Advertisement

ಅರೆಬರೆಯಾಗಿದೆ ಒಳಚರಂಡಿ ಕಾಮಗಾರಿ

09:03 PM Feb 12, 2020 | Sriram |

ಕುಂದಾಪುರ: ಒಳಚರಂಡಿ ಕಾಮಗಾರಿ ಅರ್ಧದಲ್ಲಿ ನಿಂತಿದ್ದು ಇಡೀ ಕುಂದಾಪುರ ಪುರಸಭೆಯಲ್ಲಿ ಬಾಕಿಯಾದಂತೆ ಇಲ್ಲೂ ಪೂರ್ಣವಾಗಿಲ್ಲ. ಅದನ್ನು ಶೀಘ್ರದಲ್ಲಿಯೇ ಆರಂಭಿಸಬೇಕು ಎಂದು ಜನರ ಆಗ್ರಹವಿದೆ.

Advertisement

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ರಸ್ತೆ ಹಾಗೂ ಅದೇ ಹೆಸರಿನ ಸಂಕ್ಷಿಪ್ತ ರೂಪದ ಜೆಎಲ್‌ಬಿ ವಾರ್ಡ್‌ನಲ್ಲಿ “ವಾರ್ಡ್‌ನಲ್ಲಿ ಸುದಿನ’ ಸುತ್ತಾಟ ನಡೆಸಿದಾಗ ಬಹುತೇಕ ಜನರು ಬೇಡಿಕೆ ಇಟ್ಟದ್ದು ಒಳಚರಂಡಿಗಾಗಿ.

ಯುಜಿಡಿಯಿಂದ ಹಾಳು
ಕೋಳಿಫಾರಂ ಬಳಿ ಇಂಟರ್‌ಲಾಕ್‌ ಹಾಕಿದ ರಸ್ತೆಯನ್ನು ಅಗೆದು ಒಳಚರಂಡಿ ಮಾಡಲಾಗಿದೆ. ಒಳಚರಂಡಿ ಮಾಡಿದ ಬಳಿಕ ರಸ್ತೆಯನ್ನು ಇಂಟರ್‌ಲಾಕ್‌ ಮರು ಅಳವಡಿಸಿದ್ದು ಸಮರ್ಪಕವಾಗಿಲ್ಲ. ಇದರಿಂದಾಗಿ ವಾಹನಗಳ ಓಡಾಟಕ್ಕೆ ಅಡಚಣೆಯಾಗುತ್ತಿದ್ದು ಇದನ್ನು ಸರಿಪಡಿಸಬೇಕು ಎನ್ನುತ್ತಾರೆ ಸ್ಥಳೀಯರು. ರಸ್ತೆಯ ಕಾಮಗಾರಿ ಸಂದರ್ಭ ಜಲಮಟ್ಟ ಸರಿಯಾಗಿ ಪರೀಕ್ಷಿಸಿಲ್ಲದ ಕಾರಣ ಮಳೆಗಾಲದಲ್ಲಿ ನೀರು ನಿಂತು ತೊಂದರೆಯಾಗುತ್ತದೆ, ವಾಹನಗಳ ಓಡಾಟ ಸಂದರ್ಭ ಕೆಸರು ನೀರು ಹಾರುತ್ತದೆ. ಇಂಟರ್‌ಲಾಕ್‌ ಸರಿಯಾಗಿ ಅಳವಡಿಸಿದರೆ ಈ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಊರವರು.

ಯುಜಿಡಿ ಆರಂಭಿಸಲಿ
ಒಳಚರಂಡಿ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಲಾಗಿದೆ. ಇದಕ್ಕೆ ಕಾರಣಗಳು ಇಲ್ಲಿನವರಿಗೆ ತಿಳಿದಿಲ್ಲ. ಹಾಗಂತ ಕಳೆದ ವಾರದಿಂದ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಆರಂಭಿಸಲಾಗಿದ್ದು ಈ ವಾರ್ಡ್‌ನಲ್ಲಿ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಈಗಾಗಲೇ ಒಳಚರಂಡಿ ಕಾಮಗಾರಿ ಮಾಡುವ ಸಂದರ್ಭ ಉಂಟಾದ ಭಾನಗಡಿಗಳು ಏನೇ ಇದ್ದರೂ ಅರ್ಧದಲ್ಲಿ ಬಾಕಿಯಾದ ಕಾಮಗಾರಿಯನ್ನು ಮತ್ತೆ ಮುಂದುವರಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.

