ಕುಂದಾಪುರ: ಉಡುಪಿ ಜಿಲ್ಲಾ ಉಪ ಕೇಂದ್ರವಾದ ಕುಂದಾಪುರ ವಿಧಾನಸಭಾ ಕ್ಷೇತ್ರವು ಕುಂದಾಪುರ, ಬ್ರಹ್ಮಾವರ, ಹೆಬ್ರಿ ತಾಲೂಕುಗಳಿಗೆ ವ್ಯಾಪಿಸಿದ್ದು, ಇಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಬ್ರಿಟಿಷರ ಆಡಳಿತಾವಧಿಯ ಮದ್ರಾಸ್ ಪ್ರಾಂತ್ಯದಲ್ಲಿದ್ದ “ಕುಂದಾಪುರ’ದಲ್ಲಿ 1952ರ ಚುನಾವಣೆಯಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಅವರು ಅವಿರೋಧ ಆಯ್ಕೆಯಾಗಿದ್ದು , 1956 ರಲ್ಲಿ ಮೈಸೂರು ರಾಜ್ಯದ ಅಧೀನಕ್ಕೆ ಬಂತು. ಆರಂಭದಲ್ಲಿ ಇದು ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ, ನಡುವೆ ಜನತಾ ಪಕ್ಷ, ಪ್ರಜಾ ಸೋಶಿಯಲಿಸ್ಟ್ ಪಕ್ಷಕ್ಕೂ ಅವಕಾಶ ನೀಡಿ ಮರಳಿ ಕಾಂಗ್ರೆಸ್ ತೆಕ್ಕೆಗೆ ಸಿಲುಕಿ, ಬಳಿಕ ಬಿಜೆಪಿ ಪ್ರಾಬಲ್ಯ ಪಡೆದುಕೊಂಡಿತು.
1983ರಿಂದ ನಾಲ್ಕು ಅವಧಿಗಳಲ್ಲಿ ಸತತವಾಗಿ ಕಾಂಗ್ರೆಸ್ ವಶದಲ್ಲಿದ್ದ ಕ್ಷೇತ್ರವನ್ನು 1999ರ ಚುನಾವಣೆಯಲ್ಲಿ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. 2013ರಲ್ಲಿ ಬಿಜೆಪಿಯಿಂದ ಸಿಡಿದು ಹೋದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಅವರ ಪಾಲಾಯಿತು. 2018ರಲ್ಲಿ ಮತ್ತೆ ಹಾಲಾಡಿ ಮೂಲಕ ಬಿಜೆಪಿಗೆ ಉಳಿಯಿತು.
1952ರಿಂದ 2018ರವರೆಗೆ ನಡೆದಿರುವ ಒಟ್ಟು 15 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಎಂಟು ಬಾರಿ ಕಾಂಗ್ರೆಸ್ ಹಾಗೂ ನಾಲ್ಕು ಬಾರಿ ಬಿಜೆಪಿ ಜಯಗಳಿಸಿವೆ. ತಲಾ ಒಮ್ಮೆ ಜನತಾ ಪಕ್ಷ, ಪ್ರಜಾ ಸೋಶಿಯಲಿಸ್ಟ್ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗೆ ಗೆಲುವಾಗಿದೆ.
Related Articles
ಕ್ಷೇತ್ರದಲ್ಲಿ 13 ಬಾರಿ ಬಂಟ ಸಮುದಾಯದವರೇ ಶಾಸಕರಾಗಿದ್ದಾರೆ. ಎರಡು ಬಾರಿ ಕ್ರೈಸ್ತ ಸಮುದಾಯದವರು ಆಯ್ಕೆಯಾಗಿದ್ದರು. ಬಂಟ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದರೆ, ಅನಂತರದಲ್ಲಿ ಬಿಲ್ಲವರು ಹಾಗೂ ಮೊಗವೀರ ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 1983ರ ಅನಂತರದ ಚುನಾವಣ ಇತಿಹಾಸ ಅವಲೋಕಿಸಿದರೆ ಇಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ.
ಉನ್ನತ ಸ್ಥಾನಮಾನ
ಈ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ಒಬ್ಬರೇ ಒಬ್ಬರು ಸಚಿವರಾಗಿಲ್ಲ ಎನ್ನುವುದು ಇಲ್ಲಿನ ಜನತೆಗಿರುವ ಬೇಸರ. 1983ರಲ್ಲಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಪ್ರತಾಪಚಂದ್ರ ಶೆಟ್ಟಿ ಜತೆಯಾಗಿ ವಿಧಾನಸಭೆ ಪ್ರವೇಶಿಸಿದವರು. ಅವರಿಬ್ಬರೂ ಮುಖ್ಯಮಂತ್ರಿಗಳಾಗಿದ್ದರೂ ಶೆಟ್ಟರಿಗೆ ಸಚಿವ ಸ್ಥಾನವೂ ದೊರೆಯಲಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಪದ ನೀಡುವುದಾಗಿ ಬೆಂಗಳೂರಿಗೆ ಕರೆಸಿ ಅಂತಿಮ ಹಂತದಲ್ಲಿ ಕೈಬಿಟ್ಟಿದ್ದರು. ಪ್ರತಾಪಚಂದ್ರ ಶೆಟ್ಟರು ವಿಧಾನಪರಿಷತ್ ಸ್ಪೀಕರ್ ಆಗಿದ್ದರು.
ಕುತೂಹಲ!
ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗಿದ್ದು, ದಿನೇಶ್ ಹೆಗ್ಡೆ ಕಣದಲ್ಲಿದ್ದಾರೆ. ಬಿಜೆಪಿಯಿಂದ ಕಿರಣ್ ಕುಮಾರ್ ಕೊಡ್ಗಿ ಅವರು ಟಿಕೆಟ್ ಗಿಟ್ಟಿಸಿ ಕೊಂಡಿದ್ದಾರೆ. ಇನ್ನು ಜೆಡಿಎಸ್, ಪ್ರಜಾಕೀಯ ಪಕ್ಷದ ನಾಯಕರು ಸ್ಪರ್ಧಾಕಣದಲ್ಲಿರುವ ಸಾಧ್ಯತೆ ಇದ್ದು,
ಮತದಾರರು ಯಾರಿಗೆ ತಮ್ಮ ಒಲವು ತೋರಿಸಲಿದ್ದಾರೆ ಎಂಬುದು ಕಾದು ನೋಡಬೇಕು. ಒಟ್ಟಿನಲ್ಲಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.
*ಲಕ್ಷ್ಮೀ ಮಚ್ಚಿನ