Advertisement

ಗ್ರಾಮದ ಗದ್ದುಗೆಯೇರಿದರೂ ಬಿಡದ ಕೂಲಿ ಕಾಯಕ!

01:00 AM Jan 30, 2022 | Team Udayavani |

ಕುಂದಾಪುರ: ಗ್ರಾಮದ ಗದ್ದುಗೆ ಆಗಿರಲಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರ ಆಗಿರಲಿ, ಒಮ್ಮೆ ಸಿಕ್ಕರೆ ಬಹುತೇಕ ಜನರ ಜೀವನ ಶೈಲಿಯೇ ಬದಲಾಗುತ್ತದೆ. ಆದರೆ ಇಲ್ಲೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿ ಒಂದು ವರ್ಷವಾದರೂ ಜೀವನೋಪಾಯಕ್ಕಾಗಿ ಕೂಲಿ ಕಾಯಕವನ್ನು ಬಿಟ್ಟಿಲ್ಲ. ಅಂದಿನ ಗುಡಿಸಲ್ಲೇ ಬದುಕಿನ ಬಂಡಿ ಸಾಗುತ್ತಿದೆ.

Advertisement

ಇದು ಕುಂದಾಪುರ ದಿಂದ 5 ಕಿ.ಮೀ. ದೂರದ ತಲ್ಲೂರು ಗ್ರಾ.ಪಂ.ನ ಅಧ್ಯಕ್ಷೆ, ಮೂಲತಃ ಬಾಗಲ ಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ನವಾಸಿ ಭೀಮವ್ವ ಅವರ ಪ್ರಾಮಾಣಿಕ ಆಡಳಿತಕ್ಕೆ ಹಿಡಿದ ಕೈಗನ್ನಡಿ.

ಕಲಿತದ್ದು 2ನೇ ತರಗತಿ
ಭೀಮವ್ವ ಕಲಿತಿರುವುದು ಕೇವಲ 2ನೇ ತರಗತಿ. ಸಹಿ ಹಾಕುವುದು, ದೈನಂದಿನ ವ್ಯವಹಾರ ಎಲ್ಲವೂ ಸಲೀಸು. ಎಲ್ಲಕ್ಕಿಂತ ಹೆಚ್ಚು ಇವರದ್ದು ಒಂದು ರೂಪಾಯಿಗೂ ಕೈ ಚಾಚದಷ್ಟು ಸ್ವಾಭಿಮಾನ. ಜೀವನಕ್ಕೆ ನೆಚ್ಚಿಕೊಂಡಿರುವುದು ಕೂಲಿ. ಇದು ಊರವರಿಗೆ ಭೀಮವ್ವನ ಮೇಲೆ ಇನ್ನಷ್ಟು ಅಭಿಮಾನಕ್ಕೆ ಕಾರಣ.

ರಬ್ಬರ್‌ಸ್ಟಾಂಪ್‌ ಅಧ್ಯಕ್ಷೆ ಅಲ್ಲ
ಆರಂಭದ ಗ್ರಾಮಸಭೆಗಳಲ್ಲಿ ಅಷ್ಟೇನು ಸಕ್ರಿಯರಾಗಿರದಿದ್ದ ಭೀಮವ್ವ, ದಿನ ಕಳೆದಂತೆ, ತಮ್ಮ ಇತಿಮಿತಿಯಲ್ಲಿ ಉತ್ತಮ ರೀತಿಯಲ್ಲಿಯೇ ಅಧಿಕಾರ ಚಲಾಯಿಸ ತೊಡಗಿದ್ದಲ್ಲದೆ, ತಾನು ರಬ್ಬರ್‌ಸ್ಟಾಂಪ್‌ ಅಧ್ಯಕ್ಷೆ ಅಲ್ಲ ಅನ್ನುವುದನ್ನು ನಿರೂಪಿಸಿದ್ದಾರೆ.

