Advertisement

ನಗರದಲ್ಲಿ ಸುತ್ತುಬಳಸು ದಾರಿ ಅನಿವಾರ್ಯವೇ?

12:15 AM Mar 10, 2020 | Sriram |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಎಲ್‌ಐಸಿ ರಸ್ತೆ ಬಳಿ ಪ್ರವೇಶ ನೀಡಬೇಕೆಂದು ಸಾರ್ವಜನಿಕರ ಬೇಡಿಕೆಯಿದೆ.

Advertisement

ಹೆಚ್ಚಿದ ಒತ್ತಡ
ಫ್ಲೈಓವರ್‌ ಕಾಮಗಾರಿ ಬೇಗ ಪೂರ್ಣ ಗೊಳಿಸಬೇಕೆಂದು ಒತ್ತಡ ಹೆಚ್ಚಾಗುತ್ತಿದೆ. ಈಚೆಗಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಮಗಾರಿಯ ಪ್ರಗತಿ ವೀಕ್ಷಿಸಿ ಹೋಗಿದ್ದಾರೆ. ಅವರಿಗೆ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ ಮಾ. 31ಕ್ಕೆ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳ್ಳಲಿದೆ. ಮೇ ಅಂತ್ಯಕ್ಕೆ ಬಸೂÅರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಮುಕ್ತಾಯವಾಗಲಿದೆ. ಜೂನ್‌ ವೇಳೆಗೆ ಪೂರ್ಣಪ್ರಮಾಣದಲ್ಲಿ ಓಡಾಟಕ್ಕೆ ಸಿಗಲಿದೆ ಎಂದು ಉತ್ತರಿಸಿದ್ದರು. ಅದೇ ರೀತಿ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಕೂಡಾ ಕಾಮಗಾರಿ ವೀಕ್ಷಿಸಿದ್ದಾರೆ.

ಪ್ರತಿಷ್ಠೆ
ಹೆದ್ದಾರಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಈಗಾಗಲೇ ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ ಪೂರ್ಣವಾದ ಕಾರಣ ಕುಂದಾಪುರ ಶಾಸ್ತ್ರಿ ಸರ್ಕಲ್‌ ಫ್ಲೈಓವರ್‌ ಕಾಮಗಾರಿ ಶೀಘ್ರ ಮುಗಿಸುವುದು ಸಂಸದೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತಮ್ಮದೇ ಪಕ್ಷದ ಸಂಸದರು, ಕೇಂದ್ರ ಸರಕಾರ ಇರುವಾಗ ಎಂಟತ್ತು ವರ್ಷಗಳಿಂದ ಬಾಕಿಯಾದ, ಇಡಿ ಜಿಲ್ಲೆಗೆ ಇರುವ ಏಕೈಕ ಫ್ಲೈಓವರನ್ನು ಪೂರ್ಣಗೊಳಿಸಲು ಸಾಧ್ಯವಾಗದ ಸ್ಥಿತಿ ನುಂಗಲಾರದ ತುತ್ತಾಗಿತ್ತು. ಆರೋಪ ನಿವಾರಣೆಗೆ ಬಿಜೆಪಿ ಪ್ರಯತ್ನಿಸುತ್ತಿದೆ.

ಪ್ರಧಾನಿ ಕಚೇರಿಯಿಂದ ಸ್ಪಂದನೆ
ಪತ್ರಕರ್ತರ ಸಂಘದ ಪ್ರತಿಭಟನೆ ಬಳಿಕ ಪ್ರಧಾನಿಗೆ ಸಾಮೂಹಿಕ ಮನವಿ ನೀಡಲಾಗಿತ್ತು. ಇದಲ್ಲದೇ ಇಲ್ಲಿನ ವಿಘ್ನೇಶ್‌ ಶೆಣೈ ಅವರು ಪ್ರಧಾನಿಗೆ ಆ್ಯಪ್‌ ಮೂಲಕ ಮನವಿ ನೀಡಿದ್ದರು. ಕಾಮಗಾರಿಯೇ ಪೂರ್ತಿಯಾಗದೇ ಟೋಲ್‌ ಪಡೆಯಲಾಗುತ್ತಿದೆ ಎಂದು ದೂರಿದ್ದರು. ಹಲವಾರು ಅಪಘಾತಗಳಿಗೆ ಈ ಅರ್ಧ ಕಾಮಗಾರಿ ಕಾರಣವಾಗುತ್ತಿದೆ ಎಂದಿದ್ದರು.

