ಕುಂದಾಪುರ: ಇಲ್ಲಿನ ಆಭರಣ ಜ್ಯುವೆಲ್ಲರ್ಸ್ ಪಕ್ಕದಲ್ಲಿರುವ ಓಣಿ ರಸ್ತೆಯೇ ಈಗ ಕಸದ ತೊಟ್ಟಿಯಾಗಿದೆ.
ಈ ರಸ್ತೆ ಆಟೋ, ದ್ವಿಚಕ್ರ ವಾಹನ, ಪಾದಚಾರಿಗಳು ಹೆಚ್ಚಾಗಿ ಸಾಗುವ ದಾರಿ. ಅನೇಕರು ಇಲ್ಲಿರುವ ಪಾಳು ಬಿದ್ದ ಕಟ್ಟಡದ ಪಕ್ಕದಲ್ಲಿಯೇ ಶೌಚಕಾರ್ಯ ಮುಗಿಸುತ್ತಿದ್ದು, ಪರಿಸರ ದುರ್ನಾತಮಯವಾಗಿದೆ. ಇದರಿಂದಾಗಿ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಸತ್ತ ಇಲಿ, ಬೆಕ್ಕು, ಕೊಳೆತ ಆಹಾರ ಪದಾರ್ಥಗಳನ್ನು ಹಾಗೂ ಪ್ಲಾಸ್ಟಿಕ್‌ನ್ನು ಇಲ್ಲಿ ತಂದು ಎಸೆಯುತ್ತಿದ್ದು ಅಕ್ಕಪಕ್ಕದಲ್ಲಿ ಸಂಚರಿಸುವವರ ಗತಿ ದೇವರಿಗೇ ಪ್ರೀತಿ ಎಂಬಂತಾಗಿದೆ.
ಕೊಳಚೆ, ತ್ಯಾಜ್ಯದ ರಾಶಿಯೇ ತುಂಬಿರುವ ಈ ಪ್ರದೇಶ ಸ್ಥಳೀಯ ನಿವಾಸಿಗಳಿಗೆ ಹಾಗೂ ಅಂಗಡಿಗಳಿಗೂ ತೊಂದರೆ ನೀಡುತ್ತಿದೆ.
ಈ ಬಗ್ಗೆ ಕುಂದಾಪುರದ ಪುರಸಭೆ ಕೂಡಲೇ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.