Advertisement
ಆಸ್ತಿ ನೋಂದಣಿಗೆ ಬಂದಿದ್ದೇವೆ. ಆದರೆ ನಮ ಗಿಂತ ಮೊದಲು ಬಂದವರಿಗೆ ಎರಡು ತಾಸು ಕಾದರೂ ಒಟಿಪಿ ಬರಲಿಲ್ಲ. ಹಾಗಾಗಿ ನಾವಿನ್ನೂ ಕಾಯಬೇಕು. ಈ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳ ಬೇಕಿತ್ತು. ಇಲ್ಲಿನ ಅವಸ್ಥೆ ನೋಡಿದರೆ ಇನ್ನೊಂದು ದಿನ ರಜೆ ಹಾಕಬೇಕು ಎಂದರು ಇನ್ನೊಬ್ಬರು ಬಸ್ರೂರಿನವರು.
Related Articles
ಭೂಮಿ ಹಾಗೂ ಕಾವೇರಿ ತಂತ್ರಾಂಶದಲ್ಲಿ ಆಗಾಗ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣವೂ ಇಲ್ಲಿನ ಕಾರ್ಯ ವಿಳಂಬಕ್ಕೆ ಒಂದು ಕಾರಣ. ಕಳೆದ ವಾರ ತಲಾ ಎರಡು ದಿನ ಈ ತಂತ್ರಾಂಶಗಳಲ್ಲಿ ಸಮಸ್ಯೆ ಇತ್ತು. ಹಾಗಾಗಿ ಇಡೀ ವಾರದಲ್ಲಿ ಕೇವಲ ಒಂದೇ ದಿನ ನೋಂದಣಿ ನಡೆದಿದೆ. ಸಕಾಲಕ್ಕೆ ಒಟಿಪಿ ಬರುವುದಿಲ್ಲ. ಎರಡು-ಮೂರು ತಾಸು ಕಾಯಬೇಕು. ಇದರಿಂದಾಗಿ ಬೇರೆ ಕಡತಗಳ ದಾಖಲೀಕರಣವೂ ಸ್ಥಗಿತ. ಎಲ್ಲ ಸರಿ ಇದ್ದರೆ ದಿನಕ್ಕೆ 50ರಷ್ಟು ನೋಂದಣಿ, 100ರಷ್ಟು ಇಸಿ (ಎನ್‌ಕಂಬರೆನ್ಸ್ ಸರ್ಟಿಫಿಕೆಟ್ ಅಂದರೆ ಋಣರಾಹಿತ್ಯ ಪ್ರಮಾಣಪತ್ರ) ನೀಡಲು ಸಾಧ್ಯವಿದೆ.
Advertisement
ಮೌಲ್ಯಮಾಪಕರಿಲ್ಲಸರಕಾರ ನಿಗದಿಪಡಿಸಿದ ಆಸ್ತಿ ಮೌಲ್ಯಕ್ಕಿಂತ ಕಡಿಮೆಗೆ ಖರೀದಿಸಿದ ಭೂಮಿಯನ್ನು ನೋಂದಣಿ ಮಾಡಿದಾಗ (45ಎ ರೆಫರ್) ಜಿಲ್ಲಾ ನೋಂದಣಾಧಿಕಾರಿ ಆ ಸ್ಥಳಕ್ಕೆ ಭೇಟಿ ನೀಡಿ ಮೌಲ್ಯಮಾಪನ ಮಾಡಬೇಕು. ಅದಾದ ಬಳಿಕ ಆ ಭೂಮಿಗೆ ಪಹಣಿ ಪತ್ರಿಕೆ, ದಾಖಲೆ ದೊರೆಯುತ್ತದೆ. ಆದರೆ ಜಿಲ್ಲಾ ನೋಂದಣಾಧಿಕಾರಿಯೇ ಚಿಕ್ಕಮಗಳೂರು ಹಾಗೂ ಉಡುಪಿ ಎರಡೂ ಜಿಲ್ಲೆಯ ಹೊಣೆ ಹೊತ್ತಿದ್ದಾರೆ. ಆದ್ದರಿಂದ ಕುಂದಾಪುರದಲ್ಲಿ 9 ತಿಂಗಳಿನಿಂದ ಅಂತಹ ಕಡತಗಳು ಬಾಕಿಯಾಗಿವೆ ಎನ್ನುತ್ತಾರೆ ನೋಂದಣಿಗೆ ಬಂದಿದ್ದ ನಾಗರಿಕರೊಬ್ಬರು. ಆರೋಪ ನಿರಾಕರಣೆ
ಋಣರಾಹಿತ್ಯ ಪ್ರಮಾಣಪತ್ರಕ್ಕೆ ಅಧಿಕ ಹಣ ಪಡೆಯ ಲಾಗುತ್ತದೆ ಎಂಬ ಆರೋಪವನ್ನು ಉಪನೋಂದಣಾಧಿಕಾರಿ ನಿರಾಕರಿಸಿದರು. 15 ವರ್ಷಗಳ ಇಸಿಗೆ 180 ರೂ. ಮಾತ್ರ ಸ್ವೀಕರಿಸಲಾಗುತ್ತದೆ. ಕೃಷಿಸಾಲ ನೋಂದಣಿಗೆ 105 ರೂ. ಮಾತ್ರ ಪಡೆಯಲಾಗುತ್ತದೆ ಎಂದಿದ್ದಾರೆ. ಫಲಕ ಇಲ್ಲ
