Advertisement

ಕುಂದಾಪುರ: ತಾಲೂಕಿನ ವಿವಿಧೆಡೆ ಬತ್ತಿದ ನದಿಗಳು

09:08 AM May 22, 2019 | sudhir |

ಕುಂದಾಪುರ: ಪಂಚ ನದಿಗಳ ನಾಡು ಎಂದು ಕುಂದಾಪುರ ಪ್ರಸಿದ್ಧ. ಇದಕ್ಕಾಗಿಯೇ ಇದನ್ನು ಪಂಚಗಂಗಾವಳಿ ಎನ್ನಲಾಗುತ್ತದೆ. ಸಮುದ್ರದ ತಟದಲ್ಲೇ ಕುಂದಾಪುರ ನಗರ ಇದೆ. ತಾಲೂಕಿನಾದ್ಯಂತ 8ಕ್ಕಿಂತ ಹೆಚ್ಚು ನದಿ, ಹೊಳೆಗಳು ಹರಿಯುತ್ತವೆ. ಆದರೆ ನೀರಿಲ್ಲದೇ ಸಮಸ್ಯೆ ಬಿಗಡಾಯಿಸಿದೆ. ಇದ್ದರೂ ಉಪ್ಪುನೀರು. ಬಳಕೆಗೆ ಅಯೋಗ್ಯ. ಪುಣ್ಯಕ್ಷೇತ್ರಗಳಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಹರಿವ ಹೊಳೆ ಸ್ತಬ್ಧವಾಗುತ್ತಿದೆ. ಸದಾ ನೀರಿನ ಜುಳು ಜುಳು ಕೇಳುವ ಹೊಳೆಯಲ್ಲಿ ಕರಿಕಲ್ಲಿನ ದರ್ಶನ. ಕಾಲಿಟ್ಟರೆ ಬಿಸಿ ಮರಳು.

Advertisement

ನದಿಗಳು
ವಾರಾಹಿ, ಸೌಪರ್ಣಿಕಾ, ಕುಬಾj, ಚಕ್ರಾ, ಜಂಬೂ, ಹಾಲಾಡಿ ಹೊಳೆ, ವಿಮಲಾ ನದಿ, ಸೀತಾ, ಸುಮನಾವತಿ ನದಿ ಹೀಗೆ ಬೇರೆ ಬೇರೆ ನದಿ ಹೊಳೆಗಳು ತಾಲೂಕಿನ ವಿವಿಧೆಡೆ ಹರಿಯುತ್ತವೆ. ಆದರೆ ಸಮುದ್ರದ ಸಮೀಪದ ಕೆಲವು ಕಿಮೀ. ನಷ್ಟು ದೂರದವರೆಗೆ ಉಪ್ಪುನೀರು (ಹಿನ್ನೀರು) ತುಂಬಿರುತ್ತದೆ. ಆದ್ದರಿಂದ ಈ ನೀರು ಕುಡಿಯಲು ಹಾಗೂ ಕೃಷಿ ಬಳಕೆಗೆ ಅಸಾಧ್ಯ. ಸಿಗಡಿ ಮೀನು ಸಾಕಾಣಿಕೆಗೆ ಕೂಡಾ ಇದರಿಂದ ಅನನುಕೂಲವೇ.

ನೀರಿಲ್ಲ
ಪುರಸಭೆ ಸಹಿತ ಸುತ್ತಲಿನ ಐದು ಪಂಚಾಯತ್‌ಗಳಿಗೆ ನೀರು ಕೊಡುವ ಜಂಬೂ ನದಿಯಲ್ಲಿ ಸಮೃದ್ಧ ನೀರಿದೆ. ವಾರಾಹಿಯಲ್ಲಿ ಬೇಕಾದಷ್ಟು ನೀರಿದೆ. ಆದರೆ ಕುಡಿಯಲು ಬೇಕಾದ ಪ್ರಮಾಣದಲ್ಲಿ ಸದ್ಬಳಕೆಯಾಗುತ್ತಿಲ್ಲ. ವಾರಾಹಿ ನದಿಗೆ ಸಪರ್ಮಕವಾದ ಯೋಜನೆ ರೂಪಿಸಿದರೆ ಇಡೀ ಉಡುಪಿ ಜಿಲ್ಲೆಗೆ ಸಾಕಾಗುವಷ್ಟು ಪ್ರಮಾಣದ ನೀರಿದೆ. ಇತರ ಹೊಳೆ, ನದಿಗಳೆಲ್ಲ ಬತ್ತಿವೆ. ಹಳ್ಳಕೊಳ್ಳಗಳ ಜತೆಗೆ ಮದಗಗಳೂ ನೀರಿಂಗಿಸಿಕೊಂಡು ಬರಿದಾಗಿವೆ. ಬಾವಿಗಳಲ್ಲಿ ಎಂದೋ ನೀರಿಲ್ಲ. ಮನೆ ಮನೆಗಳಲ್ಲಿ ನೀರಿನ ಹಾಹಾಕಾರ.

ತೀರ್ಥಕ್ಷೇತ್ರಗಳಲ್ಲಿ
ಕಮಲಶಿಲೆಯಲ್ಲಿ ಕುಬಾj ನದಿ, ಮಾರಣಕಟ್ಟೆಯಲ್ಲಿ ಚಕ್ರ, ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿ ಹರಿಯುತ್ತದೆ. ಇಲ್ಲೆಲ್ಲ ನೀರಿನ ಕೊರತೆಯಾಗಿದೆ. ಚಕ್ರಾನದಿಯಲ್ಲಿ ನೀರಿನ ಕೊರತೆಯಾಗಿ ಮೀನುಗಳು, ಜಲಚರಗಳು ಕೂಡಾ ಸಾಯುತ್ತಿವೆ. ಸೌಪರ್ಣಿಕಾ ನದಿಯಲ್ಲಿ ನೀರಿನ ಕೊರತೆಯಾಗಿದ್ದು ಕೊಲ್ಲೂರಿನಲ್ಲಿ ಸಮಸ್ಯೆ ಉಂಟಾಗಿದೆ.

ಯೋಜನೆ ಮಂಜೂರಿಲ್ಲ
ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿಗೆ ಪ್ರಸ್ತಾವನೆ ಹೋಗಿತ್ತು. ಆದರೆ ಸರಕಾರ ಈ ಯೋಜನೆಯನ್ನೇ ರದ್ದು ಮಾಡಿ ಹೊಸ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿತು. ಈಗ ಹಳೆಯದೂ ಇಲ್ಲ, ಹೊಸದೂ ಇಲ್ಲ ಎಂದಾಗಿದೆ. ನಾಡಾ ಪಂಚಾಯತ್‌ ವ್ಯಾಪ್ತಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವ ಬ್ಯಾಂಕ್‌ ಕುಡಿಯುವ ನೀರಿನ ಯೋಜನೆಯೇ ಸದ್ಯದಲ್ಲಿ ಇದ್ದುದರಲ್ಲಿ ದೊಡ್ಡ ಯೋಜನೆ.

  • ಲಕ್ಷ್ಮೀ ಮಚ್ಚಿನ
Advertisement
Advertisement

Udayavani is now on Telegram. Click here to join our channel and stay updated with the latest news.

Next