Advertisement

ಕುಂದಾಪುರ: ಹೆಚ್ಚುವರಿ “ಕೌಟುಂಬಿಕ ಕೋರ್ಟ್‌’ಗೆ ಬೇಡಿಕೆ

12:21 AM Mar 10, 2020 | Sriram |

ಕಳೆದ 3 ವರ್ಷಗಳಲ್ಲಿ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ದಾಖಲಾದ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣಗಳು

Advertisement

ಕುಂದಾಪುರ: ಕೌಟುಂಬಿಕ ಕಲಹದ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿ ಉಡುಪಿಯಲ್ಲಿ ಶೀಘ್ರದಲ್ಲಿಯೇ “ಕೌಟುಂಬಿಕ ನ್ಯಾಯಾ ಲಯ’ ಆರಂಭವಾಗುವ ಸಾಧ್ಯತೆಯಿದೆ. ಇದರಿಂದ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಜಿಲ್ಲೆಯ ಎಲ್ಲ ಪ್ರಕರಣಗಳು ಅಲ್ಲಿಗೆ ಹಸ್ತಾಂತರವಾಗಲಿದೆ. ಕುಂದಾಪುರ ಭಾಗದವರಿಗೆ ಸಮಸ್ಯೆಯಾಗಲಿದ್ದು, ಇಲ್ಲಿ ಹೆಚ್ಚುವರಿಯಾಗಿ “ಕೌಟುಂಬಿಕ ಕೋರ್ಟ್‌’ನ ಪೀಠ ತೆರೆಯಲು ಬೇಡಿಕೆ ಕೇಳಿ ಬಂದಿದೆ.

ಈ ವರೆಗೆ ಕುಟುಂಬ ಕಲಹದ ವ್ಯಾಜ್ಯಗಳೆಲ್ಲ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆಯಾಯ ತಾಲೂಕಿನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ನಡೆಯುತ್ತಿತ್ತು. ಆದರೆ ಈಗ ಉಡುಪಿಯಲ್ಲಿ ಪ್ರತ್ಯೇಕ ಕೌಟುಂಬಿಕ ನ್ಯಾಯಾಲಯ ಆರಂಭವಾಗುವುದರಿಂದ ಬೈಂದೂರಿನಿಂದ ಆರಂಭಗೊಂಡು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಕುಂದಾಪುರ ಭಾಗದ ಪ್ರಕರಣ ಗಳಿದ್ದರೂ ಅಲ್ಲಿಯೇ ವಿಚಾರಣೆ ನಡೆಯುತ್ತದೆ.

ವರ್ಷಗಟ್ಟಲೆ ಬಾಕಿ
ಕುಟುಂಬ ಕಲಹದ ವ್ಯಾಜ್ಯಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ತ್ವರಿತ ವಿಲೇವಾರಿಯಾಗದಿರುವ ಹಿನ್ನೆಲೆಯಲ್ಲಿ ವರ್ಷಗಟ್ಟಲೆ ಬಾಕಿ ಉಳಿಯುತ್ತಿದೆ. ಈ ನಿಟ್ಟಿನಲ್ಲಿ ಕೆಲ ಜಿಲ್ಲೆಗಳಲ್ಲಿ ಹೈಕೋರ್ಟ್‌ ಹಾಗೂ ರಾಜ್ಯ ಸರಕಾರವು ಕೌಟುಂಬಿಕ ಕೋರ್ಟ್‌ಗಳನ್ನು ಆರಂಭಿಸಲು ಮುಂದಾಗಿದೆ.

ಸಮಸ್ಯೆಯೇನು?
ಇಷ್ಟು ದಿನ ಕುಂದಾಪುರ ಭಾಗದ ಕೌಟುಂಬಿಕ ಕಲಹದ ವ್ಯಾಜ್ಯಗಳೆಲ್ಲ ಇಲ್ಲಿನ ನ್ಯಾಯಾಲಯಗಳಲ್ಲಿಯೇ ನಡೆಯುತ್ತಿದ್ದವು. ಆದರೆ ಇನ್ನು ಕೌಟುಂಬಿಕ ಪ್ರಕರಣಗಳು ಉಡುಪಿಯಲ್ಲಿ ನಡೆಯಲಿವೆ. ಇದರಿಂದ ಇಲ್ಲಿನ ಜನ ಪ್ರಕರಣದ ವಿಚಾರಣೆಗೆ ವೇಳೆಗೆ ಅಲ್ಲಿಗೆ ಹೋಗಬೇಕು. ಕೆಲವೊಮ್ಮೆ ವಿಚಾರಣೆಯು ಸಂಜೆ 5.45 ವರೆಗೂ ನಡೆಯುವುದರಿಂದ ಅಲ್ಲಿಂದ ಬೈಂದೂರು, ಹೊಸಂಗಡಿ, ಕೊಲ್ಲೂರು, ಮತ್ತಿತರೆಡೆಯ ಗ್ರಾಮೀಣ ಭಾಗದ ಜನರಿಗೆ ವಾಪಾಸು ಬರಲು ತುಂಬಾ ಸಮಸ್ಯೆಯಾಗಲಿದೆ.

