Advertisement

ಕುಂದಾಪುರ: ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ

11:24 PM Jun 17, 2019 | Sriram |

ಕುಂದಾಪುರ: ಕರ್ತವ್ಯ ನಿರತ ವೈದ್ಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಐ.ಎಂ.ಎ.ಯ ಕರೆಯ ಮೇರೆಗೆ ಸೋಮವಾರ 24 ತಾಸುಗಳ ವೈದ್ಯಕೀಯ ಪ್ರತಿಭಟನೆ ಆರಂಭಿಸಲಾಯಿತು. ಬೆಳಗ್ಗೆ 6 ಗಂಟೆಗೆ ಆರಂಭವಾದ ಪ್ರತಿಭಟನೆ ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ.

Advertisement

ಕೆಲವು ದಿನಗಳ ಹಿಂದೆ ಕೊಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ಗುಂಪೊಂದರ ಹಲ್ಲೆಯಿಂದ ಡಾ| ಪರಿಭಾ ಮುಖರ್ಜಿಯೆಂಬ ಕಿರಿಯ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ವೈದ್ಯರಕ್ಷಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಕಾಯಿದೆಯನ್ನು ರೂಪಿಸಿ ಅನುಷ್ಠಾನ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವೈದ್ಯರು ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುವುದರ ಮೂಲಕ ಸಾರ್ವಜನಿಕರ ಗಮನ ಸೆಳೆಯುವುದರೊಂದಿಗೆ ಸಾಂಘಿಕ ಪ್ರತಿಭಟನೆ ನಡೆಸಲಾಗಿತ್ತು. ಕುಂದಾಪುರ ಉಪ ಆಯುಕ್ತರ ಮೂಲಕ ಪ್ರಧಾನಿ ಮತ್ತು ಗƒಹ ಸಚಿವರಿಗೆ ಲಿಖೀತ ಮನವಿ ಪತ್ರ ಸಲ್ಲಿಸಲಾಗಿತ್ತು.

ಈಗ ಅದರ ಮುಂದುವರಿದ ಭಾಗವಾಗಿ ರೋಗಿಗಳ ತಪಾಸಣೆ ನಡೆಸದೇ ಮುಷ್ಕರ ನಡೆಸಲಾಗಿದೆ. ಹೊರರೋಗಿಗಳ ತಪಾಸಣೆಯನ್ನು ಪೂರ್ಣವಾಗಿ ನಿಲ್ಲಿಸಲಾಗಿತ್ತು. ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿತ್ತು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಮುಷ್ಕರದ ಕುರಿತು ತಿಳಿವಳಿಕೆ ಮೂಡಿಸುವ, ಹೊರರೋಗಿ ಚಿಕಿತ್ಸೆ ಇಲ್ಲ ಎನ್ನುವ ಫ‌ಲಕಗಳನ್ನು ಪ್ರವೇಶದ್ವಾರದಲ್ಲೇ ಅಳವಡಿಸಲಾಗಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸದಿದ್ದರೂ ಹೆಚ್ಚುವರಿ ರೋಗಿಗಳಂತೂ ಇದ್ದರು. ಎಂದಿಗಿಂತ ತುಸು ಹೆಚ್ಚೇ ರೋಗಿಗಳ ಸಂಖ್ಯೆ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next