ಅದಕ್ಕೆ ಅನೇಕ ವರ್ಷಗಳಿಂದ ಬಾಕಿಯಾದ ಫ್ಲೈಓವರ್‌ ಕಾಮಗಾರಿ ಮಾ.31 ಕ್ಕೆ ಪೂರ್ಣವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಪ್ರಧಾನಿ ಕಾರ್ಯಾಲಯದಿಂದ ಬಂದ ಸೂಚನೆ ಮೇರೆಗೆ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದೆ. ಉಡುಪಿಯ ಆರ್ವಿ ಎಸೋಸಿಯೇಟ್ಸ್‌ ಆರ್ಕಿಟೆಕ್ಸ್ಟ್ ಎಂಜಿನಿಯರ್ಸ್‌ ಆಂಡ್‌ ಕನ್ಸಲ್ಟೆನ್ಸ್‌ ಪ್ರೈ.ಲಿ. ಸಂಸ್ಥೆಗೆ ಕಾಮಗಾರಿಯನ್ನು ಪರಿಶೀಲಿಸಿ ಸ್ಥಿತಿಗತಿಯ ಕುರಿತು ವರದಿ ನೀಡುವಂತೆ ಸೂಚಿಸಿತ್ತು. ಸಂಸ್ಥೆಯವರು ತನಿಖೆ ನಡೆಸಿದ್ದು, ಮೊದಲಿದ್ದ ಹೆದ್ದಾರಿ ವಿನ್ಯಾಸ ಸ್ಥಳೀಯರ ಬೇಡಿಕೆಯಂತೆ ಫ್ಲೈಓವರ್‌ ಆಗಿ ಬದಲಾಗಿದೆ. ರಸ್ತೆ ವಿಸ್ತರಣೆಗೆ ತಡೆಯಾಗಿದ್ದ ವಿದ್ಯುತ್‌ ತಂತಿಗಳ ತೆರವು ವಿಳಂಬವಾಗಿದೆ. ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆಗೆ ಕಳೆದ ವರ್ಷ ಆರ್ಥಿಕ ಅಡಚಣೆಯಾಗಿದೆ ಎಂದು ಪ್ರಾಧಿಕಾರಕ್ಕೆ ವರದಿ ನೀಡಿತ್ತು. ಕಳೆದ ವರ್ಷ ಡಿಸೆಂಬರ್‌ ಅಂತ್ಯಕ್ಕೆ ಕೆಲಸ ಪೂರೈಸುವುದಾಗಿ ಗುತ್ತಿಗೆದಾರ ಸಂಸ್ಥೆ ಹೇಳಿದ್ದರೂ ಮಾತಿಗೆ ತಪ್ಪಿದೆ. ಡಿ. 10ರಂದು ಬೆಂಗಳೂರಿನಲ್ಲಿ, ಜ. 23ರಂದು ಗುರ್ಗಾಂವ್‌ನಲ್ಲಿ ಕೇಂದ್ರ ಹೆದ್ದಾರಿ ಸಚಿವರ ಸಭೆ ನಡೆದಿದ್ದು ಅಲ್ಲೂ ಈ ಕುರಿತು ಚರ್ಚೆಯಾಗಿದೆ.ಈಗ ಕಾಮಗಾರಿ ಭರದಿಂದ ನಡೆಯುತ್ತಿದ್ದು ಮಾ. 31ಕ್ಕೆ ಪೂರ್ಣವಾಗಲಿದೆ. ಈಗಾಗಲೇ ಟೋಲ್‌ ಪಡೆಯುತ್ತಿರುವುದು ಪೂರ್ಣಗೊಂಡ ಕಾಮಗಾರಿಗೇ ವಿನಾ ಫ್ಲೈಓವರ್‌ ಬಾಬ್ತು ಅದರಲ್ಲಿ ಸೇರಿಲ್ಲ. ಫ್ಲೈಓವರ್‌ ಪೂರ್ಣವಾದ ಬಳಿಕ ಇದರದ್ದೂ ಸೇರಿಸಿ ಟೋಲ್‌ ಮೊತ್ತ ಹೆಚ್ಚಳವಾಗಲಿದೆ ಎಂದು ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್‌ ಉತ್ತರ ನೀಡಿದ್ದರು.

Advertisement

ಕಾಮಗಾರಿ
ಕೆಎಸ್‌ಆರ್‌ಟಿಸಿ ಬಳಿ ಕ್ಯಾಟಲ್‌ ಅಂಡರ್‌ಪಾಸ್‌, ಬಸ್ರೂರು ಮೂರುಕೈ ಬಳಿ ಪಾದಚಾರಿ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಂಡಿದೆ. ಫ್ಲೈಓವರ್‌ಗೆ ಸಂಪರ್ಕ ರಸ್ತೆ ಕಲ್ಪಿಸಲು ಮಣ್ಣು ತುಂಬಿಸುವ ಕೆಲಸ ನಡೆದಿದೆ. ಅದರ ತಡೆಗೋಡೆ, ಕಾಂಕ್ರಿಟ್‌ ಕಾಮಗಾರಿ ಕೂಡಾ ನಡೆಯುತ್ತಿದೆ. ಮಣ್ಣು ರಾಶಿ ಹಾಕಿ ಹದಗೊಳಿಸಿ, ಜಲ್ಲಿ ಹಾಕಿ ಡಾಮರು ಹಾಕಲು ಸಿದ್ಧತೆ ನಡೆಯುತ್ತಿದೆ. ಒಟ್ಟಿನಲ್ಲಿ ಹಗಲೂ ರಾತ್ರಿ ಕಾಮಗಾರಿ ನಡೆಯುತ್ತಿದೆ.