Advertisement

52 ವರ್ಷ ಪ್ರಾಯದ ಭೀಮವ್ವ 27 ವರ್ಷಗಳ ಹಿಂದೆ ಪತಿ ಮರಿಯಪ್ಪ, ಹಿರಿಯ ಮಗ ರಂಗಪ್ಪನೊಂದಿಗೆ ಉಡುಪಿ ಜಿಲ್ಲೆಗೆ ಬಂದಿದ್ದರು. ಅಲ್ಲಿ ಇಲ್ಲಿ ನೆಲೆಸಿ 14 ವರ್ಷಗಳಿಂದ ತಲ್ಲೂರಿನ ಪಿಂಗಾಣಿಗುಡ್ಡೆಯ 5 ಸೆಂಟ್ಸ್‌ ಕಾಲನಿಯಲ್ಲಿ ಪುಟ್ಟ ಗುಡಿಸಲು ಮನೆಯಲ್ಲಿದ್ದಾರೆ. ಕೂಲಿ ಕೆಲಸದಲ್ಲಿ ತಂಡದ ನಾಯಕಿಯೂ
ಆಗಿದ್ದಾರೆ.

ಅಧ್ಯಕ್ಷ ಗಾದಿ ಹೇಗೆ?
ಕೂಲಿ ಕಾಯಕದ ಜತೆಗೆ ಪರಿಸರದ ಆಗುಹೋಗುಗಳಿಗೂ ಸ್ಪಂದಿಸುವ ಅವರ ಗುಣವೇ ಪಂಚಾಯತ್‌ ಅಧ್ಯಕ್ಷೆಯನ್ನಾಗಿಸಿದೆ. ಸ್ಥಳೀಯ ನಾಯಕರೊಬ್ಬರು ಭೀಮವ್ವನಲ್ಲಿರುವ ನಾಯಕತ್ವ ಗುಣ ಗುರುತಿಸಿ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಗ್ರಹಿಸಿದರು. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದಲ್ಲದೆ, ಗೆದ್ದು ಬಂದ ಭೀಮವ್ವಗೆ ಎಸ್‌ಟಿ ಮೀಸಲಾತಿಯಡಿ ಅಧ್ಯಕ್ಷೆ ಗಾದಿಯು ಒದಗಿ ಬಂತು.

ಓರ್ವ ಪುತ್ರ ಯೋಧ
ನಾಲ್ವರು ಪುತ್ರರಲ್ಲಿ ಎರಡನೆಯವರಾದ ಶಿವಾನಂದ ಯೋಧನಾಗಿದ್ದು, ಇನ್ನೋರ್ವ ಪುತ್ರನನ್ನು ಸಹ ಯೋಧನನ್ನಾಗಿ ಮಾಡುವ ಆಸೆ ಭೀಮವ್ವರದು. ಹಿರಿಯ ಪುತ್ರ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಮನೆಯಲ್ಲಿದ್ದಾರೆ. ಗುಡಿಸಲು ವಾಸಿಯಾಗಿದ್ದರೂ ಭೀಮವ್ವ ಗ್ರಾಮಸ್ಥರ ನೋವುಗಳಿಗೆ ಮಾತ್ರ ಸದಾ ಸ್ಪಂದಿಸುತ್ತಾರೆ.

ಊರಿಗೆ ವರ್ಷಕ್ಕೊಂದು ಸಲ ಜಾತ್ರೆಗೆ ಹೋಗಿ ಬರುತ್ತೇವೆ. ಈಗ ಇದೇ ನನ್ನೂರು. ಇಲ್ಲೇ ಕೊನೆಯ ತನಕ ಇರುವಾಸೆ. ಗ್ರಾಮಸ್ಥರು, ಗ್ರಾ.ಪಂ. ಸದಸ್ಯರು ನನಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ಆಡಳಿತ ಕೊಡಲು ಪ್ರಯತ್ನಿಸುತ್ತೇನೆ.
– ಭೀಮವ್ವ ತಲ್ಲೂರು ಗ್ರಾ.ಪಂ. ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next