Advertisement

ಕುಂದಾಪುರ: ಸಂತೆ ಪ್ರಾಂಗಣ ಬಳಿ ಗೊಂದಲಕಾರಿಯಾದ ಸರ್ವಿಸ್‌ ರಸ್ತೆ

10:29 PM Feb 09, 2020 | Sriram |

ಕುಂದಾಪುರ: ಕುಂದಾಪುರ ಸಂತೆ ಹೆಸರು ಕೇಳಿದಾಗ ಕುಂದಾಪುರದ ಗತ ವೈಭವ ನೆನಪಾಗುತ್ತದೆ ಎನ್ನುತ್ತಾರೆ ಹಿರಿಯರು. ಆದರೆ ಈಗ ಸಂತೆ ಮಾರುಕಟ್ಟೆಗೆ ಪ್ರವೇಶಿಸುವುದು ಕೂಡ ಕಷ್ಟ ಎಂಬ ಸ್ಥಿತಿ ಹೆದ್ದಾರಿ ಕಾಮಗಾರಿಯಿಂದಾಗಿ ಬಂದೊದಗಿದೆ. ಸರ್ವಿಸ್‌ ರಸ್ತೆಯ ಗೊಂದಲ, ಹೆದ್ದಾರಿಯಿಂದ ಪ್ರವೇಶಿಸಲು ಇಲ್ಲದ ಅವಕಾಶ, ಬಸ್‌ ಇಳಿದು ಸಂತೆಗೆ ಬರಲು ಇಲ್ಲದ ದಾರಿಯಿಂದ ಸಮಸ್ಯೆಗಳ ಆಗರವಾಗಿದೆ.

Advertisement

ದಾರಿಯಿಲ್ಲ
ಇಲ್ಲಿನ ಸಂತೆ ಜಿಲ್ಲೆಯಲ್ಲಿ ದೊಡ್ಡ ಸಂತೆಯಾಗಿದ್ದು, ಮಾರುಕಟ್ಟೆಯ ವಿಸ್ತೀರ್ಣ ಕೂಡ ವಿಶಾಲವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದ್ದು ಶನಿವಾರ ನಡೆಯುವ ಈ ಸಂತೆಗೆ ಬರುವ ರೈತರಿಗೆ, ಗ್ರಾಹಕರಿಗೆ ಆಗುವ ತೊಂದರೆ ನೋಡಿದಾಗ ಬೇಸರವಾಗುತ್ತದೆ. ಸಣ್ಣಪುಟ್ಟ ರೈತರು ತಾವು ಬೆಳೆದ ತರಕಾರಿ, ಹಣ್ಣು ಹಂಪಲುಗಳನ್ನು ಮಾರಲು ಬಸ್ಸಿನಲ್ಲಿ ಬರಬೇಕಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಳಿದು ಸುಮಾರು ಒಂದು ಕಿ.ಮೀ. ನಷ್ಟು ದೂರ ತಲೆಹೊರೆಯಲ್ಲಿ ಹೊತ್ತು, ನಡೆದುಕೊಂಡೇ ಮಾರುಕಟ್ಟೆಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಅಕ್ಕಪಕ್ಕದಲ್ಲಿ ಕಬ್ಬಿಣದ ಸರಳುಗಳಿಂದ ತಡೆಗೋಡೆ ಹಾಕಿರುವುದೇ ಇದಕ್ಕೆ ಕಾರಣ.

ವಾಹನ ಇಲ್ಲ
ಗ್ರಾಹಕರು ತಾವು ಖರೀದಿ ಮಾಡಿದ ಸಾಮಾನುಗಳನ್ನು ಕೊಂಡು ಹೋಗಲು ವಾಹನ ಸೌಲಭ್ಯ
ಇಲ್ಲದಿರುವುದರಿಂದ ಜನರು ಪೇಚಾಡುವ ಪರಿಸ್ಥಿತಿ ಉಂಟಾಗಿದೆ. ಸರ್ವಿಸ್‌ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಟ್ರಾಫಿಕ್‌ ನಿಲುಗಡೆಗೆ ಕಾರಣವಾಗಿರುವುದರಿಂದ ಸಂತೆಗೆ ಬಂದವರಿಗೆ, ರಿಕ್ಷಾದವರು, ಕಾರಿನವರಿಗೆ ಹೊರಬರಲು ತಾಸುಗಟ್ಟಲೆ ವಾಹನಗಳ ಹಾರ್ನ್ ಶಬ್ದದಿಂದ ರಸ್ತೆಯಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳಿಗೆ ಸಂಚರಿಸಲು ಸರಿಯಾದ ದಾರಿ ವ್ಯವಸ್ಥೆ ಇಲ್ಲ.

ಪೊಲೀಸ್‌ ಇಲ್ಲ
ಈ ಹಿಂದೆ ಸಂತೆ ದಿನ ಪೊಲೀಸ್‌ನವರು ಇದ್ದು ಎಲ್ಲ ಸಮಸ್ಯೆಗಳನ್ನು ನಿರ್ವಹಿಸುತ್ತಿದ್ದರು, ಈಗ ಸಿಬಂದಿ ಕೊರತೆಯಿಂದ ಪೊಲೀಸರೂ ಇರುವುದಿಲ್ಲ. ಈ ಎಲ್ಲ ಕಾರಣದಿಂದ ದೂರದಿಂದ ರೈತರು ಬೆಳೆದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಂತೆಗೆ ಮಾರಾಟಕ್ಕೆ ತರುವುದಿಲ್ಲ. ಸಂತೆಯಲ್ಲಿದ್ದ ಬೆಳೆಗಳು ಕಡಿಮೆ ಪ್ರಮಾಣದಲ್ಲಿ ಇದ್ದುದರಿಂದ ಬೆಲೆ ದುಬಾರಿಯಾಗಿದೆ. ನಮ್ಮೂರಿನ ಅಂಗಡಿಯಲ್ಲಿ ಸಿಗುವ ತರಕಾರಿ, ಹಣ್ಣುಗಳು ಕಡಿಮೆ ಬೆಲೆಯಾಗಿದ್ದರಿಂದ ಅಂಗಡಿಯಲ್ಲೆ ಖರೀದಿ ಮಾಡುತ್ತಿದ್ದಾರೆ.

ದಾರಿ ಸರಿಪಡಿಸಿ
ಜನರು ಸಂತೆಗೆ ಹೋಗುವುದನ್ನೆ ನಿಲ್ಲಿಸಿದ್ದಾರೆ. ಇಲ್ಲಿನ ಸಮಸ್ಯೆಗೆ ಸಂಬಂಧಪಟ್ಟವರು ಸರಿಪಡಿಸಬೇಕಿದೆ. ನಮ್ಮೂರಿನ ಸಂತೆಗೆ ಈ ಹಿಂದಿನ ಮೆರುಗನ್ನು ತರುವ ಪ್ರಯತ್ನ ಹಾಗೂ ಸಂತೆಗೆ ಬಂದು ಹೋಗುವ ಗ್ರಾಹಕರಿಗೆ ಮತ್ತು ರೈತರಿಗೆ ಅನುಕೂಲಕರ ವಾತಾವರಣ ಮಾಡಿಕೊಡಬೇಕಿದೆ.
-ರಾಜೇಶ್‌ ಕಾವೇರಿ,ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next