Advertisement

ಸ್ವ ಉದ್ಯೋಗಕ್ಕೆ ಮಾರುಕಟ್ಟೆ ಸಮಸ್ಯೆ

10:48 AM Feb 10, 2019 | Team Udayavani |

ಕುಮಟಾ: ಚಿಕ್ಕ ಉದ್ದಿಮೆಗಳು, ಸ್ವಸಹಾಯ ಸಂಘಗಳು, ಸ್ವ ಉದ್ಯೋಗದ ಮೂಲಕ ಸಿದ್ಧಪಡಿಸಿದ ವಸ್ತುಗಳಿಗೆ ಮಾರುಕಟ್ಟೆ ಸವಾಲು ಎದುರಾಗಿದೆ ಎಂದು ಉದ್ದಿಮೆದಾರ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಮಟಾ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕುಮಟಾ ಹಾಗೂ ಸಿಂಡ್‌ ಆರ್‌ಸೆಟಿ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ನಾಮಧಾರಿ ಸಭಾಭವನದಲ್ಲಿ ನಡೆದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸ್ವ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ಪಾದಕ ಸ್ವಸಹಾಯ ಸಂಘಗಳು ಬೆಳೆದಂತೆ ಅಭಿವೃದ್ಧಿಯ ಶಕೆ ಹೆಚ್ಚಾಗುತ್ತದೆ. ಪಕ್ಕದ ಜಿಲ್ಲೆ, ರಾಜ್ಯಗಳನ್ನು ಗಮನಿಸಿದರೆ ಅಭಿವೃದ್ಧಿಯಲ್ಲಿ ನಾವು ಹಿಂದಿದ್ದೇವೆ. ಮಾರುಕಟ್ಟೆ ವಿಸ್ತಾರಗೊಂಡರೆ ಉತ್ಪಾದನೆಗಳಿಗೆ ಬೇಡಿಕೆ ಬರುತ್ತದೆ. ಸ್ವಉದ್ಯೋಗಗಳಿಗೆ ಸರ್ಕಾರ ಪೂರಕ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಬೇಡಿಕೆ ಇಲ್ಲದಿದ್ದರೆ ಉತ್ಪಾದನೆಗೆ ಬೆಲೆ ಇಲ್ಲ ಎಂದರು.

ಡಾ| ಜಿ.ಜಿ. ಹೆಗಡೆ ಮಾತನಾಡಿ, ದುಡಿಮೆ, ಉದ್ಯೋಗಕ್ಕೆ ಶೈಕ್ಷಣಿಕ ಅರ್ಹತೆ ಮಾತ್ರ ಮಾನದಂಡವಲ್ಲ. ಸಾಧನೆಗಳಿಗೆ ತಕ್ಕ ಪ್ರತಿಫಲ ಲಭಿಸಿದರೂ ನಮ್ಮಲ್ಲಿ ಸಂತೃಪ್ತಿ ಇಲ್ಲ. ನೆಮ್ಮದಿಯ ಬದುಕಿಗೆ ಸೋಮಾರಿತನ ಅಡ್ಡಿ ಬರಬಾರದು. ಎಲ್ಲ ಅರ್ಹತೆಗಳಿದ್ದರೂ ಕ್ರಿಯಾಶೀಲತೆ ಕೊರತೆ ಉಂಟಾದರೆ ಸಾಧನೆಗಳು ಮರಿಚಿಕೆಯಾಗುತ್ತವೆ. ಪರಸ್ಪರ ಸಹಕಾರ ಮನೋಭಾವನೆಯಿಂದ ಅಭಿವೃದ್ಧಿ ಕಟ್ಟಬಹುದು ಎಂದರು.

ಜಿಪಂ ಸದಸ್ಯ ಗಜಾನನ ಪೈ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ಅಭಿವೃದ್ಧಿಯ ಬೆಳಕು ಹರಿದಿದೆ. ಶಿಕ್ಷಣ ಹೊಂದಿ ಅರ್ಹತೆ ಇಲ್ಲದ ನೌಕರಿ ಮಾಡುವುದಕ್ಕಿಂತ ಸ್ವಉದ್ಯೋಗದ ಮೂಲಕ ಸಾಧನೆ ಮಾಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಗುಮಾಸ್ತನಾಗಿ, ಗುಲಾಮಗಿರಿಯ ಜೀವನ ನಡೆಸುವುದಕ್ಕಿಂತ ದುಡಿಯುವ ಕೈಗಳಿಗೆ ಸ್ವಉದ್ಯೋಗ ಜೀವನಕ್ಕೆ ಬಲ ತಂದುಕೊಳ್ಳಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಮಾ ನೌಕರರ ಸಂಘದ ಅಧ್ಯಕ್ಷ ಸಿ.ಆರ್‌. ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ನಡೆಯುತ್ತಿರುವ ಸ್ವಸಹಾಯ ಸಂಘಗಳ ಸಂಘಟಿತ ಅಭಿವೃದ್ಧಿ ಸಮಾಜದಲ್ಲಿ ಸೌಮ್ಯ ಕ್ರಾಂತಿಯನ್ನು ಹುಟ್ಟಾಕಿದೆ ಎಂದರು.

ಸಂಘದ ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಯೊಗೇಶ ಕೊಡ್ಕಣಿ ನಿರೂಪಿಸಿದರು. ಉದ್ಯಮಿ ಪ್ರವೀಣ ಶೇಟ್, ಸಿಂಡ್‌ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ನಿರ್ದೇಶಕ ನವೀನಕುಮಾರ, ಎಚ್.ಆರ್‌. ನಾಯ್ಕ, ಪುರಸಭೆ ಸದಸ್ಯರಾದ ಪಲ್ಲವಿ ಮಡಿವಾಳ, ಶೈಲಾ ಗೌಡ, ಮೋಹಿನಿ ಗೌಡ, ಗೀತಾ ಮುಕ್ರಿ, ಲಕ್ಷ್ಮೀ ಗೊಂಡ ಮೊದಲಾದವರು ಉಪಸ್ಥತಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ 12 ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಸ್ವಉದೋಗ ಮೇಳದಲ್ಲಿ ಸಂಘಗಳ ಸದಸ್ಯರು ಸಿದ್ಧಪಡಿಸಿದ ವಿವಿಧ ಬಗೆಯ ತಿಂಡಿ, ತಿನಸುಗಳು, ವಸ್ತು, ಪರಿಕರಗಳು, ಬಗೆಬಗೆಯ ಆಟಿಕೆಗಳು ಗಮನ ಸೆಳೆದವು. 70ಕ್ಕೂ ಹೆಚ್ಚು ಮಳಿಗೆಗಳು ವ್ಯಾಪಾರ ನ‌ಡೆಸಿದವು.

Advertisement

Udayavani is now on Telegram. Click here to join our channel and stay updated with the latest news.

Next