Advertisement

ಕುಂದಾಪುರ: ಬದಲಾಗಲಿದೆಯೇ ಪಾರಿಜಾತ ವೃತ್ತ?

12:50 AM Jan 21, 2020 | Sriram |

ಕುಂದಾಪುರ: ನಗರದಲ್ಲಿ ಇರುವ ಪಾರಿಜಾತ ಸರ್ಕಲ್‌ ಎಂದೇ ಪ್ರಸಿದ್ಧವಾದ ಪೌಲ್‌ ಹ್ಯಾರಿಸ್‌ ವೃತ್ತದ ರೂಪುರೇಖೆ ಬದಲಾಗಲಿದೆಯೇ? ಹೀಗೊಂದು ಸಂಶಯ ಈ ಭಾಗದ ಜನರಲ್ಲಿ, ಈ ವೃತ್ತದ ಮೂಲಕ ಹಾದು ಹೋಗುವ ಅನೇಕರಲ್ಲಿ, ವಾಹನ ಸವಾರರಲ್ಲಿ ಸುಳಿದಾಡುತ್ತಿದೆ. ಏಕೆಂದರೆ ಅಂದಚೆಂದ ಎಂದು ಕಂಗೊಳಿಸುತ್ತಿದ್ದ ವೃತ್ತ ಇದೀಗ ತನ್ನ ರೂಪವನ್ನು ಬದಲಿಸಿಕೊಂಡು ಶಿರೋಭಾಗವನ್ನೇ ಕಳೆದುಕೊಂಡು ಕುರೂಪಿ
ಯಾಗಿದೆ.

Advertisement

ಪೌಲ್‌ ಹ್ಯಾರಿಸ್‌ ಸರ್ಕಲ್‌
ಶಾಸ್ತ್ರಿ ಸರ್ಕಲ್‌ನಿಂದ ಬಸ್‌ ನಿಲ್ದಾಣಕ್ಕೆ ಬರುವಾಗ ಕುಂದಾಪುರ ನಗರದ ಒಳಗೆ 1980 ರಲ್ಲಿ ರೋಟರಿ ಕ್ಲಬ್‌ನವರು ಪೌಲ್‌ ಹ್ಯಾರಿಸ್‌ ನೆನಪಿನಲ್ಲಿ ಕಟ್ಟಿದ ವೃತ್ತ ಇದು. ವೃತ್ತವನ್ನು ರಚಿಸಿದ ರೋಟರಿ ಸಂಸ್ಥೆ ಅನಂತರ ಅದನ್ನು ಪುರಸಭೆಗೆ ಹಸ್ತಾಂತರಿಸಿತ್ತು. ಪಕ್ಕದಲ್ಲೇ ಮಾಜಿ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆಯೂ ಹಾದು ಹೋಗುತ್ತದೆ. ಗಡಿಯಾರ ಗೋಪುರವೊಂದಿದ್ದು ಗಿಡಮರಗಳ ಕೊಂಬೆಯಿಂದಾಗಿ ಗಡಿಯಾರವೇ ಕಾಣುವುದಿಲ್ಲ. ದೀಪಾಕೃತಿಯ ಸುಂದರ ಕಾಂಕ್ರೀಟ್‌ ಗೋಪುರ ಕೊಂಬೆಗಳಿಂದ ಆವೃತವಾಗಿದೆ.

ನಿರ್ವಹಣೆ
ವೃತ್ತವನ್ನು ಒಂದಷ್ಟು ಸಮಯ ಪುರಸಭೆಯೇ ನಿರ್ವಹಣೆ ಮಾಡುತ್ತಿತ್ತು. ಅದಾದ ಅನಂತರ ಈ ವೃತ್ತವನ್ನು ಪಾರಿಜಾತ ಹೊಟೇಲ್‌ನವರು ನಿರ್ವಹಣೆ ಮಾಡುವುದಾಗಿ ಪುರಸಭೆಯ ಜತೆ ಒಪ್ಪಂದ ಮಾಡಿಕೊಂಡಂತೆ ನಿರ್ವಹಿಸಿದರು. ವೃತ್ತ ಎದುರು ದ್ವಿಪಥದ ಮಧ್ಯದಲ್ಲಿ ಸಾಲು ಸಸಿಗಳನ್ನು ನೆಟ್ಟು ನಗರದ ಸೌಂದರ್ಯವನ್ನು ಇನ್ನೂ ಹೆಚ್ಚಿಸಿದರು.

ಅವಧಿ ಮುಕ್ತಾಯ
ಅನಂತರದ ದಿನಗಳಲ್ಲಿ ಈ ವೃತ್ತ ಪಾರಿಜಾತ ಸರ್ಕಲ್‌ ಎಂದೇ ಪ್ರಸಿದ್ಧವಾಯಿತು. ಸಮೀಪದಲ್ಲಿ ಚರ್ಚ್‌ ರೋಡ್‌, ಒಂದೆಡೆ ಸರಕಾರಿ ಆಸ್ಪತ್ರೆ, ಮತ್ತೂಂದೆಡೆ ಹೂವಿನ ಮಾರುಕಟ್ಟೆ, ಸನಿಹದಲ್ಲೇ ಜೂನಿಯರ್‌ ಕಾಲೇಜು ಏನೇ ಇದ್ದರೂ ವೃತ್ತಕ್ಕೆ ಪಾರಿಜಾತ ವೃತ್ತ ಎಂಬುದೇ ಚಿರಪರಿಚಿತವಾಯಿತು. ಇದೀಗ ವೃತ್ತದ ನಿರ್ವಹಣೆ ಅವಧಿ ಮುಕ್ತಾಯವಾಗಿದೆ. ದುಷ್ಕರ್ಮಿಗಳು ಸಾಲುಸಸಿಗಳನ್ನು ರಾತೋರಾತ್ರಿ ಕಡಿದಿದ್ದಾಗ ಪುರಸಭೆಯೇ ಸಾಲುಸಸಿಗಳನ್ನು ಎರಡು ರಸ್ತೆಗಳ ನಡುವಿನ ಜಾಗದಲ್ಲಿ ನೆಟ್ಟಿದೆ.

