Advertisement

ಕುಂದಾಪುರ ತಾ|ಆಸ್ಪತ್ರೆ: ಎಲ್ಲ ಔಷಧ ಲಭ್ಯ, ವೈದ್ಯರ ಕೊರತೆಯಿಲ್ಲ

06:10 AM Jun 17, 2018 | Team Udayavani |

ಕುಂದಾಪುರ: ಮುಂಗಾರು ಚುರುಕುಗೊಂಡಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಕಾಲವೂ ಆಗಿದೆ. ಇದಕ್ಕಾಗಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸಾಕಷ್ಟು ಔಷಧ ತರಿಸಲಾಗಿದೆ. ವೈದ್ಯರ ಕೊರತೆಯೂ ಇಲ್ಲ. ಆದರೆ ನರ್ಸ್‌ ಹಾಗೂ ಸಿಬಂದಿ ಕೊರತೆ ಸೇವೆಗೆ ತೊಡಕಾಗುವ ಸಾಧ್ಯತೆಯಿದೆ.

Advertisement

ಮಹಡಿಯ ದುರಸ್ತಿ ಪೂರ್ಣ
ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಮಹಡಿಯಲ್ಲಿ ಬಿರುಕು ಬಿಟ್ಟಿದ್ದರಿಂದ ಕಳೆದ ಬಾರಿಯ ಮಳೆಗಾಲದಲ್ಲಿ ಆಸ್ಪತ್ರೆಯ ಅನೇಕ ಕಡೆ ಸೋರಿಕೆಯಿಂದಾಗಿ ಚಿಕಿತ್ಸೆಗೆ ಬಂದ ರೋಗಿಗಳು ತೊಂದರೆ ಅನುಭವಿಸಿದ್ದರು. ಆದರೆ ಈ ಬಾರಿ ದ್ರವ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಸುಮಾರು 35 ಲಕ್ಷ ರೂ. ಬಿಡುಗಡೆಯಾಗಿದ್ದು, ಅದರ ಅನುದಾನದಲ್ಲಿ ಆಸ್ಪತ್ರೆ ದುರಸ್ತಿ ಮಾಡಲಾಗಿದೆ.  

ಹೊಸ ಸೌಲಭ್ಯಗಳು
ಈಗಾಗಲೇ ತಾಲೂಕು ಆಸ್ಪತ್ರೆ ಪಕ್ಕದಲ್ಲೇ ಹೊಸದಾಗಿ 100 ಬೆಡ್‌ಗಳಿರುವ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹೊಸದಾಗಿ 3 ಬೆಡ್‌ಗಳಿರುವ ತೀವ್ರ ನಿಗಾ ಘಟಕ, ಡಯಾಲಿಸೀಸ್‌ ಕೇಂದ್ರ, ನಿಫಾ ಕಾಯಿಲೆಯ ಚಿಕಿತೆಗಾಗಿ 6 ಬೆಡ್‌ಗಳ ನಿಫಾ ವಾರ್ಡನ್ನು ಆರಂಭಿಸಲಾಗಿದೆ.

ಬೇಡಿಕೆಯಷ್ಟು ಔಷಧ ಲಭ್ಯ
ಸಾಂಕ್ರಾಮಿಕ ರೋಗ, ಮಳೆಗಾಲ ಸಂಬಂಧಿ ಕಾಯಿಲೆಗಳಿಗೆ ಅಗತ್ಯವಿರುವಷ್ಟು ಔಷಧಗಳನ್ನು ತರಿಸಲಾಗಿದೆ. ಅಗತ್ಯಬಿದ್ದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮೂಲಕ ಜನೌಷಧ ಕೇಂದ್ರದಿಂದ ತರಿಸಲಾಗುವುದು ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರೋಬರ್ಟ್‌ ರೆಬೆಲ್ಲೋ ತಿಳಿಸಿದ್ದಾರೆ.

