Advertisement

ಕುಂದಾಪುರ ನಗರಕ್ಕೆ ಇನ್ನು 24 ತಾಸು ನೀರು

11:39 PM Jan 04, 2020 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ನಡೆಯುತ್ತಿರುವ ನೀರಿನ ಟ್ಯಾಂಕ್‌ ಹಾಗೂ ಪೈಪ್‌ಲೈನ್‌ ಕಾಮಗಾರಿ ಇನ್ನು 3 ತಿಂಗಳಲ್ಲಿ ಪೂರ್ಣವಾಗುವ ನಿರೀಕ್ಷೆಯಿದೆ.

Advertisement

ಕೋಡಿಯಲ್ಲೊಂದು ಟ್ಯಾಂಕ್‌ ಕಾಮಗಾರಿ ಪೂರ್ಣವಾದರೆ ಕುಂದಾಪುರದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ಆಶಾಭಾವ ಜನತೆಯಲ್ಲಿದೆ. ಕೋಡಿ ಭಾಗದ ಜನತೆ ಹಲವು ಸಮಯದಿಂದ ಕಾಯುತ್ತಿದ್ದರೂ ವರ್ಷಗಳಿಂದ ಪೂರ್ಣವಾಗಿಲ್ಲ. ಹಿಂದಿನ ಅವಧಿಯ ಪುರಸಭೆ ಜನಪ್ರತಿನಿಧಿಗಳು ಕೂಡ ತಮ್ಮ ಅವಧಿಯಲ್ಲೇ ಕಾಮಗಾರಿ ಆಗುತ್ತದೆ ಎಂದಿದ್ದರು. ಆದರೆ ಸಮಯ ಇಷ್ಟಾದರೂ ಕಾಮಗಾರಿ ನಡೆಯುತ್ತಲೇ ಇದೆ, ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣವಾಗಲಿದೆ ಎನ್ನಲಾಗಿದೆ.

24 ತಾಸು ನೀರು
35.5 ಕೋ.ರೂ. ಯೋಜನೆ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ, ವಾಣಿಜ್ಯ ಉಪ ಯೋಗಕ್ಕೆ ದಿನದ 24 ತಾಸು ನೀರು ಒದಗಿಸಲು ಯೋಜನೆಯ ಕಾಮಗಾರಿ ಆಗುತ್ತಿದೆ. 23.1 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಸಾಲದಿಂದ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ (ಜಲಸಿರಿ) ಮೂಲಕ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿಗೆ ಕಲ್ಕತ್ತಾದ ಮೆ| ಜಿ.ಕೆ. ಡಬ್ಲೂé ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಕಾಮಗಾರಿಗೆ ಟೆಂಡರ್‌ ಮಂಜೂರಾಗಿದೆ. ಒಟ್ಟು ಅವಧಿ 25 ತಿಂಗಳು. 2020 ಇಸವಿ ಬಂದರೂ ಕಾಮಗಾರಿ ಮುಗಿದಿಲ್ಲ. ಆದ್ದರಿಂದ ಈ ಬೇಸಗೆಗೆ ನೀರಿಗೆ ಉಪಯೋಗಕ್ಕೆ ದೊರೆಯುವಂತೆ ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ಬಿಟ್ಟುಕೊಡಬೇಕಿದೆ. ಕಾಮಗಾರಿ ಮುಗಿದ ಅನಂತರ 96 ತಿಂಗಳು ಅಂದರೆ 8 ವರ್ಷ ಅದರ ನಿರ್ವಹಣೆ ಹೊಣೆಯೂ ಕಾಮಗಾರಿ ನಿರ್ವಹಿಸಿದ ಸಂಸ್ಥೆಯದ್ದೇ ಆಗಿರುತ್ತದೆ. ಹಾಗಾಗಿ ಕಾಮಗಾರಿಗೆ 23.1 ಕೋ.ರೂ. ನೀಡಿದ್ದರೆ ಅದರ ನಿರ್ವಹಣೆಗೆ ಎಂದೇ 12.4 ಕೋ. ರೂ. ನೀಡಲಾಗುತ್ತಿದೆ. ಒಟ್ಟು 35.5 ಕೋ.ರೂ. ವೆಚ್ಚದ ಕಾಮಗಾರಿ ಇದಾಗಿದೆ.

