Advertisement

Kundapura: ಬೈಕ್‌-ಬುಲೆಟ್‌ ಢಿಕ್ಕಿ: ಮತ್ತೋರ್ವ ಸಾವು

07:43 PM Sep 30, 2024 | Team Udayavani |

ಕುಂದಾಪುರ: ಕುಂದಾಪುರ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್‌ ಎದುರಿನ ಸರ್ವಿಸ್‌ ರಸ್ತೆಯಲ್ಲಿ ಬೈಕ್‌ ಮತ್ತು ಬುಲೆಟ್‌ ಮುಖಾಮುಖೀ ಢಿಕ್ಕಿಯಲ್ಲಿ ಗಾಯಗೊಂಡಿದ್ದ ಬುಲೆಟ್‌ ಸವಾರ ಕೂಡ ಮೃತಪಟ್ಟಿದ್ದಾರೆ.

Advertisement

ಶನಿವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು. ಕುಂದಾಪುರ ನಗರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿ ಪೈಂಟರ್‌ ವೆಂಕಟೇಶ್‌ ಅವರ ಪುತ್ರ ಶಶಾಂಕ್‌ ಮೊಗವೀರ (22) ಸ್ಥಳದಲ್ಲೇ ಮೃತಪಟ್ಟಿದ್ದು, ರವಿವಾರ ರಾತ್ರಿ ಬುಲೆಟ್‌ ಸವಾರ ಪುನೀತ್‌ ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಹಾಸನ ಮೂಲದ ಪುನೀತ್‌ ಅವಿವಾಹಿತರಾಗಿದ್ದು, ಕಂಡ್ಲೂರಿನಲ್ಲಿ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದರು. ಕಳೆದ 12 ವರ್ಷಗಳಿಂದ ಕಂಡ್ಲೂರಿನಲ್ಲಿ ತನ್ನ ತಾಯಿ ಪದ್ಮಾ ಅವರೊಂದಿಗೆ ವಾಸಿಸುತ್ತಿದ್ದರು. ಅಪಘಾತದಲ್ಲಿ ಪುನೀತ್‌ ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲದ ಕೆಎಂಸಿಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ತಾಣ
ಹಂಗಳೂರು ಸಮೀಪದ ಆಸುಪಾಸಿನಲ್ಲಿ ಹಲವು ಅಪಘಾತಗಳು ನಡೆಯತ್ತಿದ್ದು ಇದೊಂದು ಅಪಘಾತ ವಲಯ ಆಗಿ ಪರಿಣಮಿಸಿದೆ. ಇದರ ಬಗ್ಗೆ ಕುಂದಾಪುರ ಸಂಚಾರ ಠಾಣಾ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೀಪ ಅಳವಡಿಕೆಗೆ ಸೂಚನೆ
ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಬರುವ ವಾಹನಗಳು, ಕೋಟೇಶ್ವರ, ಆಸ್ಪತ್ರೆ ಮೊದಲಾದೆಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬರುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಕೆಲ ಸಮಯದ ಹಿಂದೆ ಪುರಸಭೆ ಪೌರಕಾರ್ಮಿಕ ಅಪಘಾತದಲ್ಲಿ ಮೃತಪಟ್ಟಿದ್ದರು. ಇಲ್ಲಿ ರಾತ್ರಿ ವೇಳೆ ಬೆಳಕಿನ ಕೊರತೆಯಿದೆ. ಸೂಕ್ತ ಬೀದಿದೀಪಗಳಿಲ್ಲ ಎನ್ನುವುದನ್ನು ಗಮನಿಸಿದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಸೋಮವಾರ ಹೆದ್ದಾರಿ ಇಲಾಖೆಯ ಗುತ್ತಿಗೆದಾರ ಸಂಸ್ಥೆಗೆ ಬೀದಿ ದೀಪ ಅಳವಡಿಸುವಂತೆ ಸೂಚಿಸಿದ್ದಾರೆ. ಖಾಸಗಿಯಾಗಿ ಇಲ್ಲಿರುವ ಗ್ಯಾರೇಜ್‌ ಮಾಲಕರಿಗೂ ಮನವಿ ಮಾಡಿದ್ದು, ದೀಪ ಅಳವಡಿಸಲು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next