ರಸ್ತೆ ಬೇಕು
ಭಂಡಾರ್‌ಕಾರ್ಸ್‌ ಕಾಲೇಜು ಸನಿಹದ ರಸ್ತೆ ಮೂಲಕ ವಿಠಲವಾಡಿ ಸಂಪರ್ಕಿಸುವಲ್ಲಿಂದ ಪರಮೇಶ್ವರಿ ದೇವಸ್ಥಾನ ಹಾಗೂ ಕೀಳೇಶ್ವರಿ ಯೂತ್‌ ಕ್ಲಬ್‌ನ ಅಂಗನವಾಡಿಯ ನಡುವೆ ಹಾದುಹೋದ ರಸ್ತೆ ಅಭಿವೃದ್ಧಿಗೆ ಈ ಭಾಗದ ಜನ ಬೇಡಿಕೆಯಿಟ್ಟಿದ್ದಾರೆ. ಇಲ್ಲಿ ಸರಿಸುಮಾರು ಮೂವತ್ತಕ್ಕೂ ಅಧಿಕ ಮನೆಗಳಿಗೆ ರಸ್ತೆಯಿಲ್ಲ. ಕಾಲುದಾರಿಯಿದೆ. ಮಳೆಗಾಲದಲ್ಲಿ ಅರ್ಧ ಕಾಲು ಹೂತು ಹೋಗುವಷ್ಟು ಕೆಸರು ಇರುತ್ತದೆ. ಮಕ್ಕಳಿಗೆ, ಹಿರಿಯರಿಗೆ ಕಷ್ಟವಾಗುತ್ತದೆ. ಹಾಗಾಗಿ ಇಲ್ಲಿ ಪುರಸಭೆ ಮುತುವರ್ಜಿ ವಹಿಸಿ ರಸ್ತೆಯೊಂದನ್ನು ಮಾಡಿಕೊಡಬೇಕು ಎಂಬ ಬೇಡಿಕೆಯಿದೆ. ಆದರೆ ಖಾಸಗಿ ಜಾಗ ಹಾದುಹೋಗುವ ಕಾರಣ ಈ ಕುರಿತು ಸಮಾಲೋಚನೆ ನಡೆಸಿ ಮುಂದಡಿಯಿಡಬೇಕಿದೆ. ಕಾಲು ದಾರಿ ಬಳಕೆ ನಿರಾತಂಕವಾಗಿ ನಡೆಯುತ್ತಿದೆ. ಕಾಲುದಾರಿಗೂ ಇಂಟರ್‌ಲಾಕ್‌ ಹಾಕುವ ಕಾರ್ಯ ನಡೆದಿಲ್ಲ. ಯಾವುದೇ ವಾಹನಗಳ ಓಡಾಟ ಇಲ್ಲದ ಕಾರಣ ಈ ಭಾಗದ ಜನ ವಾಹನ ಖರೀದಿಗೂ ಹಿಂದೇಟು ಹಾಕುತ್ತಾರೆ. ಒಂದೊಮ್ಮೆ ವಾಹನ ಖರೀದಿಸಿದರೆ ವಿಠಲವಾಡಿ ರಸ್ತೆ ಬದಿ ನಿಲ್ಲಿಸಬೇಕಾಗುತ್ತದೆ. ಯಾರಿಗಾದರೂ ಈ ಮನೆಗಳಲ್ಲಿ ಅನಾರೋಗ್ಯ ಉಂಟಾದರೆ ಅವರನ್ನು ವಾಹನ ಇರುವಲ್ಲಿಗೆ ಕರೆತರಲು ಹರಸಾಹಸ ಪಡಬೇಕಾಗುತ್ತದೆ. ಅಥವಾ ಹೊತ್ತು ತರಬೇಕಾಗುತ್ತದೆ. ಇಂತಹ ದುಃಸ್ಥಿತಿ ಪುರಸಭೆ ಆಡಳಿತ ಇರುವ ಪ್ರದೇಶದಲ್ಲಿ ಇರಬಾರದು, ಗ್ರಾಮಾಂತರ ಪ್ರದೇಶದವಾದರೆ ಒಂದು ಲೆಕ್ಕ ಬೇರೆ ಎನ್ನುತ್ತಾರೆ ಊರವರು. ಮಳೆಗಾಲದಲ್ಲಿ ನಮ್ಮ ಪಾಡು ನಮಗೇ ಪ್ರೀತಿ ಎನ್ನುತ್ತಾರೆ.

