Advertisement

ಕುಂದಾಪುರ: ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕಳವು ಆರೋಪಿ ಮುಂಬಯಿಯಲ್ಲಿ ಸೆರೆ

11:22 PM Nov 06, 2022 | Team Udayavani |

ಕುಂದಾಪುರ: ಮೊಬೈಲ್‌ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ನಗರ ಠಾಣೆ ಪೊಲೀಸರಿಂದ ಸೆರೆ ಸಿಕ್ಕಿ, ಉಡುಪಿಯ ಹಿರಿಯಡ್ಕದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪೊಲಿಸರನ್ನು ತಳ್ಳಿ ಪರಾರಿಯಾದ ಆರೋಪಿ ಮೊಹಮ್ಮದ್‌ ರಾಹಿಕ್‌ (22) ನನ್ನು ಕುಂದಾಪುರ ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.

Advertisement

ಅ. 20 ರಂದು ಹಿರಿಯಡಕಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಕುಂದಾಪುರ ಠಾಣೆ ಹೆಡ್‌ ಕಾನ್ಸ್‌ಟೆಬಲ್‌ ಮಂಜುನಾಥ ಎಚ್‌. ಅವರು ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕುಂದಾಪುರ ನಗರ ಠಾಣೆ ವ್ಯಾಪ್ತಿಯ ಬೀಜಾಡಿಯ ರಾ.ಹೆ. ಬಳಿಯ ಮೊಬೈಲ್‌ ಅಂಗಡಿ ಕಳವು ಪ್ರಕರಣ ಸಂಬಂಧ ರಾಹಿಕ್‌ನನ್ನು ಅ. 19ರಂದು ಬಂಧಿಸಲಾಗಿತ್ತು. ಅ.20 ರಂದು ಕುಂದಾಪುರದ ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು. ಅದರಂತೆ ಹೆಡ್‌ ಕಾನ್ಸ್‌ಟೆಬಲ್‌ ಮಂಜುನಾಥ್‌ ಹಾಗೂ ಸಿಬಂದಿ ಬಸನಗೌಡ ಅವರು ಆರೋಪಿಯ ಜತೆಗೆ ಕುಂದಾಪುರದಿಂದ ಹೊರಟು ರಾತ್ರಿ 8.25ಕ್ಕೆ ಹಿರಿಯಡಕದ ಅಂಜಾರು ಕಾಜರಗುತ್ತುನಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ರಾಹಿಕ್‌ ಕರ್ತವ್ಯದಲ್ಲಿದ್ದ ಮಂಜುನಾಥ್‌ ಹಾಗೂ ಬಸನಗೌಡ ಅವರನ್ನು ತಳ್ಳಿ, ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಲೆಮರೆಸಿಕೊಂಡಿದ್ದ.

ಆರೋಪಿ ಪತ್ತೆಗೆ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಎಸ್‌ಐಗಳಾದ ಸದಾಶಿವ ಗವರೋಜಿ ಹಾಗೂ ಪ್ರಸಾದ್‌ ಕೆ. ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ಮುಂಬಯಿಯ ಮಾಂಡೋವಿಯಲ್ಲಿ ಪ್ರಸಾದ್‌ ನೇತೃತ್ವದ ತಂಡವು ಬಂಧಿಸಿದೆ.

ಸಿಬಂದಿಯಾದ ಸಂತೋಷ್‌ ಕುಮಾರ್‌, ಸಿದ್ದಪ್ಪ, ಸಂತೋಷ್‌, ಚಂದ್ರ ಈ ತಂಡದಲ್ಲಿದ್ದರು. ಆರೋಪಿ ರಾಹಿಕ್‌ ವೃತ್ತಿಪರ ಕಳ್ಳನಾಗಿದ್ದು, ಮಣಿಪಾಲದಲ್ಲಿ ಬೈಕ್‌ ಕಳವು, ಮುಂಬಯಿಯ ಹೊಟೇಲ್‌ನಲ್ಲಿಯೂ ಕಳವುಗೈದಿರುವುದಾಗಿ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next