Advertisement

ಕುಂದಾಪುರ: ಉಪ ನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳಿಲ್ಲ

06:37 PM Apr 04, 2023 | Team Udayavani |

ಕುಂದಾಪುರ: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳಿಲ್ಲ. ಇದರಿಂದಾಗಿ ಅಮೂಲ್ಯ ದಾಖಲೆಗಳನ್ನು ಕಚೇರಿಯ ಹೊರಗೆ ನೀಡಬೇಕಾದ ಸ್ಥಿತಿ ಬಂದಿದೆ. ಕಚೇರಿಯಲ್ಲಿ ಇಲಾಖಾ ಝೆರಾಕ್ಸ್‌ ಯಂತ್ರಗಳಿಲ್ಲ. ಇದರಿಂದಾಗಿ ಇಲಾಖೆಗೆ ಅವಶ್ಯವಿರುವ ದಾಖಲೆಗಳು, ಸಾರ್ವಜನಿಕರು ಬಯಸುವ ದಾಖಲೆಗಳು, ಕಡತಗಳಿಗೆ ಬೇಕಾದ ದಾಖಲೆಗಳನ್ನು ನಕಲು ತೆಗೆಯಬೇಕಾದರೆ ಖಾಸಗಿ ಅಂಗಡಿಗೆ ಕಳುಹಿಸಬೇಕು.

Advertisement

ಬ್ರಿಟಿಷ್‌ ಕಾಲದ ಕಡತಗಳೂ ಇಲ್ಲಿದ್ದು , ಕುಂದಾಪುರ ಉಪವಿಭಾಗ ಬ್ರಿಟಿಷ್‌ ಕಾಲದಿಂದಲೂ ಇದ್ದುದರಿಂದ ಹಳೆಯ ಕಾಲದ ದಾಖಲೆಗಳಿವೆ. ಈ ದಾಖಲೆಗಳು ವರ್ಷಾನುಗಟ್ಟಲೆ ಹಳೆಯ ಕಾಗದಗಳಾದ ಕಾರಣ ಅಚೀಚೆ ಕೊಂಡೊಯ್ಯುವಾಗ ಶಿಥಿಲವಾಗುತ್ತವೆ.

ಇದರಿಂದಾಗಿ ಕಡತಗಳೇ ನಾಶವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಖಾಸಗಿಯಲ್ಲಿ ದಾಖಲೆಗಳು ವ್ಯತ್ಯಯವಾದರೆ, ಕಳೆದುಹೋದರೆ, ಯಾವುದೋ ಕಡತದ ದಾಖಲೆ ಯಾವುದೋ ಕಡತದ ಜತೆ ಸೇರಿಕೊಂಡರೆ ಆಗುವ ಅಧ್ವಾನಗಳಿಗೆ ಹೊಣೆ ಯಾರು. ಅಮೂಲ್ಯ ಸರಕಾರಿ ದಾಖಲೆಗಳು, ಸಾರ್ವಜನಿಕ ದಾಖಲೆಗಳು ನಾಶವಾಗುವ ಸಾಧ್ಯತೆಗಳಿವೆ.

ತಾ| ಕಚೇರಿಯಲ್ಲೂ ಸಮಸ್ಯೆಯಾಗಿತ್ತು
ಈ ಹಿಂದೆ ತಾಲೂಕು ಕಚೇರಿಯಲ್ಲಿ ಇದೇ ಸಮಸ್ಯೆ ಆಗಿತ್ತು. ಮೂರು ಯಂತ್ರಗಳು ಕೈಕೊಟ್ಟು ಸ್ತಬ್ಧವಾಗಿದ್ದವು. ಬಳಿಕ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಸಮಸ್ಯೆ ಸರಿಯಾಗಿತ್ತು. ಈಗ ಉಪನೋಂದಣಿ ಕಚೇರಿ ಸರದಿ.

ಅನುದಾನ ಇಲ್ಲ
ಉಪನೋಂದಣಿ ಕಚೇರಿಯಲ್ಲಿ ಝೆರಾಕ್ಸ್‌ ಯಂತ್ರಗಳು ಇಲ್ಲ ಎಂದು ಖಾಸಗಿ ಅಂಗಡಿಯಲ್ಲಿ ಝೆರಾಕ್ಸ್‌ ಮಾಡಿಸಬೇಕೆಂದು ಇಲಾಖೆಗೂ ತಿಳಿದಿದೆ. ಹಾಗಿದ್ದೂ ಝೆರಾಕ್ಸ್‌ಗಾಗಿ ಹಣ ಬಿಡುಗಡೆಯಾಗುವುದಿಲ್ಲ. ವರ್ಷಕ್ಕೆ ಲಕ್ಷಾಂತರ ರೂ. ಝೆರಾಕ್ಸ್‌ಗಾಗಿ ಎಲ್ಲಿಂದ ತರಬೇಕು ಎಂದು ಯಾರೂ ಉತ್ತರಿಸುವುದಿಲ್ಲ. ಇದಕ್ಕಾಗಿ ಗ್ರಾಹಕರಿಂದ ವಸೂಲಿ ಮಾಡಬೇಕೇ, ಅದಕ್ಕೆ ರಸೀದಿ ಕೊಡಬೇಕೇ, ಹಾಗೆ ಹಣ ಪಡೆದಾಗ ಲೋಕಾಯುಕ್ತ ದಾಳಿ ಆದರೆ ಅವರಿಗೆ ಏನೆಂದು ಉತ್ತರಿಸಬೇಕೆಂದು ಭಯದಲ್ಲಿದ್ದಾರೆ ಇಲಾಖೆಯವರು.

