Advertisement

ಈ ಗ್ರಾ.ಪಂ.ಗಳಿಗೆ ಬಿರು ಬೇಸಗೆಯೇ ಬಲು ಬೇಸರ

06:25 AM Mar 15, 2018 | |

ಕುಂದಾಪುರ ನಗರಕ್ಕೆ ಕೂಗಳತೆ ದೂರದಲ್ಲಿರುವ ಕೋಟೇಶ್ವರ ಪ್ರದೇಶದಲ್ಲೂ ಬೇಸಗೆಯಲ್ಲಿ ಕುಡಿಯುವ ನೀರಿನ ಕೊರತೆ ತಪ್ಪಿಲ್ಲ. ಇಲ್ಲಿನ ನಾಲ್ಕೈದು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ದಿನೇ ದಿನೇ ಕುಡಿಯುವ ನೀರಿನ ಬವಣೆ ಹೆಚ್ಚುತ್ತಿರುವುದು ಸುಳ್ಳಲ್ಲ.

Advertisement

ಕೋಟೇಶ್ವರ: ಸಾಕಷ್ಟು ನೀರಿಲ್ಲದೇ ಒಂದು ಬೇಸಗೆ ಕಳೆಯುವುದೇ ಕಷ್ಟ. ಅಂಥದ್ದರಲ್ಲಿ ಕೋಟೇಶ್ವರ, ಗೋಪಾಡಿ, ಬೀಜಾಡಿ, ಕಾಳಾವರ ಸಹಿತ ವಕ್ವಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಮಸ್ಥರು ಮತ್ತೂಂದು ಬೇಸಗೆಯನ್ನು ಎದುರಿಸಲು ಸಜ್ಜಾಗುವ ಸ್ಥಿತಿ ಎದುರಾಗಿದೆ.

ಕುಡಿಯುವ ನೀರಿಗೆ ಶಾಶ್ವತ ಯೋಜನೆ ಯನ್ನು ರೂಪಿಸದಿರುವುದು ಇವರ ಸಂಕಷ್ಟವನ್ನು ಹೆಚ್ಚಿಸಿದೆ. ಹಾಗಾಗಿ ಶಾಶ್ವತ ಪರಿಹಾರವೆನ್ನು ವುದು ಆಶ್ವಾಸನೆಯ ಮಟ್ಟದಲ್ಲೇ ಉಳಿದಿದೆ.
 
ಮೂರು ವರ್ಷಗಳಿಂದ ನೀರಿನ ಕೊರತೆ ಅನುಭವಿಸುತ್ತಿರುವ ಗೋಪಾಡಿ ಗ್ರಾ.ಪಂ.ನ ಮೂಡುಗೋಪಾಡಿ, ಗೋಳಿಬೆಟ್ಟು, ಪಡು ಗೋಪಾಡಿ ಪರಿಸರದಲ್ಲಿ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಪ್ರತಿ ಬೇಸಗೆಯಲ್ಲಿ ಜಲಕ್ಷಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಜಿ.ಪಂ. ಸ್ಪಂದಿಸಬೇಕೆಂಬ ಗೋಪಾಡಿ ಗ್ರಾ. ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್‌ ಅವರ ಮನವಿ ಯಾವ ಪ್ರಯೋಜನಕ್ಕೂ ಬಂದಿಲ್ಲ. 

ಇದಾದರೂ ಮಾಡಿ
ಲಭ್ಯವಿರುವ ಸರಕಾರಿ ಜಾಗದಲ್ಲಿ ಬಾವಿ ತೋಡಿ “ಓವರ್‌ ಹೆಡ್‌ ಟ್ಯಾಂಕ್‌’ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿ ಎಂದು ಪಂಚಾಯತ್‌ ಸಲ್ಲಿಸಿರುವ ಮನವಿ ಜಿ.ಪಂ. ಕಚೇರಿಯ ಕಡತದಲ್ಲಿ ಸೇರಿ ಹೋಗಿದೆ. 

ಕುಂದಾಪುರ-ಕೋಟೇಶ್ವರ ಅವಳಿ ಪಟ್ಟಣವೆಂದು ಗುರುತಿಸಿಕೊಂಡಿವೆ. ಕೋಟೇ ಶ್ವರ 14,500 ಜನಸಂಖ್ಯೆ ಹೊಂದಿದ್ದು ಈ ಭಾಗದ ನಿವಾಸಿಗಳ ನೀರಿನ ûಾಮದ ಗೋಳು ಹೇಳತೀರದು. 11 ಬೂತ್‌ಗಳ 8 ವಾರ್ಡ್‌ ಹೊಂದಿರುವ ಕುಂಬ್ರಿ, ಹಳೆಅಳಿವೆ, ಹೊಸಬಡಾಕೆರೆ, ಅಂಕದಕಟ್ಟೆ, ಗೋಪಾಡಿ, ಮಾರ್ಕೋಡು, ಮಠದಬೆಟ್ಟು, ಬುಕ್ಕನಬೈಲು, ಮೇಪು, ಕೋಟೇಶ್ವರ ಪೇಟೆ, ಆಟಕೆರೆ, ಶಕ್ತಿಬೆಟ್ಟು ಭಾಗಗಳಲ್ಲಿ ನೀರಿನ ಸಮಸ್ಯೆ ನಿರಂತರ. ಮುಖ್ಯವಾಗಿ ಮಠದಬೆಟ್ಟು ಬುಕ್ಕನಬೈಲು ಹಾಗೂ ಕುಂಬ್ರಿಯ ಬ್ರಹ್ಮನಗರ ಇಲ್ಲಿ ಮಾರ್ಚ್‌ನಿಂದ ಮೇ ವರೆಗೆ ಬಾವಿ ಬತ್ತುತ್ತವೆ. ಸುಮಾರು 50 ಮನೆಗಳಿರುವ ಬ್ರಹ್ಮನಗರಕ್ಕೆ ಇನ್ನೂ ಸಮರ್ಪಕ ಕುಡಿಯುವ ನೀರು ಸೌಲಭ್ಯ ಸಿಕ್ಕಿಲ್ಲ. ಈ ಕಠಿನ ಪರಿಸ್ಥಿತಿಯನ್ನು ನಿಭಾಯಿಸಲು ಇಲ್ಲಿನ ಗ್ರಾ.ಪಂ.ಗಳು  ಟ್ಯಾಂಕರ್‌ ನೀರನ್ನು ಪೂರೈಸಲಿದೆ.
 
