Advertisement
ಬಯಲು ನುಂಗಿದ ಪೈಪುನೆಹರೂ ಮೈದಾನದ ಬಯಲಿನಲ್ಲಿ ಒಂದು ಸುಂದರ ರಂಗ ಮಂದಿರವನ್ನು ಪುರಸಭೆ ಸುವರ್ಣ ಮಹೋತ್ಸವ ನೆನಪಿಗೆ ಕಟ್ಟಿಸಿದೆ. ಈ ಮೈದಾನದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಯುಜಿಡಿ ಕಾಮಗಾರಿಗಾಗಿ ತಂದು ಹಾಕಿದ್ದ ಭೀಕರ ಗಾತ್ರದ ಪೈಪುಗಳಿಂದಾಗಿ ಮೈದಾನ ಪಾಳು ಬೀಳಲಾರಂಭಿಸಿತು. ಮೈದಾನದ ಸುತ್ತ ಮಳೆಗಾಲದ ಕಳೆ ಬೆಳೆಯತೊಡಗಿತು. ಕಾಮಗಾರಿಯ ಸಾಮಾಗ್ರಿ ಸಂಗ್ರಹಣೆಯ ಘನಲಾರಿಗಳು ಮೈದಾನದೆಲ್ಲೆಡೆ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ಹೊಂಡಗುಂಡಿಗಳು ಬಿದ್ದವು.
ಮೈದಾನದಲ್ಲಿರುವ ರಂಗಮಂದಿರ ಉಪಯೋಗಶೂನ್ಯವಾಗಿದೆ. ಮುಚ್ಚಿದ ಕಬ್ಬಿಣದ ಗೇಟು ತುಕ್ಕು ಹಿಡಿಯತೊಡಗಿದೆ. ಅದೆಷ್ಟೋ ಸಮಯದಿಂದ ತೆರೆಯದ ಕಾರಣದಿಂದ ಇನ್ನು ತೆರೆಯುವ ಪ್ರಯತ್ನ ಮಾಡಿದರೆ ಕೈಯಲ್ಲೇ ಮಣ್ಣ ಲೇಪನದ ಕಬ್ಬಿಣದ ತುಂಡುಗಳು ಬರಬಹುದೇನೋ ಎಂಬ ಅನುಮಾನ ಮೂಡಿಸುವಂತಿದೆ. ಸಾಂಸ್ಕೃತಿಕ ಚಟುವಟಿಕೆಗೆ ಇಂಬು ನೀಡಬೇಕಿದ್ದ ಈ ರಂಗಮಂದಿರದ ಈಗ ದಿಕ್ಕುದೆಸೆಯಿಲ್ಲದಂತಾಗಿದೆ.
ಬೇರೆ ಮೈದಾನಕ್ಕೆ ಶಿಫ್ಟ್
ಮೈದಾನದ ಅವ್ಯವಸ್ಥೆಯಿಂದಾಗಿ 30ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟಕರು ಈಗ ಅನಿವಾರ್ಯವಾಗಿ ಬೇರೆ ಮೈದಾನಗಳಿಗೆ ವಲಸೆ ಹೋಗತೊಡಗಿದ್ದಾರೆ.
ಸರಕಾರಿ ಕಾರ್ಯಕ್ರಮಗಳು ಕೂಡ ಭಂಡಾರ್‌ಕಾರ್ಸ್ ಕಾಲೇಜಿನ ಕ್ರೀಡಾಂಗಣದಲ್ಲಿಯೇ ನಡೆಯುತ್ತವೆ. ನೆಹರೂ ಮೈದಾನದಲ್ಲಿ ಸೀಮಿತ ಪ್ರದರ್ಶನಗಳು ಮಾತ್ರ ನಡೆಯುತ್ತಿವೆ. ಅದರ ಪಕ್ಕ ಹಾದು ಹೋದ ಸರ್ವಿಸ್ ರಸ್ತೆಯೇ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ಕಾರಣ ಕಾರ್ಯಕ್ರಮ ಮಾಡುವುದು, ಕಾರ್ಯಕ್ರಮಕ್ಕಾಗಿ ಸಣ್ಣಪುಟ್ಟ ಸಂತೆ ವ್ಯಾಪಾರ ನಡೆಸುವವರು ಅಂಗಡಿ ಹಾಕುವುದು ಕಷ್ಟವಾಗಿದೆ. ಜೂನಿಯರ್ ಕಾಲೇಜು ಮೈದಾನ ಸೇರಿದಂತೆ ಬೇರೆ ಕಡೆ ಕಾರ್ಯಕ್ರಮ ನಡೆಸುವ ಅನಿವಾರ್ಯ ಸ್ಥಿತಿ ಬಂದಿದೆ ಎನ್ನುತ್ತಾರೆ ಸಂಘಟಕರು.
ರಂಗಮಂದಿರ ವಲಸೆ ಕಾರ್ಮಿಕರ ಅಡ್ಡೆಯಾಗಿದೆ. ಕುಡುಕರ ವಿಶ್ರಾಂತಿ ತಾಣವಾಗಿದೆ. ಬೀಡಾಡಿಗಳ ತಾಣವಾಗಿದೆ. ಹಳೆಬಟ್ಟೆ, ಬಾಟಲಿಗಳನ್ನು ತಂದು ಹಾಕುವವರಿಗೆ ಅನುಕೂಲವಾಗಿದೆ. ನೆಹರೂ ಮೈದಾನ ತಾಲೂಕು ಆಡಳಿತ ವ್ಯಾಪ್ತಿಗೆ ಬರುತ್ತದೆ, ಗಾಂಧಿ ಮೈದಾನ ಸಹಾಯಕ ಕಮಿಷನರ್ ಅವರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಪುರಸಭೆ ಇಲ್ಲಿ ಮೂಕಪ್ರೇಕ್ಷಕನಾಗಿದೆ. ಜಿಲ್ಲಾಧಿಕಾರಿಗಳಿಗೆ ಪತ್ರ
ರಂಗಮಂದಿರವನ್ನು ಪರಿಶೀಲಿಸಿ ಅಗತ್ಯಕ್ರಮ ಹಾಗೂ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
– ತಿಪ್ಪೆಸ್ವಾಮಿ,
ತಹಶೀಲ್ದಾರ್, ಕುಂದಾಪುರ
Related Articles
ರಂಗಮಂದಿರ ಉಪಯೋಗಕ್ಕೆ ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆಯವರು ಆದಷ್ಟು ಶೀಘ್ರ ಇದನ್ನು ಜನರಿಗೆ ದೊರೆಯುವಂತೆ ಮಾಡಲಿ.
– ಸಂತೋಷ್ ಸುವರ್ಣ
ಸಂಗಮ್ ನಿವಾಸಿ
Advertisement
– ಲಕ್ಷ್ಮೀ ಮಚ್ಚಿನ