ಬೋಳಾಗಿದೆ ವೃತ್ತ
ವೃತ್ತದ ತಲೆ ಮೇಲೆ ಇದ್ದ ಫ‌ಲಕಗಳು, ಆಕೃತಿ ಗಳನ್ನು ತೆಗೆಯಲಾಗಿದ್ದು ವೃತ್ತ ಸೌಂದರ್ಯ ಕಳೆದುಕೊಂಡು ಬೋಳಾಗಿದೆ. ಆದ್ದರಿಂದ ಹೊಸದಾಗಿ ಯಾರಾದರೂ ನಿರ್ವಹಣೆಗೆ ಬಂದು ಅಥವಾ ಪುರಸಭೆಯೇ ಇದರ ನಿರ್ವಹಣೆ ಮಾಡುವ ಮೂಲಕ ವೃತ್ತದ ಚೆಂದವನ್ನು ಹೆಚ್ಚಿಸಲಿದೆ ಎಂಬ ವಿಶ್ವಾಸ ಊರ ಜನರದ್ದು.

Advertisement

ಪಾರ್ಕಿಂಗ್‌
ವೃತ್ತ ಸಮೀಪ ವಿಶಾಲ ಜಾಗವಿದ್ದು ಟೂರಿಸ್ಟ್‌ ಕಾರು ಪಾರ್ಕಿಂಗ್‌ ಮಾಡಲಾಗುತ್ತಿದೆ. ಇಷ್ಟಲ್ಲದೆ ಹೊಸದಾಗಿ ಪಾರ್ಕಿಂಗ್‌ಗೆ ಜಾಗ ಗುರುತಿಸಲಾಗಿದ್ದು ಈ ಸಂದರ್ಭ ಇಲ್ಲಿ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ವಾಹನಗಳು ತಿರುಗಲು ಕೂಡ ಸರಿಯಾದ ಅವಕಾಶ ಒದಗಿಸಲಾಗುತ್ತದೆ. ಈಗಾಗಲೆ ಕೆಲವು ಬಸ್‌ಗಳು ಬಸ್‌ ನಿಲ್ದಾಣದ ವರೆಗೆ ಹೋಗದೆ ಇಲ್ಲೇ ತಿರುಗಿ ಮತ್ತೆ ಶಾಸಿŒ ಸರ್ಕಲ್‌ ಕಡೆಗೆ ಹೋಗುವುದೂ ಉಂಟು. ಬೆಂಗಳೂರಿಗೆ ಹೋಗುವ ರಾತ್ರಿ ಬಸ್‌ಗಳು ಜನರನ್ನು ಹತ್ತಿಸಿಕೊಳ್ಳಲು ಇಲ್ಲೇ ಠಿಕಾಣಿ ಹೂಡುವುದೂ ಇದೆ.

ಪುರಸಭೆ ನಿರ್ವಹಣೆ
ಈವರೆಗೆ ನಿರ್ವಹಣೆ ಮಾಡುತ್ತಿದ್ದವರು ಅವಧಿ ಮುಗಿದ ಕಾರಣ ಬಿಟ್ಟುಕೊಟ್ಟಿದ್ದಾರೆ. ಅನೇಕ ಬೇಡಿಕೆಗಳು ನಿರ್ವಹಣೆಗಾಗಿ ಬಂದಿವೆ. ಸದ್ಯ ಪುರಸಭೆಯೇ ನಿರ್ವಹಣೆ ಮಾಡಲಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

ಬೇಡಿಕೆ
ಪಾರಿಜಾತ ಹೊಟೇಲ್‌ನವರೇ ಮರಳಿ ತಮಗೇ ನಿರ್ವಹಣೆಗೆ ಅವಕಾಶ ಕೊಡಿ ಎಂದು ಪುರಸಭೆಗೆ ಬೇಡಿಕೆ ಇಟ್ಟಿದ್ದಾರೆ. ಇದರ ಜತೆಗೆ ಕೆಲವು ಸಂಸ್ಥೆಯವರು, ಸಂಘಟನೆಯವರು ಕೂಡಾ ನಿರ್ವಹಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಅಷ್ಟಲ್ಲದೇ ಇಲ್ಲಿ ರಾಷ್ಟ್ರನಾಯಕರ ಪ್ರತಿಮೆ ಸ್ಥಾಪನೆ ಕುರಿತು ಕೆಲವು ಸಂಘಟನೆಗಳು ಚಿಂತನೆ ನಡೆಸಿವೆ. ಆದರೆ ಪುರಸಭೆಯಲ್ಲಿ ಈಗ ಜನಪ್ರತಿನಿಧಿಗಳ ಆಡಳಿತ ಇಲ್ಲ. ಅಧಿಕಾರಿಗಳ ಆಡಳಿತ ಮಾತ್ರ ಇದೆ. ಆದ್ದರಿಂದ ವೃತ್ತದ ನಿರ್ವಹಣೆ ಕುರಿತು ಯಾವುದೇ ತೀರ್ಮಾನ ಆಗಿಲ್ಲ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next