ನಿಷ್ಪ್ರಯೋಜಕ ಓವರ್‌ ಹೆಡ್‌ ಟ್ಯಾಂಕ್‌
ಕೋಟೇಶ್ವರದ ಸರಕಾರಿ ಶಾಲೆಯ ಸನಿಹ 3 ವರ್ಷಗಳ ಹಿಂದೆ ಭಾರೀ ವೆಚ್ಚದಲ್ಲಿ ನಿರ್ಮಿಸ ಲಾದ ಓವರ್‌ ಹೆಡ್‌ ಟ್ಯಾಂಕ್‌ ಏಕೆ ಬಳಕೆ ಯಾಗುತ್ತಿಲ್ಲ  ಎಂಬುದೇ ಸ್ಥಳೀಯರ ಪ್ರಶ್ನೆ.ಬೀಜಾಡಿ ಗ್ರಾ.ಪಂ. ವ್ಯಾಪ್ತಿಯ ಅರಸರಬೆಟ್ಟು ದೊಡ್ಡೋಣಿ, ಹೊದ್ರಾಳಿ, ವೈದ್ಯರಬೆಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ ಇದ್ದು, ಪೈಪ್‌ ಲೈನ್‌ ಮೂಲಕ ಬಾವಿ ನೀರನ್ನು ಒದಗಿಸಲಾಗುತ್ತಿದೆ. 

Advertisement

ದೊಡ್ಡೋಣಿಯಲ್ಲಿನ ಬಾವಿ ಮೂಲಕ ಕೆಲವೆಡೆ ನೀರು ಹರಿಸಿ ಆ ಮೂಲಕ ಸ್ಥಳೀಯರಿಗೆ ನೀರು ಪೂರೈಸಲಾಗುತ್ತಿದೆ ಎನ್ನುತ್ತಾರೆ ಬೀಜಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಣೇಶ ಅವರು.ಕೋಟೇಶ್ವರ ಶ್ಮಶಾನದ ಸನಿಹದ ಮಠದಬೆಟ್ಟು ಪರಿಸರದಲ್ಲಿ 2 ವರ್ಷಗಳಿಂದ ನೀರಿನ ಕ್ಷಾಮಕ್ಕೆ ಪರಿಹಾರ ಒದಗಿಸಿಲ್ಲವೆಂಬುದು ಸ್ಥಳೀಯರೊಬ್ಬರ ದೂರು.

ಜಿಲ್ಲಾಡಳಿತದ ಸಹಕಾರ ಅಗತ್ಯ
ಕಾಳಾವರ ಗ್ರಾ.ಪಂ.ನ ವಕ್ವಾಡಿ ಸಹಿತ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಜಿಲ್ಲಾಡಳಿತದ ಸಹಕಾರ ಅಗತ್ಯ.

– ರವಿರಾಜ್‌ ಶೆಟ್ಟಿ, 
ಕಾಳಾವರ ಗ್ರಾ.ಪಂ. ಅಧ್ಯಕ್ಷ

ವಾರಾಹಿ ನೀರು ಇಲ್ಲಿಗೂ ಸಿಗಲಿ
ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆ ಬಗೆಹರಿಸಲು ಬಾವಿ ಮೂಲಕ ಪೈಪ್‌ಲೈನ್‌ ಬಳಸಿ ನೀರು ಮಾರ್ಕೋಡಿನಲ್ಲಿರುವ “ಓವರ್‌ ಹೆಡ್‌ ಟ್ಯಾಂಕ್‌’ಗೆ ಹರಿಸಿ, ಆ ಭಾಗದ ನಿವಾಸಿಗಳಿಗೆ ನೀರು ಒದಗಿಸಲಾಗುತ್ತಿದೆ. ವಾರಾಹಿ ನೀರು ಸರಬರಾಜು ಪ್ರಕ್ರಿಯೆ ಈ ಭಾಗಕ್ಕೂ ಮುಂದುವರಿಸಿದಲ್ಲಿ ಸಮಸ್ಯೆ ಬಗೆಹರಿಯಲಿದೆ.
– ಉದಯ ನಾಯಕ್‌, 
ಕೋಟೇಶ್ವರ ಗ್ರಾ.ಪಂ. ಉಪಾಧ್ಯಕ್ಷ 

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ಕುಂದಾಪುರ – ಕಾರ್ಕಳ ಗ್ರಾಮೀಣ ಭಾಗದ ಹಲವು ಪ್ರದೇಶಗಳ ಲೇಖನಗಳು ಮೂಡಿಬರಲಿವೆ. ನಿಮ್ಮ ಭಾಗದಲ್ಲೂ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು.  ವಾಟ್ಸ್ಯಾಪ್‌ ನಂಬರ್‌ 91485 94259

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next