Advertisement

ಕುಂದಾಪುರ: ಉಪನೋಂದಣಿ ಕಚೇರಿ ಕೆಲಸ ಸ್ಥಗಿತ

06:00 AM Jul 28, 2018 | Team Udayavani |

ಕುಂದಾಪುರ: ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ಕಾರ್ಯಾಚರಿಸುತ್ತಿರುವ ಉಪ ನೋಂದಣಿ ಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿ ಶುಕ್ರವಾರ ನೋಂದಣಿ ಪ್ರಕ್ರಿಯೆಗೆ ಆಗಮಿಸಿದ ಹತ್ತಾರು ಮಂದಿ ಕೆಲಸವಾಗದೇ ಶಪಿಸುತ್ತಿದ್ದರು. 20ಕ್ಕೂ ಅಧಿಕ ಮಂದಿ ಬೆಳಗ್ಗೆಯಿಂದ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧಪಡಿಸಿ ಕಾಯುತ್ತಿದ್ದ ದೃಶ್ಯ ಕಾಣುತ್ತಿತ್ತು. ಈ ಸಮಸ್ಯೆ ಎಷ್ಟು ದಿನ ಮುಂದುವರಿಯಲಿದೆ ಎಂದು ಗೊತ್ತಿಲ್ಲ.  ಅಲ್ಲಿವರೆಗೂ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. 

Advertisement

ಅಸಮರ್ಪಕ ವಯರಿಂಗ್‌
ಮಿನಿ ವಿಧಾಸನೌಧ ನಿರ್ಮಾಣವಾಗುವ ವೇಳೆ ಸಂಪರ್ಕ ಕಲ್ಪಿಸಿದ ವಯರಿಂಗ್‌ನಲ್ಲಿ ದೋಷ ಕಾಣಿಸಿದೆ. ಅಸಮರ್ಪಕ ಕಾಮಗಾರಿಯಿಂದ ಹೀಗಾಗಿದೆ ಎಂದು ಹೇಳಲಾಗಿದ್ದರೂ ಗುತ್ತಿಗೆದಾರರ ನಿರ್ವಹಣಾ ಅವಧಿ ಮುಗಿದ ಕಾರಣ ಇಲಾಖೆ ವತಿಯಿಂದ ದುರಸ್ತಿ ಮಾಡಿಸಬೇಕಿದೆ. ವಿದ್ಯುತ್‌ ಅವ್ಯವಸ್ಥೆಯಿಂದಾಗಿ ಕಂಪ್ಯೂಟರ್‌ಗಳು ಕೆಲಸ ಮಾಡುತ್ತಿರಲಿಲ್ಲ.
 
ಕೈ ಕೊಟ್ಟ ಕಂಪ್ಯೂಟರ್‌ಗಳು
ಉಪನೋಂದಣಿ ಕಚೇರಿಯ ಕಂಪ್ಯೂಟರ್‌ಗಳನ್ನು ನಿರ್ವಹಿಸುವ ಗುತ್ತಿಗೆ ಪಡೆದ  ನಿರ್ದಿಷ್ಟ ಏಜೆನ್ಸಿಯವರು ಕೈಕೊಟ್ಟ ಕಂಪ್ಯೂಟರ್‌ಗಳ ದುರಸ್ತಿ ಮಾಡಿಲ್ಲ. ಪರಿಣಾಮ ನೋಂದಣಿಗಾಗಿ ಆಗಮಿಸಿದವರಿಗೆ ಯಾವುದೇ ಕೆಲಸ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಕಚೇರಿ ಸಿಬಂದಿ ಕಂಪ್ಯೂಟರ್‌ ಸರ್ವಿಸ್‌ ಮಾಡುವ ಖಾಸಗಿ ಸಂಸ್ಥೆಯವರ ಬಳಿ ಕಂಪ್ಯೂಟರ್‌ಗಳನ್ನು ತಾತ್ಕಾಲಿವಾಗಿ ದುರಸ್ತಿ ಮಾಡಿಸಿದ್ದಾರೆ. ಆದರೆ ಇದು ಒಂದು ದಿನದ ಮಟ್ಟಿಗೆ ಮಾತ್ರ. ನಿರ್ದಿಷ್ಟ ಏಜೆನ್ಸಿಯವರು ಅಧಿಕೃತವಾಗಿ ದುರಸ್ತಿ ಪಡಿಸುವವರೆಗೂ ಈ ಸಮಸ್ಯೆ ಮುಂದುವರಿಯಲಿದೆ. 
 
ಸೋರುವ ಕಚೇರಿ
ಮಿನಿ ವಿಧಾನಸೌಧದ ಕಟ್ಟಡದ ಕಾಮಗಾರಿ ಕಳಪೆ ಎಂಬ ಕುರಿತು ಸಾಕಷ್ಟು ದೂರುಗಳಿದ್ದವು. ಉಪನೋಂದಣಿ ಕಚೇರಿ ಕೂಡಾ ಸೋರುವುದಕ್ಕೆ ಹೊರತಾಗಿಲ್ಲ. ಕಚೇರಿ ಕಡತಗಳು ಕೂಡಾ ಒದ್ದೆಯಾಗುವಷ್ಟು, ಕಚೇರಿಗೆ ಆಗಮಿಸಿದ ಸಾರ್ವಜನಿಕಕರು, ಸಿಬಂದಿಗಳು ಒದ್ದೆಯಾಗುವಂತೆ ನೀರು ಒಳಬೀಳುತ್ತದೆ. ಇದಕ್ಕಾಗಿ ತಾತ್ಕಾಲಿಕ ತೇಪೆ ಹಾಕಲಾಗಿದೆ. ನೀರು ಬಿದ್ದು ಗೋಡೆಗಳೆಲ್ಲ ಬನ¡ ಕಳೆದುಕೊಂಡು ಹಳೆ ಕಚೇರಿಯಂತಾಗಿದೆ. 

ಸಿಬಂದಿ ಕೊರತೆ
ಕಚೇರಿಯಲ್ಲಿ ಸಿಬಂದಿ ಕೊರತೆಯಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ ವಾಗುತ್ತಿದೆ ಎಂಬ ಅಪವಾದವಿದೆ. ಇರುವ ಸಿಬಂದಿಯೇ ಕೆಲಸವನ್ನು ಮೈಮೇಲೆ ಎಳೆದು ಕೊಂಡಂತೆ ಕೆಲಸ ಮಾಡಿಕೊಡುತ್ತಿದ್ದಾರೆ. ಅಸಲಿಗೆ ಈಗಿನ ಲೆಕ್ಕಾಚಾರದಂತೆ ಇಲ್ಲಿ 12 ಸಿಬಂದಿ ಇರಬೇಕಿತ್ತು. 1990ರ ಮಂಜೂರಾತಿಯಂತೆ ಇಲ್ಲಿಗೆ 6 ಸಿಬಂದಿಗಳ ಮಂಜೂರಾತಿಯಾಗಿದೆ. ಆದರೆ ಕರ್ತವ್ಯ ನಿರ್ವಹಿಸುತ್ತಿರುವುದು ಇಬ್ಬರು ಮಾತ್ರ.   

ಗಮನಕ್ಕೆ ತರಲಾಗಿದೆ
ಕಂಪ್ಯೂಟರ್‌ ವ್ಯವಸ್ಥೆ ಹಾಳಾದ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಾತ್ಕಾಲಿಕ  ಕ್ರಮ ವಹಿಸಲಾಗಿದೆ. 
– ನಾಗೇಶ್‌, ಪ್ರಭಾರ ಉಪನೋಂದಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next