Advertisement

ಕುಂದಾಪುರ : 13,725 ಹೆಕ್ಟೇರ್‌ ಭತ್ತದ ಕೃಷಿ ಗುರಿ

09:53 PM May 10, 2019 | Sriram |

ಕುಂದಾಪುರ: ಅವಿಭಜಿತ ಕುಂದಾಪುರ ತಾ|ನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 13,725 ಹೆಕ್ಟೇರ್‌ ಭತ್ತದ ಕೃಷಿಯ ಗುರಿ ಹೊಂದಲಾಗಿದೆ. ಕಳೆದ ಮುಂಗಾರಿನಲ್ಲಿ ತಾಲೂಕಿನಲ್ಲಿ ಒಟ್ಟು 13,728 ಹೆಕ್ಟೇರ್‌ ಭತ್ತದ ಕೃಷಿ ಮಾಡಲಾಗಿತ್ತು. ಈಗಾಗಲೇ ರೈತ ಸೇವಾ ಕೇಂದ್ರಗಳಲ್ಲಿ ಅಗತ್ಯದಷ್ಟು ಬಿತ್ತನೆ ಬೀಜವೂ ಲಭ್ಯವಿದೆ.

Advertisement

ಕುಂದಾಪುರದಲ್ಲಿ 2018ರಲ್ಲಿ ಮುಂಗಾರಿನಲ್ಲಿ 18,250 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಗುರಿ ಇದ್ದರೆ, 13,728 ಹೆಕ್ಟೇರ್‌ ಜಾಗದಲ್ಲಿ ಮಾತ್ರ ಬೆಳೆಯಲಾಗಿತ್ತು. ಹಿಂಗಾರಿನಲ್ಲಿ 2,500 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ನಿಗದಿಪಡಿಸಲಾಗಿದ್ದರೆ, 1,296 ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಅಂದರೆ ಗುರಿ ನಿಗದಿಪಡಿಸಿದ ಒಟ್ಟು 20,750 ಹೆಕ್ಟೇರ್‌ ಪ್ರದೇಶದ ಪೈಕಿ ಒಟ್ಟು 15,024 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿತ್ತು.

ಎಂ.ಒ.-4 ಬೀಜ ದಾಸ್ತಾನು
ಈಗಾಗಾಲೇ ತಾಲೂಕಿನಲ್ಲಿರುವ ವಂಡ್ಸೆ, ಬೈಂದೂರು ಹಾಗೂ ಕುಂದಾಪುರದ 3 ರೈತ ಸೇವಾ ಕೇಂದ್ರಗಳಲ್ಲಿಯೂ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಅಗತ್ಯದಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಇರಿಸಲಾಗಿದೆ. ಒಟ್ಟು 1,300 ಕ್ವಿಂಟಾಲ್‌ ಬೀಜ ಅಗತ್ಯವಿದ್ದು, ಆ ಪೈಕಿ ಈಗಾಗಲೇ 460 ಕ್ವಿಂಟಾಲ್‌ ಬೀಜ ಲಭ್ಯವಿದೆ. ಬಾಕಿ ಉಳಿದ ಬಿತ್ತನೆ ಬೀಜವನ್ನು ಕೂಡ ಶೀಘ್ರ ತರಿಸಲಾಗುವುದು. ಈ ಬಾರಿ ಎಂ.ಒ.- 4 ಬೀಜದ ಕೊರತೆಯಿಲ್ಲ. ಅಗತ್ಯದಷ್ಟು ಬೀಜ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿಯಂತೆ ಎಂ.ಒ.-4 ಬೀಜ ಎಲ್ಲ ಕಡೆಗಳಲ್ಲೂ ಬೇಡಿಕೆ ಹೆಚ್ಚಾಗಿದ್ದು, ಸ್ವಲ್ಪ ಮಟ್ಟಿಗೆ ಕೊರತೆಯಾಗಿತ್ತು.

