Advertisement

ಚಳಿಗೆ ಗಡಗಡ ನಡುಗಿದ ಕುಂದಾನಗರಿ

06:06 PM Jan 13, 2022 | Team Udayavani |

ಬೆಳಗಾವಿ: ಮೈ ಕೊರೆಯುವ ಚಳಿಗೆ ನಲುಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಬುಧವಾರ ದಾಖಲೆಯ ತಾಪಮಾನ ಇಳಿಕೆ ಆಗಿದ್ದು, 8.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಟ ತಾಪಮಾನದಿಂದಾಗಿ ಕುಂದಾನಗರಿ ಗಡಗಡ ನಡುಗಿ ಹೋಗಿದೆ.

Advertisement

2021ರಲ್ಲಿ ಅತ್ಯ ಧಿಕ ತಾಪಮಾನ ಹಾಗೂ ಅತ್ಯ ಧಿಕ ಮಳೆ ಹೊಡೆತದಿಂದ ಹೈರಾಣಾಗಿದ್ದ ಬೆಳಗಾವಿ ಈಗ ಚಳಿಯಿಂದಲೂ ತಪ್ಪಿಸಿಕೊಳ್ಳಲು ಆಗಲಿಲ್ಲ. ಬುಧವಾರ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇದರಿಂದ ಜನರು ಮನೆ ಬಿಟ್ಟು ಹೊರಗೆ ಬರಲಾರದೇ ಚಳಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ಕನಿಷ್ಟ 8.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. 10 ವರ್ಷಗಳ ನಂತರ ದಾಖಲೆ ಪ್ರಮಾಣದಲ್ಲಿ ಚಳಿಗಾಲವಿದ್ದು, ಈ ವರ್ಷ ವಿಪರೀತ ಚಳಿಯಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದಿನದಿಂದ ದಿನಕ್ಕೆ ಚಳಿ ಬೆಳಗಾವಿಗರನ್ನು ಈ ಬಾರಿ ಚಳಿಗಾಲ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ.

ಚಳಿಯಿಂದ ತಪ್ಪಿಸಿಕೊಳ್ಳಲು ಜನರು ಅಲ್ಲಲ್ಲಿ ಬೆಂಕಿಯಿಂದ ಕಾಯಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಬೆಳಗ್ಗೆ ವಾಯು ವಿಹಾರಕ್ಕೆ ಹೋದವರು ಚಳಿಯಿಂದ ತಪ್ಪಿಸಿಕೊಳ್ಳಲು ತಲೆಗೆ ಟೋಪಿ, ಶಾಲು, ಸ್ವೇಟರ್‌ ಹಾಕಿಕೊಂಡು ಅನೇಕ ಕಸರತ್ತು ಮಾಡಿದರೂ ಚಳಿ ಮಾತ್ರ ಬಿಡಲಿಲ್ಲ.

ಬುಧವಾರ ಬೆಳಗ್ಗೆ 10 ಗಂಟೆಯಾದರೂ ಚಳಿ ಕಡಿಮೆ ಆಗಿರಲಿಲ್ಲ. ಎಲ್ಲಿ ನೋಡಿದರಲ್ಲಿ ಜನರು ಸ್ವೇಟರ್‌, ತಲೆಗೆ ಟೋಪಿ ಹಾಕಿಕೊಂಡು ತಿರುಗಾಡುತ್ತಿರುವುದು ಸಾಮಾನ್ಯವಾಗಿತ್ತು. ಹೊಲ-ಗದ್ದೆಗಳು, ಹಳ್ಳಿಗಳಲ್ಲಿ ಅಲ್ಲಲ್ಲಿ ಜನರು ಗುಂಪುಗೂಡಿಕೊಂಡು ಕಟ್ಟಿಗೆಗೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದರು.

Advertisement

ಬೆಳಗಾವಿ ನಗರದ ಕೇಂದ್ರ ಬಸ್‌ ನಿಲ್ದಾಣ ಬಳಿ ಆಟೋ ಚಾಲಕರು, ಬಸ್‌ ಚಾಲಕರು-ನಿರ್ವಾಹಕರು ಹಾಗೂ ಕೆಲ ಪ್ರಯಾಣಿಕರು ಬೆಂಕಿಯ ಧಗೆಗೆ ಮೈಯೊಡ್ಡಿ ಬೆಚ್ಚಗೆ ಮಾಡಿಕೊಳ್ಳುತ್ತಿರುವುದು ಕಂಡು ಬಂತು. ನಗರದಲ್ಲಿ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆಯಲ್ಲಿ ಬುಧವಾರ ತುಸು ಕಡಿಮೆ ಇತ್ತು. ಆದರೂ ದಿನನಿತ್ಯ ಬರುವವರು ಮೈಯೆಲ್ಲ ಬಟ್ಟೆ ಹಾಕಿಕೊಂಡು ವಾಕಿಂಗ್‌ ಮಾಡುತ್ತಿದ್ದರು.

ಚಹಾ ಅಂಗಡಿ ಬಳಿ ನಿಂತು ಚಹಾ ಸವಿಯುತ್ತಲೇ ಸಾರ್ವಜನಿಕರು ಚಳಿ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹನುಮಾನ ನಗರ, ಕುಮಾರಸ್ವಾಮಿ ಲೇಔಟ್‌, ಕೆಎಲ್‌ಇ ಆಸ್ಪತ್ರೆ ರಸ್ತೆ, ರಾಮದೇವ ಹೋಟೆಲ್‌, ಕ್ಲಬ್‌ ರೋಡ್‌, ಶಿವಬಸವ ನಗರ, ಶ್ರೀನಗರ, ಮಹಾಂತೇಶ ನಗರ, ಕಣಬರ್ಗಿ ರೋಡ್‌, ಜಿಲ್ಲಾಸ್ಪತ್ರೆ ರಸ್ತೆ ಬಳಿ ವಾಯು ವಿಹಾರಕ್ಕೆ ಹೋದವರು ಚಹಾ ಸವಿಯುತ್ತ ಚಳಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಕಳೆದ ಐದಾರು ದಿನಗಳಿಂದ ಸಂಜೆ 7 ಗಂಟೆ ಆಗುತ್ತಲೇ ಚಳಿ ವಿಪರೀತವಿದೆ. ಹಳ್ಳಿಗಳಲ್ಲಿ ರಾತ್ರಿ 9 ಗಂಟೆಯಾದರೆ ಜನರು ಹೊರಗೆ ಕಾಣ ಸಿಗುತ್ತಿಲ್ಲ. ಹೊಲ ಗದ್ದೆಗಳಿಗೆ ಹೋಗುವವರು ತುಸು ವಿಳಂಬ ಮಾಡಿಯೇ ತೆರಳುತ್ತಿದ್ದಾರೆ.

ಕನಿಷ್ಟ ತಾಪಮಾನ ದಾಖಲು
ಜ. 12ರಂದು ಕನಿಷ್ಟ ತಾಪಮಾನ 8.6 ಡಿಗ್ರಿ ಸೆಲ್ಸಿಯಸ್‌, ಜ.11ರಂದು 11.9 ಹಾಗೂ ಜ.10ರಂದು 14.3ರಷ್ಟು ಕನಿಷ್ಟ ತಾಪಮಾನ ದಾಖಲಾಗಿದೆ. ಗುರುವಾರದಿಂದ ಜ.16ರ ವರೆಗೆ ತಾಪಮಾನ ಇನ್ನೂ ಇಳಿಮುಖವಾಗುವ ಸಾಧ್ಯತೆ ಇದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next