Advertisement
ಬೈಂದೂರು ತಾಲೂಕಿನ ಕಾಲೊ¤àಡಿನ ಬೋಳಂಬಳ್ಳಿ ಸಮೀಪದ ಬೀಜಮಕ್ಕಿ ಎಂಬಲ್ಲಿ ಕಳೆದ ವರ್ಷದ ಆ.8 ರಂದು ಪುಟ್ಟ ಹೆಣ್ಣು ಮಗುವೊಂದು ಶಾಲೆಯಿಂದ ಬರುವ ವೇಳೆ ಹಳ್ಳಕ್ಕೆ ಬಿದ್ದು ಸಾವನ್ನಪಿತ್ತು. ಈ ದುರ್ಘಟನೆಯ ಅನಂತರ ಎಚ್ಚೆತ್ತ ಜಿಲ್ಲಾಡಳಿತ ಕಾಲುಸಂಕಗಳ ಮಾಹಿತಿಯನ್ನು ಸಂಗ್ರಹಿಸಿ, ಎಲ್ಲೆಲ್ಲಿ ಕಾಲುಸಂಕಗಳ ನಿರ್ಮಾಣ ಆಗಬೇಕು ಎಂಬುದರ ಸಂಪೂರ್ಣ ವಿವರವನ್ನು ಪಿಡಿಒಗಳ ಮೂಲಕ ಪಡೆದಿತ್ತು.
ಬೈಂದೂರು ಕ್ಷೇತ್ರದ 72 ಕಾಲು ಸಂಕಗಳಿಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ 5 ಕೋ.ರೂ. ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಆದರೆ ಈ ಪೈಕಿ ಈವರೆಗೆ ಪೂರ್ಣಗೊಂಡಿರುವುದು ಕೇವಲ 24 ಕಾಲು ಸಂಕ ಮಾತ್ರ. ಇನ್ನು 6 ಕಾಲು ಸಂಕ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆ 42 ಕಾಲು ಸಂಕಗಳ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.
Related Articles
ಕುಂದಾಪುರ ಕ್ಷೇತ್ರದ 33 ಕಾಲು ಸಂಕಗಳಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಲ್ಲಿ ಅನುದಾನ ಮಂಜೂರಾಗಿತ್ತು. ಈ ಪೈಕಿ ಕುಂದಾಪುರ ತಾಲೂಕಿನ 20 ಕಾಲು ಸಂಕಗಳ ಪೈಕಿ 4 ಪೂರ್ಣಗೊಂಡಿದ್ದು, 9 ಪ್ರಗತಿಯಲ್ಲಿದೆ. 7 ಇನ್ನಷ್ಟೇ ಕಾಮಗಾರಿ ಆರಂಭಗೊಳ್ಳಬೇಕಿದೆ. ಬ್ರಹ್ಮಾವರ ತಾಲೂಕಿನ 13 ಕಾಲು ಸಂಕಗಳ ಪೈಕಿ 8 ಪೂರ್ಣಗೊಂಡಿದ್ದು, 4 ಪ್ರಗತಿಯಲ್ಲಿದ್ದು, 1 ಕಾಲು ಸಂಕದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಲಿದೆ.
Advertisement
ಕುಂದಾಪುರ, ಬೈಂದೂರಿನ ಗ್ರಾಮೀಣ ಭಾಗದ ಅನೇಕ ಹಳ್ಳಿಗಳಲ್ಲಿ ನದಿ, ಹೊಳೆ ದಾಟಲು ಸರಿಯಾದ ಸೇತುವೆ, ಕಿರು ಸೇತುವೆಯಿಲ್ಲದೆ, ಪ್ರತಿ ಮಳೆಗಾಲದಲ್ಲಿ ಈ ಭಾಗದ ಜನರು ನದಿಗೆ ಅಡ್ಡಲಾಗಿ ನಿರ್ಮಿಸಿದ ಮರದ ಕಾಲು ಸಂಕದಲ್ಲೇ ಪ್ರಯಾಸಪಟ್ಟು ದಾಟಿ ಬರುತ್ತಿದ್ದಾರೆ. ಅದರಲ್ಲೂ ನೂರಾರು ಮಂದಿ ಪುಟ್ಟ – ಪುಟ್ಟ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ನದಿ ದಾಟುವ ಪರಿಸ್ಥಿತಿಯಿದೆ. ಈಗಾಗಲೇ ಅಗತ್ಯವಿರುವ ಕಾಲು ಸಂಕವನ್ನು ಮುಂದಿನ ಮಳೆಗಾಲದೊಳಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.
ಮಳೆಗಾಲಕ್ಕೂ ಮುನ್ನ ಎಲ್ಲ ಪೂರ್ಣಬಾಕಿ ಇರುವ ಕಾಲು ಸಂಕ ಕಾಮಗಾರಿ ಆದಷ್ಟು ಬೇಗ ಆರಂಭಗೊಳ್ಳಲಿದೆ. ನದಿ ತಟದ ಪ್ರದೇಶಗಳು ಇರುವ ಕಡೆಗಳಲ್ಲಿ ನೀರು ಇದ್ದುದರಿಂದ ಕಾಮಗಾರಿ ಆರಂಭಿಸಲು ಆಗಿಲ್ಲ. ಈಗ ಕಡಿಮೆಯಾಗುತ್ತಿದ್ದು, ಈಗಿನ್ನು ಕೆಲ ದಿನಗಳಲ್ಲಿಯೇ ಆರಂಭಗೊಳ್ಳಲಿದೆ. ಮಳೆಗಾಲಕ್ಕೂ ಮೊದಲು ಬಹುತೇಕ ಎಲ್ಲ ಕಾಲು ಸಂಕಗಳು ಪೂರ್ಣಗೊಳ್ಳಲಿದೆ ಎನ್ನುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. *ಪ್ರಶಾಂತ್ ಪಾದೆ