ಕುಂದಾಪುರ: ಮನೆಮನೆಗೆ ಮಳೆಕೊಯ್ಲು ಉದಯವಾಣಿಯ ಯಶಸ್ವೀ ಅಭಿಯಾನ. ಅನೇಕರು ಈಗಾಗಲೇ ಮಳೆಕೊಯ್ಲು ಅಳವಡಿಸಿಕೊಂಡು ಇದನ್ನು ಶ್ಲಾಘಿಸಿದ್ದು ಅಲ್ಲದೇ ಇನ್ನಷ್ಟು ಮಂದಿ ತಾವು ಅಳವಡಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಪ್ರಸಿದ್ಧ ಮೂರುಮುತ್ತು ನಾಟಕ ತಂಡದ ಕಲಾವಿದ ಕುಳ್ಳಪ್ಪು ಖ್ಯಾತಿಯ ಸತೀಶ್ ಪೈ ಅವರು ಶುಕ್ರವಾರ ತಮ್ಮ ಮನೆಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆಯ ಸರಕಾರಿ ಬಾವಿಕಟ್ಟೆ ಬಳಿಯ ನಿವಾಸಿ ನಾಟಕ ಕಲಾವಿದ ಸತೀಶ್ ಪೈ (ಕುಳ್ಳಪ್ಪು) ಅವರು ತಮ್ಮ 1,500 ಚ.ಅಡಿಯ ತಾರಸಿ ಮನೆ ನೀರು ಹರಿದು ಹೋಗಲು ಪೈಪ್ ಅಳವಡಿಸಿ ಮಳೆಕೊಯ್ಲು ಆರಂಭಿಸಿದ್ದಾರೆ. ಕೋಣಿಯ ಶಶಿಕಾಂತ್ ಅವರು ಮಾರ್ಗದರ್ಶನ ನೀಡಿದ್ದಾರೆ. ಸರಿಸುಮಾರು ಏಳೆಂಟು ಅಡಿ ಆಳದ ಬಾವಿ. ಅದಕ್ಕಿಂತ ಹೆಚ್ಚು ಆಳ ಮಾಡಿದರೆ ಉಪ್ಪುನೀರು. ಎಪ್ರಿಲ್ ವೇಳೆಗೆ ನೀರು ಕಡಿಮೆಯಾಗುತ್ತದೆ.
ಆಳಮಾಡುವಂತಿಲ್ಲ, ನೀರೂ ಇಲ್ಲ ಎಂಬ ಸ್ಥಿತಿ. ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸಿದ ಕಾರಣ ನೀರೆಲ್ಲ ರಸ್ತೆಗೆ ಹರಿದು ಪೋಲಾಗುತ್ತಿತ್ತು. ಮನೆಯ ತ್ಯಾಜ್ಯ ನೀರು ಇಂಗಲು ಕಾಂಕ್ರಿಟ್ ರಿಂಗ್ ಅಳವಡಿಸಿ ಗುಂಡಿ ಮಾಡಿದ್ದಾರೆ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂಬ ಚಿಂತನೆಯಲ್ಲಿದ್ದಾಗ ಉದಯವಾಣಿಯಲ್ಲಿ ಪ್ರಕಟವಾಗುತ್ತಿರುವ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಸರಣಿ ಗಮನಿಸಿದ್ದಾರೆ. ವಿಳಂಬಿಸದೇ ಡ್ರಮ್ ಪದ್ಧತಿಯಲ್ಲಿ ನೀರಿಂಗಿಸಲು ಮುಂದಾಗಿದ್ದಾರೆ.
ಕಂದಾವರ ಪಂಚಾಯತ್ ಅಧ್ಯಕ್ಷೆ ಸವಿತಾ ಆರ್. ಪೂಜಾರಿ ಅವರು ಮೂಡ್ಲಕಟ್ಟೆ ಸಮೀಪದ ಹಿರೇಬೈಲು ನಿವಾಸಿ. ಮನೆ ಖರ್ಚಿಗೆ, ಗಿಡಗಳಿಗೆ ಬಿಡಲು ಪಂಚಾಯತ್ ನಳ್ಳಿ ನೀರಿನ ಸಂಪರ್ಕ ಹೊಂದಿರದೇ ಬಾವಿಯ ನೀರೇ ಎಲ್ಲಕ್ಕೂ ಆಧಾರ ಎಂದು ನಂಬಿದವರು. ಬೇಸಗೆಯಲ್ಲಿ ಕುಡಿಯಲು ನೀರಿನ ತತ್ವಾರ ಆಗದಿದ್ದರೂ ಗಿಡಗಳಿಗೆ ಹನಿಸಲು ನೀರಿಲ್ಲ ಎಂದಾಯಿತು. ಆದರೆ ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆಯಾಗಲಿದೆ ಎನ್ನುವ ಮುನ್ಸೂಚನೆಯರಿತರು. ಪರಿಣಾಮವಾಗಿ ಮೇ ತಿಂಗಳಲ್ಲಿ ಮಳೆನೀರಿನ ಕೊಯ್ಲು ನಡೆಸಿದರು. 900 ಚ.ಅಡಿಯ ತಾರಸಿ ಮನೆಯ ನೀರು 25 ಅಡಿ ಆಳದ ಸುಂದರ ವಿನ್ಯಾಸದ ಬಾವಿಗೆ ಬೀಳುವಂತೆ ಮಾಡಿದರು. ಈಗ ಇವರ ಮನೆಗೆ ಮಳೆನೀರು ಕೊಯ್ಲು ನೋಡಲೆಂದೇ ಜನ ಬರುತ್ತಿದ್ದಾರೆ. ಉಳ್ಳೂರು ಶಾಲೆಯ ವಿದ್ಯಾರ್ಥಿಗಳು ಕೂಡಾ ನೋಡಿದ್ದಾರೆ.