Advertisement

ವಡೇರಹೋಬಳಿಯ ತ್ಯಾಜ್ಯ ಸಂಸ್ಕರಣ ಘಟಕ ವಿಸ್ತರಣೆ: ನಿರ್ಣಯ

06:55 AM Dec 29, 2017 | Team Udayavani |

ಕುಂದಾಪುರ: ವಡೇರಹೋಬಳಿಯ ಮಠದಬೆಟ್ಟು ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣ ಘಟಕವನ್ನು 400 ಮೀ. ವಿಸ್ತರಿಸಲು ಸರಕಾರದಿಂದ ವಿಶೇಷ ಅನುದಾನಕ್ಕೆ ಒತ್ತಾಯಿಸಿ ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಮೋಹನ್‌ ಸಾರಂಗ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.  

Advertisement

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಗುಣರತ್ನಾ, ಯುಜಿಡಿ ಕಾಮಗಾರಿ ಸಂಬಂಧ ಕರೆದಿದ್ದ ಪುರಸಭೆಯ ವಿಶೇಷ ಸಭೆಯಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ್ದರೂ, ಸಹ ಅಜೆಂಡಾದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಮೂದಿಸಿರುವುದು ಸರಿಯಲ್ಲ. ಅದೇ ಜಾಗದಲ್ಲಿ ಸಂಸ್ಕರಣ ಘಟಕ ನಿರ್ಮಾಣ ಆಗುವುದರಿಂದ ವಾರ್ಡ್‌ನ ಎಲ್ಲರಿಗೂ ಸಮಸ್ಯೆಗಳಾಗುತ್ತದೆ. ಅಲ್ಲಿಂದ 400 ಮೀ. ದೂರದಲ್ಲಿ ನಿರ್ಮಿಸಿ, ಜಿಲ್ಲಾಧಿಕಾರಿ ಬಳಿಯೂ ಈ ಬಗ್ಗೆ ಪ್ರಸ್ತಾವಿಸಲಾಗುವುದು ಎಂದವರು ಹೇಳಿದರು.

ಇದಕ್ಕೆ ಹೆಚ್ಚಿನ ಸದಸ್ಯರು ಧ್ವನಿಗೂಡಿಸಿ, ಜನರಿಗೆ ಕಡಿಮೆ ಸಮಸ್ಯೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.

ಇದಕ್ಕುತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ ಘಟಕ ಸ್ಥಳಾಂತರಕ್ಕೆ ಇನ್ನೂ ಹೆಚ್ಚಿನ 5 ಕೋ.ರೂ. ಹೆಚ್ಚಿನ ಅನುದಾನ ಅಗತ್ಯವಿದ್ದು, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ಬಳಿಕ ಸಂಸ್ಕರಣ ಘಟಕ ವಿಸ್ತರಣೆಗಾಗಿ ಹೆಚ್ಚುವರಿ ಅನುದಾನಕ್ಕೆ ಒತ್ತಾಯಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಸದಸ್ಯರಾದ ಉದಯ ಮೆಂಡನ್‌, ರವಿಕಲಾ ಅವರು ನಮ್ಮ ವಾರ್ಡಿನಲ್ಲೂ ಸಂಸ್ಕರಣ ಘಟಕದಿಂದ ಸಮಸ್ಯೆಯಿದ್ದು, ಅದನ್ನು ಬದಲಾಯಿಸಿ ಎಂದು ಮನವಿ ಮಾಡಿದರು.

ಶೇ. 70 ರಷ್ಟು ಪೂರ್ಣ
ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾವಿಸಿದ ಮುಖ್ಯಾಧಿಕಾರಿ, 7-8 ಕಾಮಾಗರಿ ಹೊರತು ಪಡಿಸಿ, ಶಾಸನಬದ್ಧ ಅನುದಾನ ಸಿಗುವ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದೆ. ಶೇ. 70 ರಷ್ಟು ಪೂರ್ಣಗೊಂಡಿವೆ ಎಂದವರು ಸಭೆಗೆ ತಿಳಿಸಿದರು.  ಸದಸ್ಯರಾದ ಚಂದ್ರಶೇಖರ್‌ ಖಾರ್ವಿ, ಪ್ರಭಾಕರ ಕೋಡಿ, ರವಿರಾಜ್‌ ಖಾರ್ವಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. 
ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯೀ ಸಮಿತಿ ಅಧ್ಯಕ್ಷ ಸಿಸಿಲಿ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement

ಮರ್ಯಾದೆ 
ಕೊಡಿ ಮಾರ್ರೆ…

ಯುಜಿಡಿ ಬಗ್ಗೆ ಕರೆದ ವಿಶೇಷ ಸಭೆಯ ಅಜೆಂಡಾದಲ್ಲಿ ತಪ್ಪಾಗಿದೆ ಎನ್ನುವುದನ್ನು ಪ್ರಸ್ತಾವಿಸಿದ ವಿಪಕ್ಷ ಸದಸ್ಯ ಶ್ರೀಧರ ಶೇರಿಗಾರ್‌ ಅವರು ಅಜೆಂಡಾವನ್ನು ಓದಲು ಮುಂದಾದಾಗ ಆಡಳಿತ ಪಕ್ಷದ ಸದಸ್ಯ ಉದಯ ಮೆಂಡನ್‌ ಬೇಗ- ಬೇಗ ಓದಾ ಎಂದು ಏಕವಚನದಲ್ಲಿ ಸೂಚಿಸಿದರು.  ಈ ಬಗ್ಗೆ ಬೇಸರ ಗೊಂಡ ಶ್ರೀಧರ್‌ ಅವರು ಸ್ವಲ್ಪ ಮರ್ಯಾದೆ ಕೊಡಿ ಮಾರ್ರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next