Advertisement

ಕುಂದಾಪುರ: ಅರೆಬರೆ ಬೆಳಗಿದ ಹೆದ್ದಾರಿ ದೀಪ

11:43 AM Jul 21, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಂದೋ ಬೆಳಗಬೇಕಿದ್ದ ಬೀದಿ ದೀಪಗಳು ಈಗಷ್ಟೇ ಬೆಳಕು ಹರಿಸತೊಡಗಿವೆ. ಅವೂ ಅರೆಬರೆ. ಇನ್ನೂ ಪೂರ್ಣಪ್ರಮಾಣದಲ್ಲಿ ಬೆಳಕು ನೀಡಲು ಗುತ್ತಿಗೆದಾರರಿಗೆ ಸಾಧ್ಯವಾಗಿಲ್ಲ.

Advertisement

ಕೋಟೇಶ್ವರ ಫ್ಲೈಓವರ್‌, ಬೈಂದೂರು, ಶಿರೂರು ಮೊದಲಾದೆಡೆ ಹೆದ್ದಾರಿಯಲ್ಲಿ ದೀಪಗಳು ಕತ್ತಲಾಗುತ್ತಿದ್ದಂತೆ ಝಗಮಗನೆ ಬೆಳಗಿ ಇರುಳನ್ನು ಓಡಿಸುವ ಕೆಲಸವನ್ನು ಎಂದೋ ಮಾಡುತ್ತಿವೆ. ಆದರೆ ದಶಕಗಳ ಕಾಲ ಕಾದು ಫ್ಲೈಓವರ್‌ ಪೂರ್ಣವಾಗಿದ್ದರೂ 2021ರ ಎಪ್ರಿಲ್‌ನಿಂದಲೇ ವಾಹನಗಳ ಓಡಾಟ ನಡೆಯುತ್ತಿದ್ದರೂ 14 ತಿಂಗಳ ಕಾಲ ಲೈಟ್‌ ಹಾಕಲು ನವಯುಗ ಸಂಸ್ಥೆಗೆ ಸಾಧ್ಯವಾಗಲಿಲ್ಲ. ಒಂದಷ್ಟು ವಿದ್ಯುತ್‌ ಕಂಬಗಳನ್ನು ನೆಟ್ಟು, ಅವುಗಳಲ್ಲಿ ಕೆಲವಕ್ಕಷ್ಟೇ ದೀಪಗಳನ್ನು ಅಳವಡಿಸಿತ್ತು. ಆದರೆ ವಿದ್ಯುತ್‌ ಸಂಪರ್ಕವೇ ಪಡೆದಿರಲಿಲ್ಲ.

ದೂರು

ಯಾವಾಗಲೂ ಮೆಸ್ಕಾಂಗೆ ದೂರು ಹಾಕುತ್ತಿದ್ದ ಗುತ್ತಿಗೆದಾರ ಸಂಸ್ಥೆಯ ಬಣ್ಣ ಬಯಲಾದದ್ದು ಹೋರಾಟಗಾರರಿಂದ. ಯಾವಾಗ ಸರಕಾರದ ಮುಖ್ಯ ಕಾರ್ಯದರ್ಶಿಗೆ ರಂಜನ್‌ ಮಾಣಿ ಗೋಪಾಲ್‌ ಅವರು ದೂರು ನೀಡಿದರೋ ಎಲ್ಲರೂ ಎಚ್ಚೆತ್ತುಕೊಂಡರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಧಿಕಾರಿ, ಮೆಸ್ಕಾಂ ಇಷ್ಟೂ ಮಂದಿ ತಡಬಡಾಯಿಸಿ ಮೇಲ್‌ಗ‌ಳ ವಿನಿಮಯ ಮಾಡಿಕೊಂಡರು. ಕಡತಗಳ ಪರಿಶೀಲನೆ ನಡೆಸಿದರು. ಎಲ್ಲಿ ಲೋಪ ಆಗಿದೆ ಎಂದು ಹುಡುಕತೊಡಗಿದರು.

ಎಲ್ಲಿ ಬಾಕಿಯಾಗಿದೆ ಅರ್ಜಿ ಎಂದು ಕಣ್ಣಿಗೆ ಎಣ್ಣೆ ಹಾಕಿ ನೋಡತೊಡಗಿದರು. ಆಗಲೇ ಸತ್ಯ ಹೊರಬಿದ್ದದ್ದು. ನವಯುಗ ಸಂಸ್ಥೆ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿಯೇ ಹಾಕಿರಲಿಲ್ಲ! ತರಾತುರಿಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಕೆಲವೇ ದಿನಗಳಲ್ಲಿ ಮೆಸ್ಕಾಂ ತನ್ನ ಬಾಬತ್ತಿನ ಕೆಲಸ ಪೂರೈಸಿಕೊಟ್ಟಿದೆ. ಹಾಗಿದ್ದರೂ ತೆವಳಿಕೊಂಡು ಕೆಲಸ ಮಾಡುವ ಮಾದರಿಯಲ್ಲಿ ಬೆಳಕೀಯುವ ವ್ಯವಸ್ಥೆ ಆಗಿದ್ದು ಈಗ ಅರ್ಧದಷ್ಟೇ ದೀಪಗಳು ಬೆಳಗುತ್ತಿವೆ. ಮೆಸ್ಕಾಂನಿಂದ ಶಾಸಿŒ ಸರ್ಕಲ್‌ವರೆಗೆ ಬಹುತೇಕ ದೀಪಗಳು ಬೆಳಗುತ್ತವೆ. ಅದರ ಆಚೆ, ಶಾಸ್ತ್ರಿ ಸರ್ಕಲ್‌ ನಿಂದ ಕೆಎಸ್‌ಆರ್‌ಟಿಸಿ ಕಡೆಗೆ ಮತ್ತದೇ ಕತ್ತಲು.

