Advertisement

Kundapur: ಇನ್ನಾದರೂ ದೊರೆತೀತೇ 94ಸಿಸಿ, 94 ಡಿ ಹಕ್ಕು ಪತ್ರ?

04:20 PM Feb 09, 2024 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯ ಕೋಡಿ ಸಮುದ್ರತೀರದಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಮೀನುಗಾರರಿಗೆ ಹಾಗೂ
ಖಾರ್ವಿಕೇರಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಮೀನುಗಾರರಿಗೆ ಹಕ್ಕುಪತ್ರ ಕೊಡಿಸುವ ಸಂಬಂಧ ಆಡಳಿತ ಚುರುಕಾಗಿದೆ. ತತ್‌ ಸಂಬಂಧ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಸಹಾಯಕ ಕಮಿಷನರ್‌, ತಹಶೀಲ್ದಾರ್‌ ಹಾಗೂ ಕಂದಾಯ ಅಧಿಕಾರಿಗಳ ಸಭೆ ನಡೆಸಿದ್ದು ಜಿಲ್ಲಾಧಿಕಾರಿಗಳು ಕೂಡ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

94 ಸಿಸಿ ಹಕ್ಕುಪತ್ರ
ಕೋಡಿ ಭಾಗದ 118 ಮೀನುಗಾರ ಕುಟುಂಬಗಳಿಗೆ ಸಿಆರ್‌ಝಡ್‌ ಪ್ರದೇಶ ಎಂದು ನಗರ ವ್ಯಾಪ್ತಿ ಜನರಿಗೆ ದೊರೆಯುವ 94ಸಿಸಿ
ಹಕ್ಕುಪತ್ರ ನಿರಾಕರಿಸ ಲಾಗಿತ್ತು. ಈಗ ಈ ಕುರಿತಾದ ಎಲ್ಲ ಕಾನೂನು ತೊಡಕುಗಳಿಗೆ ತೆರೆ ಬಿದ್ದು ಕೆಲವು ತಿಂಗಳ ಹಿಂದೆ 97 ಮಂದಿಗೆ ಹಕ್ಕುಪತ್ರ ದೊರೆತಿದೆ. ಇತರರಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಹಾಗೂ ಹೊಸದಾಗಿ ಇನ್ನಷ್ಟು ಮಂದಿ ಸರದಿ ಸಾಲಿನಲ್ಲಿ ಇದ್ದಾರೆ.

ಹೊಸಬರಲ್ಲ
ತಲೆತಲಾಂತರಗಳಿಂದ ಈ ಭಾಗದಲ್ಲಿ ಮೀನುಗಾರ ಕುಟುಂಬಗಳು ನೆಲೆಸಿದ್ದರೂ ಇನ್ನೂ ಸ್ವಂತ ನಿವೇಶನ ಹೊಂದಿಲ್ಲ. ಸಣ್ಣಪುಟ್ಟ ಮನೆಗಳಲ್ಲಿ ವಾಸಿಸುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ. ಹಾಗಾಗಿ ಇವರಿಗೆ ಸರಕಾರದ ವಸತಿ ಯೋಜನೆಗಳ ಪ್ರಯೋಜನ ಲಗಾವು ಆಗುವುದಿಲ್ಲ. ಬ್ಯಾಂಕಿನಿಂದ ಸಾಲ ತೆಗೆಯಲಾಗುವುದಿಲ್ಲ. ತಮ್ಮದೇ ಭೂಮಿ ಎಂದು ಹೇಳಿಕೊಳ್ಳುವಂತಿಲ್ಲ. ಹೇಳಿದರೂ ನೀಡಲು ದಾಖಲೆ ಏನೂ ಇಲ್ಲ.

ಮಾಲಕತ್ವ
ಕೋಡಿಯಲ್ಲಿ ಹಕ್ಕುಪತ್ರಕ್ಕಾಗಿ 118 ಮಂದಿ ಅರ್ಜಿ ಸಲ್ಲಿಸಿದ್ದು ಈ ಪೈಕಿ 97 ಜನರ ಅರ್ಜಿ ಪುರಸ್ಕೃತವಾಗಿತ್ತು. ಅಷ್ಟೂ ಮಂದಿಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಚುನಾವಣೆಯ ತರಾತುರಿಯಲ್ಲಿ 2.75 ಸೆಂಟ್ಸ್‌ನ ಮಾಲಕತ್ವದ ಹಕ್ಕುಪತ್ರ ದೊರೆತಿತ್ತು. ಉಳಿಕೆ ಮಂದಿಯ ಅರ್ಜಿ ಮನೆ ಇಲ್ಲ, ವಿಳಂಬವಾಗಿ ಅರ್ಜಿ ಸಲ್ಲಿಸಿದ್ದು ಮೊದಲಾದ ಕಾರಣಗಳನ್ನು ನೀಡಿ ತಿರಸ್ಕರಿಸಲಾಗಿದೆ.

ಅಂದರೆ ಅವರ್ಯಾರೂ ಅನರ್ಹರಲ್ಲ. ಹಾಗಿದ್ದರೂ ನಿರಾಕರಿಸಲಾಗಿದೆ. ಪುರಸಭೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವ ದಿನ ಸನ್ನಿಹಿತವಾಗಿದ್ದರೂ ಆದ್ಯತೆಯ ಕೆಲಸವಾಗಿ ಮಾಡುವ ಬದಲು ವಿಳಂಬ ಸೂತ್ರ ಅನುಸರಿಸಿದ್ದಕ್ಕೆ ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತತ್‌ಕ್ಷಣ ಮಾಡಿಕೊಡುವಂತೆ ಸೂಚನೆ ನೀಡಿದ್ದರು. ಈಗ ಬಾಕಿ ಉಳಿದವುಗಳನ್ನು ಮಾಡಿ ಕೊಡುವಂತೆ ಈಗಿನ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಸೂಚಿಸಿದ್ದಾರೆ.