ರಸ್ತೆ ಕೊಡಲಿ
ಸರ್ವಿಸ್‌ ರಸ್ತೆ ಕಿರಿದಾಗಿದೆ. ಎರಡೂ ಕಡೆಯಿಂದ ವಾಹನಗಳು ಬಂದರೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಆದ್ದರಿಂದ ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿ ಮೂಲಕ ಬ್ಯಾರಿಕೇಡ್‌ ಇಟ್ಟು ಇನ್ನೊಂದು ಸರ್ವಿಸ್‌ ರಸ್ತೆ ಪ್ರವೇಶಿಸಲು ಅವಕಾಶ ಮಾಡಿಕೊಡಲಿ.
-ವಿನೋದ್‌ರಾಜ್‌ ಪೂಜಾರಿ
ಶಾಂತಿನಿಕೇತನ

ಪ್ರವೇಶಕ್ಕೆ ಬೇಡಿಕೆ
ಎಲ್‌ಐಸಿ ರಸ್ತೆ, ಲೋಕೋಪಯೋಗಿ ಇಲಾಖೆ ಕಚೇರಿ, ಮೆಸ್ಕಾಂ ಕಚೇರಿ, ಲೈಬ್ರರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲಾದ ಸರಕಾರಿ ಕಚೇರಿಗಳಿವೆ. ನಾನಾಸಾಹೇಬ್‌ ರಸ್ತೆಯಲ್ಲಿ ವ್ಯಾಸರಾಯ ಮಠ ಇತ್ಯಾದಿಗಳಿವೆ. ಫ್ಲೈಓವರ್‌ನ ಆರಂಭದಲ್ಲಿ ಗಾಂಧಿಮೈದಾನ, ನೆಹರೂ ಮೈದಾನಗಳಿವೆ. ಆದ್ದರಿಂದ ಇಲ್ಲಿ ಸರ್ವಿಸ್‌ ರಸ್ತೆಯಲ್ಲಿ ಹೆದ್ದಾರಿಗೆ ಪ್ರವೇಶ ನೀಡಿ ಇನ್ನೊಂದು ಬದಿಯ ಸರ್ವಿಸ್‌ ರಸ್ತೆಗೆ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಬೇಡಿಕೆ ಇಡುತ್ತಿದ್ದಾರೆ. ಇಲ್ಲಿ ಪ್ರವೇಶ ನೀಡದೇ ಇದ್ದಲ್ಲಿ ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್‌ನ ಅಡಿಯಲ್ಲಿ ಪಾಸ್‌ನ ನಂತರ ಬಸ್ರೂರು ಮೂರುಕೈಯ ಅಂಡರ್‌ಪಾಸ್‌ ಮಾತ್ರ ಇರುವುದು. ಇಲ್ಲಿ
ಫ್ಲೈಓವರ್‌ನ ರಸ್ತೆ ಝೀರೋ ಎಂಡಿಂಗ್‌ ಉಂಟಾಗಿ ಮತ್ತೆ ಸುಮಾರು ನೂರು ಮೀ. ನಂತರ ಬಸ್ರೂರುಮೂರುಕೈ ಅಂಡರ್‌ಪಾಸ್‌ಗಾಗಿ ಏರುರಸ್ತೆ ಆರಂಭವಾಗುತ್ತದೆ. ಕೋಡಿ ರಸ್ತೆಗಾಗಿ ವಿನಾಯಕ ಬಳಿ ಯು ಟರ್ನ್ ನೀಡಬೇಕೆಂಬ ಬೇಡಿಕೆ ಕೂಡಾ ಇದೆ. ಇದು ನೀಡದೇ ಇದ್ದರೆ ಸುತ್ತುಬಳಸು ದಾರಿ ಅನಿವಾರ್ಯ. ಆದರೆ ಅಲ್ಲಲ್ಲಿ ರಸ್ತೆಯಲ್ಲಿ ಅಡಚಣೆ ಉಂಟು ಮಾಡಲು ಹೆದ್ದಾರಿ ಪ್ರಾಧಿಕಾರ ಅನುಮತಿಸುತ್ತದೆಯೇ ಎನ್ನುವ ಪ್ರಶ್ನೆ ಕೂಡಾ ಇದೆ.

Advertisement

Udayavani is now on Telegram. Click here to join our channel and stay updated with the latest news.

Next