Advertisement

ಕುಂದಾಪುರ: ವಿವಿಧೆಡೆ ಅಂಚೆ ಆಧಾರ್‌ ನೋಂದಣಿ

11:30 AM Oct 07, 2020 | Suhan S |

ಕುಂದಾಪುರ, ಅ. 6: ತಾಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ ಅಂಚೆ ಇಲಾಖೆ ವತಿಯಿಂದ ಆಧಾರ್‌ ತಿದ್ದುಪಡಿ, ನೋಂದಣಿ ಪ್ರಕ್ರಿಯೆ ಮಂಗಳವಾರ ನಡೆಯಿತು.

Advertisement

ಎರಡು ಕಡೆ ಸರ್ವರ್‌ ಸಮಸ್ಯೆ ಉಂಟಾದುದು ಬಿಟ್ಟರೆ ಇತರೆಡೆ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುವಲ್ಲಿ ಅಂಚೆ ಇಲಾಖೆಯ ಶ್ರಮ ಫ‌ಲ ಕೊಟ್ಟಿದೆ. ಮಂಗಳವಾರ ತಾಲೂಕಿನಲ್ಲಿ ವಿದ್ಯುತ್‌ ವ್ಯತ್ಯಯದ ದಿನವಾಗಿದ್ದು ಅಂಚೆ ಇಲಾಖೆ ಆಧಾರ್‌ ಅಭಿಯಾನವನ್ನು ಸವಾಲಾಗಿ ಸ್ವೀಕರಿಸಿ ಜನರಿಗೆ ಸೇವೆ ನೀಡಿದೆ. ಉಡುಪಿಯಿಂದ ಬೈಂದೂರಿನ ಶಿರೂರುವರೆಗೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್‌ಚಂದ್ರ ಅವರು ಸ್ವತಃ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಕಂಪ್ಯೂಟರ್‌ ಕೈ ಕೊಟ್ಟಲ್ಲಿಗೆ ಬದಲಿ ವ್ಯವಸ್ಥೆ ಯನ್ನೂ ಮಾಡಿಸಿದ್ದರು.

ಸಾರ್ವಜನಿಕರಿಗೆ ಆಧಾರ್‌ ಸೇವೆಯ ಅಗತ್ಯವನ್ನು ಅರಿತು ಉಡುಪಿ ಅಂಚೆ ವಿಭಾಗವು ಎರಡು ಜಿಲ್ಲೆಗಳಲ್ಲಿ ವಿವಿಧ ಅಂಚೆ ಕಚೇರಿಗಳಲ್ಲಿ ಆಧಾರ್‌ ಅಭಿಯಾನ ಆಯೋಜಿಸಿತ್ತು. ಕುಂದಾಪುರ ತಾಲೂಕಿನ  ಅಂಚೆ ಕಚೇರಿಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಆಧಾರ್‌ ಅಭಿಯಾನ ಆರಂಭಗೊಳ್ಳಲಿದೆ, ಗರಿಷ್ಠ 150 ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದೆ ಎಂದು ತಿಳಿಸಲಾಗಿತ್ತು. ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮವಾಗಿ ಆಸಕ್ತರು ಮುಂಗಡ ಟೋಕನ್‌ ಪಡೆದುಕೊಂಡು ನಿಗದಿತ ಸಮಯಕ್ಕೆ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್‌ ಸಂಬಂಧಿತ ಸೇವೆಯನ್ನು ಪಡೆದುಕೊಳ್ಳಲು ಇಲಾಖೆ ಏರ್ಪಾಡು ಮಾಡಿತ್ತು. ಅದರಂತೆ ನೋಂದಣಿ ಮಾಡಿದವರಿಗೆ ಅಂಚೆ ಇಲಾಖೆ ಸಿಬಂದಿ ಮನೆ ಮನೆಗೆ ತೆರಳಿ ಸಮಯ ನಿಗದಿ ಮಾಡಿ ಟೋಕನ್‌ ನೀಡಿದ್ದರು.

ಕುಂದಾಪುರ ಪ್ರಧಾನ ಅಂಚೆ ಕಚೇರಿ ಹಾಗೂ ಬೈಂದೂರಿನಲ್ಲಿ ಕಂಪ್ಯೂಟರ್‌ ನೆಟ್‌ವರ್ಕ್‌ ಸಮಸ್ಯೆ ಉಂಟಾಗಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲಿಲ್ಲ. ಹಾಗಿದ್ದರೂ ಕುಂದಾಪುರದಲ್ಲಿ ತತ್‌ಕ್ಷಣ ಬದಲಿ ವ್ಯವಸ್ಥೆ ಮಾಡಿ ಸಂಜೆ ವೇಳೆಗೆ 75ರಷ್ಟು ಮಂದಿಗೆ ಸೌಕರ್ಯ ಮಾಡಿಕೊಡಲಾಯಿತು. ಬೈಂದೂರಿನಲ್ಲಿ ಸಾಧ್ಯವಾಗಲಿಲ್ಲ. ಬಸ್ರೂರು ಮೊದಲಾದೆಡೆ ಸಂಜೆ 6 ಗಂಟೆ ಅನಂತರವೂ ಜನ ಆಗಮಿಸುತ್ತಲೇ ಇದ್ದರು.ಕುಂದಾಪುರ ಪ್ರಧಾನ ಅಂಚೆ ಕಚೇರಿ 75, ತಲ್ಲೂರು ಅಂಚೆ ಕಚೇರಿ 92, ಬಸ್ರೂರು 100, ತ್ರಾಸಿ 85, ವಂಡ್ಸೆ 84, ಕೋಟೇಶ್ವರ 150, ಶಂಕರನಾರಾಯಣ 55, ಶಿರೂರು 16, ಗಂಗೊಳ್ಳಿ 68 ಆಧಾರ್‌ ಪ್ರಕ್ರಿಯೆಗಳು ನಡೆದಿವೆ.

ಮಾರ್ಗಸೂಚಿ ಪಾಲನೆ :  ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಹೆಚ್ಚು ಜನಸಂದಣಿ ಆಗದಂತೆ ಮೊದಲೇ ನಮ್ಮ ಸಿಬಂದಿ ಮೂಲಕ ಟೋಕನ್‌ ವಿತರಿಸಿ ಸಮಯ ನಿಗದಿ ಮಾಡಿಯೇ ಪ್ರಕ್ರಿಯೆ ನಡೆಸಲಾಯಿತು. ಗಣಪತಿ ಮರ್ಡಿ ಸಹಾಯಕ ಅಂಚೆ ಅಧೀಕ್ಷಕರು, ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next