ ದೀಪಗಳು ಮಾತ್ರ ಇವೆ. ಇಲ್ಲೂ ಹೈಮಾಸ್ಟ್‌ ದೀಪ ಅಳವಡಿಸಿಲ್ಲ. ಕಂಬದಕೋಣೆ, ಕಿರಿಮಂಜೇಶ್ವರ, ಯಡ್ತರೆ ಜಂಕ್ಷನ್‌ನಲ್ಲೂ ಹೈಮಾಸ್ಟ್‌ ದೀಪಗಳನ್ನು ಅಳವಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next