Advertisement

ಅಪಘಾತ

ಫ್ಲೈಓವರ್‌ನಲ್ಲಿ ಕತ್ತಲಾವರಿಸುವುದರಿಂದ ಅನೇಕ ಅಪಘಾತಗಳು ಸಂಭವಿಸಿವೆ. ಮರಣಗಳೂ ಆಗಿವೆ. ಅಂಗ ಊನತೆಯಾಗಿದೆ. ವಾಹನಗಳು ಜಖಂಗೊಂಡಿವೆ. ಇವಕ್ಕೆಲ್ಲ ಏನು ಪರಿಹಾರ. ಚತುಷ್ಪಥದಲ್ಲಿ ಬೆಳಕಿಲ್ಲದೇ ಫ್ಲೈಓವರ್‌ನಲ್ಲಿ ಹೋಗುವಾಗ ಗೊಂದಲ ಉಂಟಾಗಿ ನಡೆದ ಅಪಘಾತಗಳು ಹಾಗೂ ಅದರಿಂದಾದ ಹಾನಿಗೆ ಪರಿಹಾರ ನೀಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಅಷ್ಟಾಗಿಯೂ ಇಷ್ಟು ಕಾಲ ಅಸಡ್ಡೆ ಮಾಡಿದ ಸಂಸ್ಥೆಗೆ ಏನು ಶಿಕ್ಷೆ ಎಂದರೆ ಅದೂ ಇಲ್ಲ. ಟೋಲ್‌ಗೇಟ್‌ನಲ್ಲಿ ನಿಯತ್ತಾಗಿ ಸುಂಕ ಕಟ್ಟಿ ಸಾಗುವ ಮಂದಿಯನ್ನು ನೋಡಿದ ಸಂಸ್ಥೆ ಇಲ್ಲಿ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯಲ್ಲಿದೆ.

ನಡೆಯದ ಎಚ್ಚರಿಕೆ

ಫ್ಲೈಓವರ್‌ ಅಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅನುಕೂಲವಾಗುವಂತೆ, ಉದ್ಯಾನವನ ನಿರ್ಮಿ ಸುವಂತೆ ಅನೇಕರು ಬೇಡಿಕೆ ಸಲ್ಲಿಸಿದ್ದರು. ಹೆದ್ದಾರಿಯಲ್ಲಿ ಹರಿಯುವ ನೀರು ಸರ್ವಿಸ್‌ ರಸ್ತೆಗೆ ಬೀಳದಂತೆ ತಡೆಯಲು ಹಣಕಾಸಿನ ತೊಂದರೆ ಇದೆ ಎಂದು ಅಧಿವೇಶನದಲ್ಲೇ ಹೆದ್ದಾರಿ ಪ್ರಾಧಿಕಾರ ಉತ್ತರ ನೀಡಿತ್ತು. ಇಷ್ಟು ಕಾಲದಿಂದ ಟೋಲ್‌ ಸಂಗ್ರಹಿಸುತ್ತಿದ್ದರೂ ಇನ್ನೂ ಹಣ ಒಟ್ಟಾಗಲಿಲ್ಲವೇ ಎಂಬ ಪ್ರಶ್ನೆ ಮೂಡುವಂತೆ ಇದುವರೆಗೂ ಸಮಸ್ಯೆ ನಿವಾರಣೆಯಾಗಿಲ್ಲ. ಇದಕ್ಕೆ ಎಸಿಯವರು ಅನೇಕ ಗಡುವುಗಳನ್ನು ನೀಡಿದ್ದರೂ ಈವರೆಗೂ ಒಂದಕ್ಕೂ ಸಂಸ್ಥೆ ಸ್ಪಂದಿಸಿಲ್ಲ. ಹೆದ್ದಾರಿ ಸಮಸ್ಯೆಗಳ ಕುರಿತಾಗಿ ಅನೇಕ ಹೋರಾಟಗಳು ನಡೆದಿವೆ.

ಉದ್ಘಾಟನೆ

ಫ್ಲೈಓವರ್‌ನಲ್ಲಿ ಅಳವಡಿಸಿದ ಬೀದಿದೀಪಗಳ ವ್ಯವಸ್ಥೆಯನ್ನು ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಕೇಶ್‌, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್‌ ಅಂಕದಕಟ್ಟೆ, ಪುರಸಭೆ ಸದಸ್ಯರಾದ ಶೇಖರ್‌ ಪೂಜಾರಿ, ಸಂತೋಷ್‌ ಕುಮಾರ್‌ ಶೆಟ್ಟಿ ಮೊದಲಾವರಿದ್ದು ಚಾಲನೆ ನೀಡಲಾಯಿತು.

ಉತ್ತರ ಬಂದಿದೆ: ಪೂರ್ಣಪ್ರಮಾಣದಲ್ಲಿ ದೀಪಗಳ ಅಳವಡಿಕೆ ನಡೆಯಲಿದೆ ಎಂದು ಹೆದ್ದಾರಿ ಪ್ರಾಧಿಕಾರ ಉತ್ತರ ನೀಡಿದೆ. ಕೆಲವು ದಿನಗಳಲ್ಲಿ ಅಳವಡಿಕೆಯಾಗದಿದ್ದರೆ ಮತ್ತೆ ಮೇಲ್ಮನವಿ ನೀಡಲಾಗುವುದು. –ರಂಜನ್‌ ಮಾಣಿ ಗೋಪಾಲ್‌ ದೂರುದಾರರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next