Advertisement

ಐಟಿ ಸಂಕಷ್ಟ
ಆದಾಯ ತೆರಿಗೆ ಇಲಾಖೆಯು ಯಾವುದೋ ಉದ್ದೇಶದಿಂದ ನಾಲ್ಕು ಗ್ರಾಮಗಳ ಮೂರು ವರ್ಷಗಳ ಭೂ ದಾಖಲಾತಿಯನ್ನು ಕೇಳಿದೆ. ಆದರೆ ಅದನ್ನು ಪ್ರತಿ ತೆಗೆದು ಕೊಡಲು ಇಲಾಖೆಯಲ್ಲಿ ಅನುದಾನ ಇಲ್ಲ. ಕುಂದಾಪುರ ಉಪನೋಂದಣಿ ಕಚೇರಿ ವ್ಯಾಪ್ತಿಯ ಹೊಸಾಡು, ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮದ, 1999 ಜ.1 ರಿಂದ ಇತ್ತಿಚೀನ ದಿನಾಂಕದವೆಗಿನ ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿ , 1999ಜ.1ರಿಂದ 2002 ಡಿ.31ರ ವರೆಗಿನ ಸ್ಥಿರಾಸ್ತಿಯ ಕ್ರಯ ದಸ್ತಾವೇಜುಗಳ ನಕಲು ಪ್ರತಿಗಳನ್ನು ಆದಾಯ ತೆರಿಗೆ ಇಲಾಖೆ ಕೇಳಿದೆ.

ಪತ್ರ ಬರೆಯಲಾಗಿದೆ 
ಉಪನೋಂದಣಿ ಕಚೇರಿಗೆ ಒಂದು ಜೆರಾಕ್ಸ್‌ ಯಂತ್ರವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಈ ಕುರಿತಾಗಿ ಅನೇಕ ಪತ್ರ ವ್ಯವಹಾರಗಳನ್ನು ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಗೆ ಕಚೇರಿಯಿಂದ ಕ್ರಯ ದಸ್ತಾವೇಜುಗಳ ನಕಲು ಪ್ರತಿಗಳನ್ನು ನೀಡಲು ಅನುದಾನದ ಕೊರತೆ ಇರುವ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ.
-ಯೋಗೇಶ್‌, ಉಪನೋಂದಣಾಧಿಕಾರಿ, ಕುಂದಾಪುರ

ದುಬಾರಿ ಬಿಲ್‌
4 ಗ್ರಾಮಗಳ 1999ರಿಂದ ಇತ್ತೀಚಿನವರೆಗಿನ ಸ್ಥಿರಾಸ್ತಿ ಮಾರ್ಗಸೂಚಿ ದರ ಪಟ್ಟಿಯ ಸಾಫ್ಟ್‌ ಕಾಪಿಯನ್ನು ಈಗಾಗಲೇ ಇಮೈಲ್‌ ಮತ್ತು ಸಿ.ಡಿ. ಮೂಲಕ ಆದಾಯ ತೆರಿಗೆ ಇಲಾಖೆಗೆ ಕಳುಹಿಸಿದ್ದರೂ ಮಾಹಿತಿ ಕೇಳಿರುವ ಕ್ರಯ ದಸ್ತಾವೇಜುಗಳನ್ನು ಪಟ್ಟಿಮಾಡಿದಾಗ ಒಟ್ಟು 654 ದಸ್ತಾವೇಜುಗಳನ್ನು ನಕಲು ಮಾಡಿ ದೃಢೀಕರಿಸಿ ಪ್ರತಿ ನೀಡಬೇಕಾಗಿದೆ. ಆದರೆ ಈ ಕಚೇರಿಯಲ್ಲಿ ಜೆರಾಕ್ಸ್‌ ಯಂತ್ರ ಇಲ್ಲದೇ ಇರುವುದರಿಂದ ಹೊರಗೆ ಜೆರಾಕ್ಸ್‌ ಮಾಡಿಸುವುದಾದರೆ ಒಟ್ಟು 654 ದಸ್ತಾವೇಜುಗಳ ಸುಮಾರು 4,500 ಪುಟಗಳ ಎ3 ಪುಟ ಒಂದರ 12 ರೂ.ಯಂತೆ ಜೆರಾಕ್ಸ್‌ ವೆಚ್ಚವೇ 54 ಸಾವಿರ ರೂ. ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next