Advertisement

ವ್ಯಾಪ್ತಿಯೆಷ್ಟು?
ಈಗ ಇಲ್ಲಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ವ್ಯಾಪ್ತಿಯಲ್ಲಿ ಕುಂದಾಪುರ ಹಾಗೂ ಬೈಂದೂರಿನ 101 ಗ್ರಾಮಗಳೊಂದಿಗೆ ಉಡುಪಿ- ಬ್ರಹ್ಮಾವರ ತಾಲೂಕಿನ ಬಾಕೂìರು, ಕೊಕ್ಕರ್ಣೆ, ಮಂದಾರ್ತಿ ಮತ್ತಿತರ ಒಟ್ಟು 32 ಗ್ರಾಮಗಳು ಕೂಡ ಸೇರುತ್ತವೆ. ಈ ವ್ಯಾಪ್ತಿಯಲ್ಲಿ ಕೌಟುಂಬಿಕ ವ್ಯಾಜ್ಯಗಳ ಪ್ರಕರಣಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಇಲ್ಲಿ ಹೆಚ್ಚುವರಿ ಕೋರ್ಟ್‌ ಆರಂಭಿಸುವುದು ಸೂಕ್ತ ಎನ್ನುವ ಬೇಡಿಕೆ ವ್ಯಕ್ತವಾಗಿದೆ.

500 ಕ್ಕೂ ಅಧಿಕ ಪ್ರಕರಣ ಬಾಕಿ
ಕುಂದಾಪುರದಲ್ಲಿ ಈಗಾಗಲೇ ಕೌಟುಂಬಿಕ ವಿಚಾರಕ್ಕೆ ಸಂಬಂಧಿ ಸಿದಂತೆ ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಗಳಲ್ಲಿ ವಿಲೇವಾರಿ ಯಾಗದೇ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 500 ಕ್ಕಿಂತಲೂ ಹೆಚ್ಚಿದೆ. ಉಡುಪಿಯಲ್ಲಿ ಪ್ರತ್ಯೇಕ ಕೌಟುಂಬಿಕ ಕೋರ್ಟ್‌ ಆರಂಭವಾದರೆ ಈ ಎಲ್ಲ ಪ್ರಕರಣಗಳು ಅಲ್ಲಿಗೆ ಹಸ್ತಾಂತರವಾಗುವ ಸಂಭವವಿದೆ.

ಕೌಟುಂಬಿಕ ವ್ಯಾಜ್ಯಗಳು
ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಕಲಹವನ್ನು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಿಸಬಹುದು. ವಿವಾಹ ಊರ್ಜಿತಗೊಳಿಸುವುದು, ಸಂತಾನ ಕ್ರಮಬದ್ಧಗೊಳಿಸುವುದು, ವಿಚ್ಛೇದನ, ಮಕ್ಕಳ ಕಸ್ಟಡಿ, ಮದುವೆಯಿಂದ ಉದ್ಭವಿಸಬಹುದಾದ ಆಸ್ತಿ ಮೇಲಿನ ಹಕ್ಕು, ಪತ್ನಿ ಮತ್ತು ಮಕ್ಕಳ ಹಾಗೂ ತಂದೆ – ತಾಯಿ ಜೀವನಾಂಶದಂತಹ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೌಟುಂಬಿಕ ಕೋರ್ಟ್‌ಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಹೋಗಿ ಬರುವುದೇ ಸಮಸ್ಯೆ
ಕೌಟುಂಬಿಕ ಪ್ರಕರಣಗಳು ಉಡುಪಿಯಲ್ಲಿ ನಡೆಯಲಿದ್ದು, ಇದರಿಂದ ಇಲ್ಲಿನ ಜನ ಪ್ರಕರಣದ ವಿಚಾರಣೆ ವೇಳೆಗೆ ಅಲ್ಲಿಗೆ ಹೋಗಬೇಕು. ಕೆಲವೊಮ್ಮೆ ವಿಚಾರಣೆಯು ಸಂಜೆ 5.45 ವರೆಗೂ ನಡೆಯುವುದರಿಂದ ಅಲ್ಲಿಂದ ವಾಪಸು ಬರಲು ತುಂಬಾ ಸಮಸ್ಯೆಯಾಗಲಿದೆ. ಆದ್ದರಿಂದ ಕುಂದಾಪುರದಲ್ಲೇ ಹೆಚ್ಚುವರಿಯಾಗಿ “ಕೌಟುಂಬಿಕ ಕೋರ್ಟ್‌’ನ ಪೀಠ ತೆರೆಯಲು ಬೇಡಿಕೆ ಕೇಳಿ ಬಂದಿದೆ.