Advertisement

ಬೀಜಾಡಿಗಿಲ್ಲ
ಸಿಆರ್‌ಝಡ್‌ ಕಾನೂನಿನ 1992ರಲ್ಲಿ ಜಾರಿಯಾದ ನಿಯಮದ ಪ್ರಕಾರ ಈ ಭಾಗದ ಜನರಿಗೆ ಮನೆ ಸ್ಥಳ ಮಂಜೂರು ಮಾಡಲು
ಕಾನೂನಿನ ಅಡ್ಡಿಯಿಲ್ಲ. ಕೋಡಿ ಪ್ರದೇಶ ಸಿಆರ್‌ ಝಡ್‌ 2 ವ್ಯಾಪ್ತಿಯಲ್ಲಿದ್ದು ಅದರಂತೆ 1992ಕ್ಕಿಂತ ಮೊದಲು ರಸ್ತೆಯಿದ್ದು ರಸ್ತೆಯ ಒಂದು ಭಾಗ ಸಮುದ್ರವಾದರೆ ಇನ್ನೊಂದು ಭಾಗದಲ್ಲಿ ಸಿಆರ್‌ ಝಡ್‌ ನಿಯಮ ಅನ್ವಯವಾಗುವುದಿಲ್ಲ. ಸಿಆರ್‌ ಝಡ್‌ 2 ವ್ಯಾಪ್ತಿಗೆ ಕುಂದಾಪುರ ಪುರಸಭೆಯನ್ನು ಮಾತ್ರ ಸೇರಿಸಲಾಗಿದೆ. ಹಾಗಾಗಿ ಗೋಪಾಡಿ, ಬೀಜಾಡಿ ಕಡೆಯವವರಿಗೆ ಈ ನಿಯಮದಂತೆ ಮನೆ ನಿವೇಶನ ದೊರೆಯುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಪ್ರಯತ್ನ ಆಗಬೇಕಿದೆ.

ಸಭೆ
ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಸಹಾಯಕ ಕಮಿಷನರ್‌ ರಶ್ಮೀ ಎಸ್‌.ಆರ್‌., ತಹಶೀಲ್ದಾರ್‌ ಶೋಭಾಲಕ್ಷ್ಮೀ ಅವರ ಜತೆ 94ಸಿಸಿ ಹಾಗೂ 94ಡಿ ಹಕ್ಕುಪತ್ರದ ಸಲುವಾಗಿ ಸಭೆ ನಡೆಸಿದರು. ಸಮಸ್ಯೆಗಳ ಕುರಿತು ಕೇಳಿ ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡಬೇಕೆಂದು ಸೂಚಿಸಿದರು.

ಡಿಸಿ ಭೇಟಿ
ಖಾರ್ವಿಕೇರಿಯಲ್ಲಿ ತಲೆತಲಾಂತರದಿಂದ ಇರುವವರಿಗೆ 94ಡಿ ಅನ್ವಯ ಹಕ್ಕುಪತ್ರ ನೀಡುವ ಸಲುವಾಗಿ ಕಳೆದ 6 ವರ್ಷಗಳಿಂದ ಪ್ರಯತ್ನ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಶರಶ್ಚಂದ್ರ ಹೆಗ್ಡೆ ಅವರು ಈ ಬಗ್ಗೆ ಲೋಕಾಯುಕ್ತರ ಗಮನಕ್ಕೂ ತಂದಿದ್ದಾರೆ. ಕೆ.ಬಿ. ಖಾರ್ವಿ, ಪ್ರಕಾಶ್‌ ಆರ್‌.ಖಾರ್ವಿ, ದಿನಕರ ಖಾರ್ವಿ ಮೊದಲಾದವರು ಕೂಡ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

135 ಮಂದಿ ಅರ್ಜಿ ಹಾಕಿದ್ದು ಪುರಸಭೆ ಜಿಪಿಎಸ್‌ ಕಾರ್ಯ ನಡೆಸಿ 105 ಮಂದಿಯ ದಾಖಲಾತಿ ನಡೆದಿದೆ. ಇನ್ನೂ 30 ಮಂದಿ ಅರ್ಜಿದಾರರ ಜಿಪಿಎಸ್‌ ಕೆಲಸ ಬಾಕಿ ಇದೆ. ತಹಶೀಲ್ದಾರ್‌ ಕಚೇರಿಯಿಂದ ಈ ಹಿಂದೊಮ್ಮೆ ಕಳುಹಿಸಿದ್ದ ಕಡತ ತಾಂತ್ರಿಕ ಕಾರಣದಿಂದ ಮರಳಿ ಬಂದಿದ್ದು ಮತ್ತೆ ಡಿಸಿ ಕಚೇರಿಗೆ ಕಡತ ಹೊಸದಾಗಿ ಹೋಗಬೇಕಿದೆ. ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಅವರು ಖಾರ್ವಿಕೇರಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿ ಹಕ್ಕುಪತ್ರ ಕೊಡಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.

“ಸುದಿನ’ ವರದಿ
ಕೋಡಿ ಜನರಿಗೆ 94ಸಿಸಿ ಹಕ್ಕುಪತ್ರ ಹಾಗೂ ಖಾರ್ವಿಕೇರಿ ಜನರಿಗೆ 94ಡಿ ಹಕ್ಕುಪತ್ರ ದೊರೆಯದ ಕುರಿತು “ಉದಯವಾಣಿ’ “ಸುದಿನ’ ಸತತ ವರದಿಗಳನ್ನು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next