10 ತಜ್ಞ ವೈದ್ಯರು ಲಭ್ಯ
ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಜ್ಞರು, ಜನರಲ್‌ ಸರ್ಜನ್‌, ಜನರಲ್‌ ಫಿಸೀಶಿಯನ್‌, ಸ್ತ್ರೀರೋಗ ತಜ್ಞರು, ಎಲುಬು -ಕೀಲು ರೋಗ ತಜ್ಞರು, ಮಕ್ಕಳ ತಜ್ಞರು, ಕ್ಷ-ಕಿರಣ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ದಂತ ವೈದ್ಯಾಧಿಕಾರಿ ಲಭ್ಯವಿದ್ದಾರೆ. ಆದರೆ ಕಿವಿ- ಮೂಗು, ಗಂಟಲು ರೋಗ ತಜ್ಞ ವೈದ್ಯರ ಕೊರತೆಯಿದೆ. 

Advertisement

24 ಬೆಡ್‌ಗಳ ಕೊರತೆ
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 100 ಬೆಡ್‌ಗಳು ಇರಬೇಕಿದ್ದು, ಆದರೆ ಈಗ ಇರುವುದು ಕೇವಲ 76 ಮಾತ್ರ. ಕೊರತೆ ಹಿನ್ನೆಲೆಯಲ್ಲಿ 12 ಬೆಡ್‌ಗಳನ್ನು ಹೆಚ್ಚುವರಿಯಾಗಿ ತರಿಸಲಾಗಿದೆ. ಈಗ 24 ಬೆಡ್‌ಗಳ ಕೊರತೆಯಿದೆ.

ತುರ್ತಾಗಿ ಬೇಕಾಗಿರುವುದು
ಸದ್ಯ 3 ಆ್ಯಂಬುಲೆನ್ಸ್‌ ಚಾಲಕರಿದ್ದು, ನಿರಂತರ 24 ಗಂಟೆಗಳ ಕಾಲ ಸೇವೆ ನೀಡಲು ಒಟ್ಟು 4 ಚಾಲಕರ ಅಗತ್ಯವಿದೆ. ಹೊಸ ಸ್ಕ್ಯಾನಿಂಗ್‌ ಕೇಂದ್ರ ತುರ್ತಾಗಿ ಬೇಕಾಗಿದೆ.

ಎಲ್ಲ ಸೇವೆಗೂ ಸಿದ್ದ
ಮಳೆಗಾಲದಲ್ಲಿ ಎಲ್ಲ ರೀತಿಯ ಸೇವೆಯನ್ನು ನೀಡಲು ಸಿದ್ದರಿದ್ದೇವೆ. ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆಗೆ ಲಭ್ಯ ಔಷಧಗಳನ್ನು ಈಗಾಗಲೇ ಪೂರೈಸಲಾಗಿದೆ. ರೋಗಿಗಳಿಗೆ ನಿರಂತರ 24 ಗಂಟೆಗಳ ಕಾಲ ಸಕಲ ಸೇವೆಯನ್ನು ನೀಡಲು ಎಲ್ಲ ತಯಾರಿ ನಡೆಸಲಾಗಿದೆ.
– ಡಾ| ರೋಬರ್ಟ್‌ ರೆಬೆಲ್ಲೋ,
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

ಗ್ರೂಪ್‌ -ಡಿ : 14 ಹುದ್ದೆ ಖಾಲಿ
ಖಾಲಿಯಿರುವ ಹುದ್ದೆಗಳು 1 ಹಿರಿಯ ಸ್ಟಾಫ್‌ ನರ್ಸ್‌, 1 ಇಸಿಜಿ ಟೆಕ್ನಿಶಿಯನ್‌, 1 ನೇತ್ರಾಧಿಕಾರಿ, 1 ಹಿರಿಯ ಲ್ಯಾಬ್‌ ಟೆಕ್ನಿಶಿಯನ್‌, ಫೀಲ್ಡ್‌ ಕಾರ್ಯಕ್ಕಾಗಿ 1 ಕಿರಿಯ ಮಹಿಳಾ ಸಹಾಯಕಿ ಖಾಲಿಯಿವೆ. ಇನ್ನೂ 22 ಗ್ರೂಪ್‌ ಡಿ ಹುದ್ದೆ ಮಂಜೂರಾಗಿದ್ದರೂ, ಅದರಲ್ಲಿ ಕೇವಲ 8 ಮಾತ್ರ ಭರ್ತಿಯಾಗಿದ್ದು, ಬಾಕಿಯುಳಿದ 14 ಹುದ್ದೆಗಳು ಖಾಲಿಯಾಗಿವೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next