ಬಹುತೇಕ ಉಪನೋಂದಣಿ ಕಚೇರಿಗಳಲ್ಲಿ ವಾರ್ಷಿಕ ವಹಿವಾಟು ಇತ್ಯಾದಿ ಮಾಹಿತಿಗಳ ಫಲಕವನ್ನು ಹಾಕಿರಲಾಗುತ್ತದೆ. ಇಲ್ಲಿ ಅದೂ ಇಲ್ಲ. ಸಿಬಂದಿಯೇ ಇಲ್ಲ
ಕಚೇರಿಯಲ್ಲಿ ಉಪ ನೋಂದಣಾಧಿಕಾರಿಯೇ ಇಲ್ಲ. ಪ್ರಭಾರ ಹೊಣೆ ಯಲ್ಲಿ ಇರುವವರು ಬ್ರಹ್ಮಾವರ ಉಪ ನೋಂದಣಿ ಕಚೇರಿಯ ಪ್ರಥಮ ದರ್ಜೆ ಸಹಾಯಕರು. ಮೂವರು ಆಪರೇಟರ್‌ಗಳು ಕಿಯೋನಿಕ್ಸ್ ಸಂಸ್ಥೆಯಿಂದ ಹೊರಗುತ್ತಿಗೆಯಲ್ಲಿ ನೇಮಿಸಲ್ಪಟ್ಟವರು. ಇನ್ನೂ ಮೂವರು ಅರೆಕಾಲಿಕ ನೌಕರರಿದ್ದಾರೆ. ಅಸಲಿಗೆ ಇಲ್ಲಿ ಸರಕಾರದಿಂದ ಉಪನೋಂದಣಾಧಿಕಾರಿ, ಒಬ್ಬ ಪ್ರಥಮ ದರ್ಜೆ ಸಹಾಯಕ, ಇಬ್ಬರು ದ್ವಿತೀಯ ದರ್ಜೆ ಸಹಾಯಕ, ಒಬ್ಬರು ಡಿ ದರ್ಜೆ ಸಿಬಂದಿ ಇರಬೇಕಿತ್ತು. ದುರದೃಷ್ಟವಶಾತ್ ಯಾರೂ ಇಲ್ಲ. ಗುರಿ ಹಾಗೂ ಸಾಧನೆ
2017-18ರಲ್ಲಿ 15 ಕೋ.ರೂ. ಗುರಿ ಪೈಕಿ 10.5 ಕೋ.ರೂ. ಸಂಗ್ರಹವಾಗಿತ್ತು. 2018-19ರಲ್ಲಿ 13 ಕೋ.ರೂ. ಪೈಕಿ 11.74 ಕೋ.ರೂ. ಸಂಗ್ರಹವಾಗಿದೆ. 2019-20ರಲ್ಲಿ 15 ಕೋ.ರೂ. ನಲ್ಲಿ 13.15 ಕೋ.ರೂ. ಆದಾಯ ಸಂಗ್ರಹವಾಗಿತ್ತು. 2020-21ಕ್ಕೆ 17 ಕೋ.ರೂ. ಗುರಿ ನೀಡಲಾಗಿದೆ. ಕೊರೊನಾ, ಲಾಕ್‌ಡೌನ್ ಇದ್ದರೂ ಜನವರಿ ಅಂತ್ಯಕ್ಕೆ 10.31ಕೋ.ರೂ. ಸಂಗ್ರಹವಾಗಿದೆ. ವಾರ್ಷಿಕ ಸರಾಸರಿ 6 ಸಾವಿರ ನೋಂದಣಿಗಳಾಗುತ್ತವೆ. ಪರಿಹಾರ
ಆರ್‌ಟಿಸಿ ಸೇರಿದಂತೆ ಎಲ್ಲದಕ್ಕೂ ಆಧಾರ್ ಲಿಂಕ್ ಕಡ್ಡಾಯ. ಆಧಾರ್ ಮೂಲಕ ಪಹಣಿ ಪತ್ರಿಕೆಗೆ ಕೃಷಿಸಾಲ ನೋಂದಣಿ ಬ್ಯಾಂಕ್‌ಗಳಲ್ಲೇ ನಡೆದರೆ ಇಲ್ಲಿ ಗೊಂದಲ ಇರದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಕಡತ ಬಾಕಿ ಇಲ್ಲ
ಕಳೆದ ವಾರ ತಂತ್ರಾಂಶ ಸಮಸ್ಯೆಯಿಂದ 4 ದಿನ ಬಾಕಿಯಾಗಿದೆ. ಆದರೆ ಆದ್ಯತೆ ಮೇರೆಗೆ ಅಂತಹವರಿಗೆ ಅವಕಾಶ ನೀಡಲಾಗುತ್ತಿದೆ. ಕಡತಗಳು ಉಳಿಯುತ್ತಿಲ್ಲ. ಫೆ.1ರಂದು ಇಲ್ಲಿದ್ದ ಉಪ ನೋಂದಣಾಧಿಕಾರಿಗೆ ವರ್ಗವಾದ ಕಾರಣ ಪ್ರಭಾರ ಕರ್ತವ್ಯದಲ್ಲಿದ್ದು ಸಾರ್ವಜನಿಕರಿಂದ ದೂರುಗಳು ಬಾರದಂತೆ ಕೆಲಸ ನಿರ್ವಹಿಸಲಾಗುತ್ತಿದೆ.-ನಾಗಬೋರಯ್ಯ, ಉಪ ನೋಂದಣಾಧಿಕಾರಿ (ಪ್ರಭಾರ) – ಲಕ್ಷ್ಮೀ ಮಚ್ಚಿನ