ಪ್ರಸ್ತಾವನೆ ಸಲ್ಲಿಸಲಾಗುವುದು
ಕುಂದಾಪುರದ ವ್ಯಾಪ್ತಿ ಶಿರೂರಿನಿಂದ ಆರಂಭಗೊಂಡು ಮಾಬುಕಳದವರೆಗೂ ಇದ್ದು, ಆಚೆ ಕಡೆ ಹೊಸಂಗಡಿ, ಕೊಲ್ಲೂರು ಕೂಡ ಇದೆ. ಹಾಗಾಗಿ ಬಡ ಜನರು ಉಡುಪಿಗೆ ಹೋಗಿ ಬರುವುದು ತ್ರಾಸದಾಯಕ. ಉಡುಪಿಯಲ್ಲಿ ಕೌಟುಂಬಿಕ ಕೋರ್ಟ್‌ ಆರಂಭಿಸಿದರೂ, ಕುಂದಾಪುರದಲ್ಲಿ ಹೆಚ್ಚುವರಿಯಾಗಿ ಪೀಠ ತೆರೆಯಲು ಬಾರ್‌ ಅಸೋಸಿಯೇಶನ್‌ನಿಂದ ಸಂಬಂಧಪಟ್ಟವರಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು.
– ನಿರಂಜನ ಹೆಗ್ಡೆ ಸಳ್ವಾಡಿ, ಅಧ್ಯಕ್ಷರು, ಬಾರ್‌ ಅಸೋಸಿಯೇಶನ್‌ ಕುಂದಾಪುರ

ಇಲ್ಲಿನ ಜನರಿಗೆ ಸಮಸ್ಯೆ
ಉಡುಪಿಯಲ್ಲಿ ಕೌಟುಂಬಿಕ ಕೋರ್ಟ್‌ ಆರಂಭವಾದರೆ, ಇಲ್ಲಿನ ಜನ ಕುಟುಂಬ ಕಲಹಕ್ಕೆ ಸಂಬಂಧಿಸಿದ ವ್ಯಾಜ್ಯಗಳ ನ್ಯಾಯದಾನಕ್ಕೆ ಅಲ್ಲಿಗೆ ತೆರಳಬೇಕಿದೆ. ಇದು ಇಲ್ಲಿನ ಜನರಿಗೆ ತುಂಬಾ ಸಮಸ್ಯೆಯಾಗಲಿದೆ. ಸಂಜೆವರೆಗೂ ವಿಚಾರಣೆ ನಡೆಯವುದರಿಂದ ಅಲ್ಲಿಂದ ವಾಪಸು ಬರುವಾಗ ಸಮಸ್ಯೆಯಾಗುತ್ತದೆ. ಅದಲ್ಲದೆ ಮಹಿಳೆಯರು ಒಬ್ಬರೇ ಅಷ್ಟು ದೂರ ಹೋಗುವುದು ಕಷ್ಟ. ಜತೆಗೆ ಯಾರಾದರೊಬ್ಬರ ಸಂಬಂಧಿಕರು ಕೂಡ ಹೋಗಬೇಕಾಗುತ್ತದೆ. ಪ್ರಕರಣಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಇಲ್ಲಿಯೂ ಹೆಚ್ಚುವರಿ ಕೋರ್ಟ್‌ ಆರಂಭಿಸಿದರೆ ಅನುಕೂಲವಾಗಲಿದೆ.
– ಶ್ಯಾಮಲಾ ಭಂಡಾರಿ, ಹಿರಿಯ ವಕೀಲರು, ಕುಂದಾಪುರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next