Advertisement

ಸ್ಲಾಬ್‌ ಹಾಕಲಿ
ಚರಂಡಿಗಳಾಗಿದ್ದರೂ ಅವುಗಳಿಗೆ ಚಪ್ಪಡಿ ಹಾಸಿಲ್ಲ. ಹಾಗಾಗಿ ತೆರೆದ ಚರಂಡಿಗಳು ಅಲ್ಲಲ್ಲಿ ಅಪಾಯವನ್ನು ಆಹ್ವಾನಿಸುತ್ತಿವೆ. ಇದಕ್ಕೊಂದು ಸ್ಲಾಬ್‌ ಅಳವಡಿಸುವ ಕೆಲಸ ಶೀಘ್ರದಲ್ಲಿ ಆಗಬೇಕಿದೆ. ಇಲ್ಲದೇ ಇದ್ದರೆ ಇದರ ಬದಿಯಲ್ಲಿ ಹಾದು ಹೋಗುವ ಶಾಲಾ ಮಕ್ಕಳು, ಸಂಜೆ ವೇಳೆಗೆ ಮಬ್ಬುಗತ್ತಲಲ್ಲಿ ನಡೆದು ಬರುವ ನಾಗರಿಕರಿಗೆ ಬೀಳುವ ಭೀತಿ ಉಂಟಾಗುತ್ತಿದೆ.

ಬೇಡಿಕೆಗಳಿವೆ
ಜನರಿಂದ ಸಾಕಷ್ಟು ಬೇಡಿಕೆಗಳು ಬಂದಿದ್ದು ಅನುದಾನದ ಲಭ್ಯತೆ ಮೇರೆಗೆ ಕಾಮಗಾರಿ ಮಾಡಲಾಗುತ್ತದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದಿದೆ. ಈಗ ಲಭ್ಯ ಅನುದಾನದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮಾಡಲಾಗಿದೆ.
-ವಿ. ಶ್ರೀಕಾಂತ್‌
ಸದಸ್ಯರು, ಪುರಸಭೆ

ಆಗಬೇಕಾದ್ದೇನು?
-ಒಳಚರಂಡಿ ಕಾಮಗಾರಿ ಪುನಾರಂಭಿಸಬೇಕು
-ಚರಂಡಿಗಳಿಗೆ ಸ್ಲಾಬ್‌ ಮುಚ್ಚಬೇಕು.
-ರಸ್ತೆ ಅಭಿವೃದ್ಧಿಯಾಗಬೇಕು.

ಮನೆಗಳಿಗೆ ನೀರು ಬರ್ತದೆ
ಗಾಂಧಿಮೈದಾನದ ಎದುರಿನಿಂದ ಹಾದು ಬರುವ ತೋಡಿನ ನೀರು ಹರಿಯುವ ಚರಂಡಿ ಕೆಲಸ ಬಾಕಿ ಆಗಿದೆ. ಈ ಕಾಮಗಾರಿ ಅರ್ಧದಲ್ಲಿ ನಿಂತ ಕಾರಣ ಮಳೆಗಾಲದಲ್ಲಿ ಮನೆಗಳಿಗೆ ನೀರು ಹರಿದು ಬರುತ್ತದೆ. ಇದನ್ನು ಪೂರ್ತಿಗೊಳಿಸಬೇಕು.-ರಾಜೀವ ಮೊಗವೀರ
ಜೆಎಲ್‌ಬಿ ವಾರ್ಡ್‌

ಒಳಚರಂಡಿ ಆರಂಭಿಸಲಿ
ಅರ್ಧದಲ್ಲಿ ನಿಂತ ಒಳಚರಂಡಿ ಕಾಮಗಾರಿ ಪುನಾರಂಭಿಸಬೇಕು. ಕೋಟ್ಯಂತರ ರೂ. ವ್ಯಯಿಸಿದ್ದರೂ ಕಾಮಗಾರಿ ಸಮರ್ಪಕವಾಗಿ ಮಾಡದೇ ಇದ್ದರೆ ಅದು ಪ್ರಯೋಜನಶೂನ್ಯವಾಗುತ್ತದೆ. ಹಾಗಾಗಿ ಜನರ ತೆರಿಗೆ ಹಣ ಪೋಲಾಗದಿರಲಿ.
-ಶಿವಕುಮಾರ್‌ ಮೆಂಡನ್‌
ನಾನಾಸಾಹೇಬ್‌ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next