ಕುಂದಾಪುರ: ತಾಲೂಕಿನ ಕೆದೂರು ಗ್ರಾ.ಪಂ.ನಲ್ಲಿ ಅಧಿಕಾರಿಗಳಿಂದ ಸಮರ್ಪಕ ಕೆಲಸವಾಗುತ್ತಿಲ್ಲ ಎಂದು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಾಗೂ ಪಿಡಿಒ ಬದಲಾವಣೆಗೆ ಆಗ್ರಹಿಸಲಾಗಿದೆ. ಕೆದೂರು ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ನಾಗರಿಕರು ಕುಂದಾಪುರ ತಾ.ಪಂ. ಎದುರು ಬುಧವಾರ ಧರಣಿ ನಡೆಸಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆದೂರಿನಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮದಲ್ಲಿ ನೀಡಲಾದ ಯಾವ ಮನವಿ, ಕೋರಿಕೆ, ಸಮಸ್ಯೆಗಳಿಗೆ ಒಂದಷ್ಟೂ ಗಮನ ನೀಡದ ಸರಕಾರದ ಅಧಿಕಾರಿಗಳ ಬಗ್ಗೆ ನಂಬಿಕೆಯಿಲ್ಲ ಎಂದು ದೂರಿದರು. ನಾಗರಿಕರ ಪರವಾಗಿ ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿ ಕೆ. ಸೀತಾರಾಮ ಶೆಟ್ಟಿ, ಪಂ.ನ ಆಡಳಿತ ಹದಗೆಟ್ಟರೆ, ನ್ಯಾಯ, ಕಾನೂನು ಹಾಗೂ ಸಾಮಾಜಿಕ ಭದ್ರತೆ ಮುರಿದು ಬಿದ್ದರೆ, ಜನ ಯಾವ ಸರಕಾರವನ್ನು, ಆಡಳಿತ, ಕಾನೂನನ್ನು ನಂಬುವುದಿಲ್ಲ ಎಂದರು.
ಪಿಡಿಒ ಹಾಗೂ ಇತರ ಅಧಿಕಾರಿಗಳು ಕಚೇರಿಗೆ ಸರಿಯಾಗಿ ಹಾಜರಾಗುವುದಿಲ್ಲ. ಪಿಡಿಒ ವಾರಕ್ಕೆ ಎರಡೇ ದಿನ ಬರುತ್ತಾರೆ. ಅದೂ ಮಧ್ಯಾಹ್ನ! ಮೀಟಿಂಗ್ ನಡೆದರೆ ಎರಡೂವರೆ ತಿಂಗಳ ಬಳಿಕ ನಿರ್ಣಯ ಬರೆಯುತ್ತಾರೆ. ನರೇಗಾ ಕಾಮಗಾರಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಗ್ರಾ.ಪಂ.ಗೆ 4 ಲಕ್ಷ ರೂ. ತೆರಿಗೆ ಬಾಕಿ ಇದೆ. ಕುಂದಾಪುರ ತಾಲೂಕಿನಲ್ಲಿ ಮೊತ್ತಮೊದಲು ಆರ್‌ಟಿಐ ತರಬೇತಿ ನೀಡಿದ ನನಗೇ ಆರ್‌ಟಿಐ ಮಾಹಿತಿ ತಿರುಚಿ ನೀಡಲಾಗುತ್ತದೆ ಎಂದರು. ಪಂ.ಸದಸ್ಯರು ನಮಗೆ ಈ ಪಿಡಿಒ ಬೇಡ, ಬದಲಿಸಿ ಎಂದು ಒತ್ತಾಯಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ ಅವರು ಧರಣಿ ನಿರತರ ಬಳಿ ಮನವಿ ಮಾಡಿದರು. ಮೊದಲು ಮನವಿಗೆ ಒಪ್ಪದೇ ಇದ್ದರೂ ಬಳಿಕ ಅಧಿಕಾರಿಗಳ ಮಾತಿಗೆ ಬೆಲೆ ನೀಡಿದರು. ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಅವರು ಮನವಿ ಸ್ವೀಕರಿಸಿ ಎಪ್ರಿಲ್ ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಕೆದೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಭುಜಂಗ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಗುಬ್ಬಿ, ಜಲಜಾ, ವಿಜಯ ಶೆಟ್ಟಿ, ಉಲ್ಲಾಸ್ ಹೆಗ್ಡೆ, ಜ್ಯೋತಿ, ಸ್ಥಳೀಯರಾದ ಧರ್ಮರಾಜ್ ಮೊದಲಿಯಾರ್, ಶಾರದಾ, ಪ್ರಕಾಶ್ ಮೊದಲಾದವರಿದ್ದರು. ತಾ.ಪಂ. ಕಚೇರಿಯ ಪ್ರವೇಶದ್ವಾರ ದಲ್ಲೇ ಧರಣಿ ಕುಳಿತಿದ್ದ ಕಾರಣ ಅಧಿಕಾರಿಗಳಿಗೆ ಪ್ರತಿಭಟನಕಾರರನ್ನು ದಾಟಿ ಕಚೇರಿಗೆ ಒಳಪ್ರವೇಶಿಸುವುದು ಸಾಧ್ಯವಿರಲಿಲ್ಲ. ಅಹವಾಲು ಕೇಳಿಯೇ ಹೋಗಬೇಕಿತ್ತು. ಅಧಿಕಾರಿಗಳ ಭರವಸೆ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನ ಕಾರರು ಕೈ ಮುಗಿದು ನಿಮ್ಮ ಭರವಸೆ ಕೇಳಿ ಸಾಕಾಗಿದೆ ಎನ್ನುತ್ತಿದ್ದರು.
ಕರ್ತವ್ಯ ಪಾಲಿಸಲ್ಲ
ಪಿಡಿಒ ಸರಿಯಾಗಿ ಕರ್ತವ್ಯ ಪಾಲಿಸದ ಕಾರಣ ಇತರ ಅಧಿಕಾರಿಗಳೂ ಅದೇ ದಾರಿಯಲ್ಲಿದ್ದಾರೆ. ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ನರೇಗಾ ಅನುದಾನ ಬಂದಿಲ್ಲ. ಗ್ರಾ.ಪಂ. ಗೆ ತೆರಿಗೆ ವಸೂಲಿಗೆ ಬಾಕಿ ಇದ್ದರೂ ಮಾಡಿಲ್ಲ. ಆದ್ದರಿಂದ ಈ ಪಿಡಿಒ ನಮ್ಮ ಪಂಚಾಯತ್‌ಗೆ ಬೇಡ.
-ಕೆ. ಸೀತಾರಾಮ ಶೆಟ್ಟಿ ನಿವೃತ್ತ ಅಧಿಕಾರಿ