Advertisement

ಕುಂದಾಪುರ-ಭಟ್ಕಳ ವೋಲ್ವೋ 35 ರೂ. ಹೆಚ್ಚಳ

06:00 AM Jun 14, 2018 | Team Udayavani |

ಬೈಂದೂರು: ಇತ್ತೀಚೆಗಷ್ಟೇ ಗ್ರಾಮಾಂತರ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸಿದ್ದ ಕೆಎಸ್‌ಆರ್‌ಟಿಸಿ ಉತ್ತಮ ಜನಬೆಂಬಲವಿರುವ ಮಂಗಳೂರು – ಭಟ್ಕಳ ವೋಲ್ವೋ ಬಸ್‌ಗಳ ಯಾನ ದರವನ್ನು ಏಕಾಏಕಿ ಹೆಚ್ಚಿಸುವ ಮೂಲಕ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿದೆ. ಸರಾಸರಿ 40 ರೂ. ಹೆಚ್ಚಾಗಿರುವುದರಿಂದ ನಿತ್ಯ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ.

Advertisement

ಕಳೆದ ಹಲವು ವರ್ಷಗಳಿಂದ ಮಂಗಳೂರು ಮತ್ತು ಧರ್ಮಸ್ಥಳದಿಂದ ವಿಜಯಪುರ-ಶಿರಸಿ ಸಹಿತ ದೂರದ ಊರುಗಳಿಗೆ ಹೋಗುವ ಬಸ್‌ಗಳನ್ನು ಹೊರತುಪಡಿಸಿದರೆ ಕುಂದಾಪುರ- ಭಟ್ಕಳ ನಡುವೆ ಸಮರ್ಪಕ ಬಸ್‌ ಸೇವೆ ಇರಲಿಲ್ಲ. ಕಳೆದ ಜನವರಿಯಿಂದ ಮಂಗಳೂರು-ಭಟ್ಕಳ ನಡುವೆ ವೋಲ್ವೋ ಬಸ್‌ಗಳನ್ನು ಪ್ರಾರಂಭಿಸುವ ಮೂಲಕ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಹೊಸ ಕೊಡುಗೆ ನೀಡಿತ್ತು.

ಭಟ್ಕಳ- ಬೈಂದೂರು-ಶಿರೂರು ಭಾಗ ಗಳ ಜನರಿಗೆ ಇದರಿಂದ ಸಾಕಷ್ಟು ಅನು ಕೂಲವಾಗಿತ್ತು. ಅಷ್ಟರ ತನಕ ಭಟ್ಕಳದಿಂದ ವೈದ್ಯಕೀಯ ಸೇವೆ ಇತ್ಯಾದಿಗಳಿಗೆ ಮಂಗಳೂರಿಗೆ ಹೋಗಬೇಕಿದ್ದರೆ ಖಾಸಗಿ ಕಾರು ಗಳಿಗೆ ದುಬಾರಿ ಬಾಡಿಗೆ ತೆತ್ತು ಹೋಗ ಬೇಕಿತ್ತು. ವೋಲ್ವೋ ಪ್ರಾರಂಭ ವಾದ ಬಳಿಕ ಪ್ರಯಾಣಿಕರ ಸ್ಪಂದನ ಉತ್ತಮವಾಗಿತ್ತು. ಬಹುತೇಕ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಈ ಸರಕಾರಿ ಬಸ್‌ ವ್ಯವಸ್ಥೆ ಖಾಸಗಿ ವಾಹನಗಳ ಮೇಲೆಯೂ ಸಾಕಷ್ಟು ಪರಿಣಾಮ ಬೀರಿತ್ತು.  ಇದೀಗ ಏಕಾಏಕಿ ದರ ಹೆಚ್ಚಿಸಿರುವುದರಿಂದ ಜನತೆ ವೋಲ್ವೋ ಬಸ್‌ಗಳಿಂದ ದೂರವಾಗುವ ಸಾಧ್ಯತೆಗಳಿವೆ.

3 ಕೋ.ರೂ. ನಷ್ಟ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಕಳೆದ ಆರ್ಥಿಕ ವರ್ಷದಲ್ಲಿ 22.52 ಕೋ.ರೂ. ನಷ್ಟದಲ್ಲಿದೆ. ಜನವರಿ ಯಲ್ಲಿ ಭಟ್ಕಳ – ಮಂಗಳೂರು ನಡುವೆ 8 ವೋಲ್ವೋ ಬಸ್‌ಗಳನ್ನು ಪ್ರಾರಂಭಿಸಲಾಗಿತ್ತು. ಇದರಿಂದ ಲಾಭ ವಾಗುವ ಬದಲು ನಷ್ಟವೇ ಅಧಿಕ ವಾಗಿದೆ. ಭಟ್ಕಳ-ಮಂಗಳೂರು ವೋಲ್ವೋ ಬಸ್‌ ಸಂಚಾರದಲ್ಲೇ ಜನವರಿಯಿಂದ ಇಲ್ಲಿನ ವರೆಗೆ 3 ಕೋ.ರೂ. ನಷ್ಟವಾದರೆ ಕಳೆದ ಆರ್ಥಿಕ ವರ್ಷ ದಲ್ಲಿ 2.47 ಕೋಟಿ ರೂ. ನಷ್ಟ ಆಗಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ನಷ್ಟ  ಸರಿದೂಗಿಸಲು ಏರಿಕೆ
ಬಸ್‌ ಆರಂಭಿಸುವಾಗ ಖಾಸಗಿಯವರಿಗೆ ಪೈಪೋಟಿ ನೀಡಲು ಕಡಿಮೆ ದರ ನಿಗದಿಪಡಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ವೋಲ್ವೋ ಬಸ್‌ಗೆ ಪ್ರತಿ ಕಿ.ಮೀ.ಗೆ 56 ರೂ. ವೆಚ್ಚವಾಗುತ್ತದೆ. ಆದಾಯ 33 ರೂ. ಆಗಿದ್ದು, ಪ್ರತಿ ಕಿ.ಮೀ.ಗೆ ಸರಾಸರಿ 23 ರೂ. ನಷ್ಟವಾಗುತ್ತದೆ. ಸೀಸನ್‌ನಲ್ಲಿ ಗಳಿಸಿರುವ ಆದಾಯದ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ನಷ್ಟದಲ್ಲಿ ಬಸ್‌ ಓಡಿಸಲು ಕಷ್ಟವಾಗುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ. 
 ದೀಪಕ್‌ ಕುಮಾರ್‌, ಕೆಎಸ್‌ಆರ್‌ಟಿಸಿ ಡಿಸಿ

Advertisement

ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next