ಎರಡು ಟ್ಯಾಂಕ್‌
ಎರಡು ಕಡೆ ಟ್ಯಾಂಕ್‌ ರಚನೆಯಾಗಬೇಕಿದ್ದು ಸಂಗಮ್‌ ಬಳಿ ಪೂರ್ಣ ಹಂತಕ್ಕೆ ತಲುಪಿದೆ. ಕೋಡಿ ಸಮೀಪ ಕಡಲ ತೀರದಲ್ಲಿ ಟ್ಯಾಂಕ್‌ ರಚನೆ ಕಾಮಗಾರಿ ನಡೆದಿದೆ. 32 ಕಿ.ಮೀ. ಪೈಪ್‌ಲೈನ್‌ ಎರಡು ಟ್ಯಾಂಕ್‌ಗಳಿಂದ 6 ಸಾವಿರ ಸಂಪರ್ಕಗಳಿಗೆ ನೀರು ಕೊಡಲು ಒಟ್ಟು 32 ಕಿ.ಮೀ. ಪೈಪ್‌ಲೈನ್‌ ಕಾಮಗಾರಿ ಪೈಕಿ ಸ್ವಲ್ಪ ಬಾಕಿ ಇದೆ.
ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ 3 ಸಾವಿರ ನೀರಿನ ಸಂಪರ್ಕಗಳಿವೆ. ಇನ್ನು ಇದು ದುಪ್ಪಟ್ಟು ಆಗಲಿದ್ದು ದಿನವಿಡೀ ನೀರು ಒದಗಿಸಲು ಈ ಯೋಜನೆ ರೂಪಿಸಲಾಗಿದೆ. 3,153 ನೀರಿನ ಹೊಸ ಸಂಪರ್ಕದ ಗುರಿಯಲ್ಲಿ 2,650 ಹೊಸ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿ ಆಗಿದೆ. ಜಪ್ತಿಯಲ್ಲಿ ನೀರು ಸಾಗಿಸುವ ಶುದ್ಧೀಕರಣ ಘಟಕದಲ್ಲಿ ಶೇ.75ರಷ್ಟು ಕಾಮಗಾರಿ ಆಗಿದ್ದು ಇನ್ನು ಎಲೆಕ್ಟ್ರಿಕ್‌ ಕೆಲಸಗಳು ಬಾಕಿಯಿವೆ. ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಆಗಮಿಸಿದ ಇಲಾಖಾ ತಂಡ ಕಾಮಗಾರಿಯ ಪರಿಶೀಲನೆ ನಡೆಸಿದೆ.

Advertisement

ಶೀಘ್ರ ಮುಕ್ತಾಯ
ಕಾಮಗಾರಿ ಮುಗಿಸಲು ಮಾರ್ಚ್‌ ಅಂತ್ಯದ ಗಡುವು ನೀಡಲಾಗಿದ್ದು, ಈ ಬೇಸಗೆಗೆ ಕುಡಿಯಲು ನೀರಿಗೆ ದೊರೆಯಲಿದೆ. ಪೈಪ್‌ಲೈನ್‌ನಿಂದಾಗಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಎಂ ಕೋಡಿಯಲ್ಲಿ ರಸ್ತೆ ಅಗೆದಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗಿದೆ. ನಳ್ಳಿನೀರಿನ ಸಂಪರ್ಕ ಜೋಡಣೆ ನಡೆಯುತ್ತಿದೆ. ಶುದ್ಧೀಕರಣ ಘಟಕದಲ್ಲೂ ಹೊಸ ಟ್ಯಾಂಕ್‌ಗೆ ನೀರು ತುಂಬಿಸಲು ಕೆಲಸ ನಡೆದಿದೆ. -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next