600 ಹೆಕ್ಟೇರ್‌ ಗುರಿ
ಕಳೆದ ಬಾರಿ ಕೂರಿಗೆ ಬಿತ್ತನೆ 8 ಹೆಕ್ಟೇರ್‌, ಡ್ರಮ್‌ ಸೀಡರ್‌ ಬಿತ್ತನೆ 63 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾಡಲಾಗಿತ್ತು. ಈ ಬಾರಿ ಕೂರಿಗೆ ಬಿತ್ತನೆ ಹಾಗೂ ಡ್ರಮ್‌ ಸೀಡರ್‌ ಒಟ್ಟು 600 ಹೆಕ್ಟೇರ್‌ ಗುರಿ ಹೊಂದಲಾಗಿದೆ. ಕಳೆದ ಬಾರಿ 912 ಹೆಕ್ಟೇರ್‌ ಯಾಂತ್ರೀಕೃತ ಕೃಷಿಯಾಗಿದ್ದರೆ, ಈ ಬಾರಿ 2 ಸಾವಿರ ಹೆಕ್ಟೇರ್‌ ಯಾಂತ್ರೀಕೃತ ಕೃಷಿ ಮಾಡುವ ಗುರಿ ನಿಗದಿಪಡಿಸಲಾಗಿದೆ.

ಕಳೆನಾಶಕ: ಕಾರ್ಯಗಾರ
ಕಳೆದ ಬಾರಿ ಹಾಲಾಡಿ, ಹಟ್ಟಿಯಂಗಡಿ ಸಹಿತ ಹಲವೆಡೆಗಳಲ್ಲಿ ಭತ್ತದ ಕೃಷಿಗೆ ಕಳೆ ಬಾಧೆ ಎದುರಾಗಿತ್ತು. ಈ ಬಾರಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಕಳೆ ನಾಶಕದ ಬಗ್ಗೆ ವಂಡ್ಸೆಯ ಕುಳಂಜೆಯಲ್ಲಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ಕಾರ್ಯಗಾರಹಮ್ಮಿಕೊಳ್ಳಲಾಗಿದೆ.

Advertisement

ಬಿತ್ತನೆ ಬೀಜ ಲಭ್ಯ
ಈ ಬಾರಿ ಆರಂಭಿದಲ್ಲಿಯೇ ಅಗತ್ಯದಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಇರಿಸಲಾಗಿದೆ. ಈಗಾಗಲೇ ಎಲ್ಲ 3 ರೈತ ಸಂಪರ್ಕ ಕೇಂದ್ರ ಗಳಿಗೆ ಪೂರೈಕೆ ಮಾಡಲಾಗಿದೆ. ಕಳೆದ ಬಾರಿ ಹೊಸದಾಗಿ ಪ್ರಯೋಗ ಮಾಡಲಾದ ಎಂ.ಒ-21 ಹಾಗೂ ಎಂ.ಒ.-22 ತಳಿಗಳು ಕೂಡ ಉತ್ತಮ ಫಸಲು ನೀಡಿದೆ. ಈ ಬಾರಿ ಯಾಂತ್ರೀಕೃತ ಕೃಷಿ ಹೆಚ್ಚಿಸುವ ಬಗ್ಗೆಯೂ ಗಮನ ನೀಡಲಾಗಿದೆ.
– ವಿಶ್ವನಾಥ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ, ಕೃಷಿ ಇಲಾಖೆ, ಕುಂದಾಪುರ

ಅಂಕಿ ಅಂಶಗಳಲ್ಲಿ ಬಿತ್ತನೆ
ಗುರಿ (ಹೆಕ್ಟೇರ್‌ಗಳಲ್ಲಿ)
ವರ್ಷ      ಗುರಿ        ಆಗಿರುವ ಬಿತ್ತನೆ
2018    18,250         13,728
2017     18,250        17,850
2016     18250         17,550
2015     18,250        17,250

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next