ಕುಮಟಾ: ಊರಕೇರಿ ಗ್ರಾಮದಲ್ಲಿ ಅಕ್ರಮ ಚೀರೆಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಊರಕೇರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಸೈಟ್‌ನಲ್ಲಿ ದಿನವೀಡಿ ಕಲ್ಲು ಕಟಿಂಗ್ ಮಾಡುವ ಮಶೀನ್ ನಿಂದಾಗಿ ಸುತ್ತಲಿನ ವಾತಾವರಣ ಸದಾ ಕರ್ಕಶ ಧ್ವನಿಯಿಂದ ಕೂಡಿರುತ್ತಿದ್ದು, ವ್ಯಾಪಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಈ ಅಕ್ರಮ ಸೈಟ್ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿ ಇರುವುದರಿಂದ ಕಲ್ಲಿನ ಧೂಳಿನ ಕಣಗಳು ವಾತಾವರಣದಲ್ಲಿ ಸೇರಿಕೊಂಡು, ಆ ಭಾಗದ ಜನವಸತಿ ಪ್ರದೇಶವನ್ನು ಕಲುಷಿತಗೊಳಿಸಿದೆ. ಇದರಿಂದ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಸಿರಾಟ ಸಂಬಂಧಿತ ಕಾಯಿಲೆಗಳು ಕಂಡುಬರುವ ಸಾಧ್ಯತೆ ಅಧಿಕವಾಗಿದೆ.
ಅಲ್ಲದೇ, ಊರಕೇರಿಯ ಕಿರಿದಾದ ರಸ್ತೆಯಲ್ಲಿ ಕಲ್ಲು ಸಾಗಾಣಿಕೆ ಮಾಡುವ ಮಿನಿ ಲಾರಿಗಳು, ಟಿಪ್ಪರ್‌ಗಳು ಪ್ರತಿನಿತ್ಯ ಓಡಾಡುವುದರಿಂದ ಗ್ರಾಮಸ್ಥರ ಸಂಚಾರಕ್ಕೂ ತೊಂದರೆಯಾಗುತ್ತಿದೆ. ವಾಹನದಿಂದ ಹಾರುವ ಧೂಳಿನ ಕಣಗಳು ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ತಗುಲಿ ಅಪಘಾತವಾದ ಉದಾಹರಣೆಗಳೂ ಸಾಕಷ್ಟಿವೆ. ಈ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ.
ಊರಕೇರಿ ಗ್ರಾಮದ ಅದೇ ಸರ್ವೆ ನಂಬರ್ ಪಕ್ಕದಲ್ಲಿ ಇನ್ನೆರಡು ಹೊಸ ಕಲ್ಲು ಗಣಿಗಾರಿಕೆ ಆರಂಭವಾಗಿರುವುದನ್ನು ಗಮನಿಸಿದರೆ ಈ ಅಕ್ರಮ ಗಣಿಗಾರಿಕೆಗೆ ತಾಲೂಕು ಆಡಳಿತದ ಅಧಿಕಾರಿಗಳ ಕೃಪಾಕಟಾಕ್ಷ ಇರುವ ಶಂಕೆ ವ್ಯಕ್ತವಾಗಿದೆ ಎಂಬುದು ಗ್ರಾಮಸ್ಥರಾದ ನಾಗರಾಜ ಸತ್ಯಪ್ಪ ನಾಯ್ಕ ಮತ್ತು ಇತರರ ಆರೋಪವಾಗಿದೆ. ನಡೆಯುತ್ತಿರುವ ಅಕ್ರಮ ಚೀರೆಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಿರುವ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಯಾವುದೇ ಪರವಾನಗಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಅಕ್ರಮ ಚಿರೆಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದರೆ ಸಮರ್ಪಕ ಉತ್ತರ ನೀಡದೆ ಸತಾಯಿಸುತ್ತಿದ್ದಾರೆ. ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದಾಗ ಕ್ರಮ ಕೈಗೊಳ್ಳುವ ಬಗ್ಗೆ ತಹಶೀಲ್ದಾರ್ ಕಚೇರಿಗೆ ನಿರ್ದೇಶನ ನೀಡಿದರೂ, ಪ್ರಯೋಜನವಾಗಿಲ್ಲ. ಎಸಿ ಕಚೇರಿಯಿಂದ ಬಂದ ಪತ್ರದ ಬಗ್ಗೆ ವಿಚಾರಿಸಿದರೆ ಆ ಪತ್ರವೇ ಬಂದಿಲ್ಲ ಎಂದು ವಾದಿಸಿದ್ದಾರೆ. ಪೋಸ್ಟ್ ಆಫೀಸ್‌ನಲ್ಲಿ ವಿಚಾರಿಸಿದರೆ ತಹಶೀಲ್ದಾರ್ ಕಚೇರಿಯಲ್ಲಿ ಪತ್ರ ತಲುಪಿದ ಬಗ್ಗೆ ದಾಖಲೆ ಕೂಡ ಲಭಿಸಿದೆ. ಇದನ್ನೆಲ್ಲ ಗಮನಿಸಿದರೆ ಈ ಅಕ್ರಮ ಗಣಿಗಾರಿಕೆಯಲ್ಲಿ ತಹಶೀಲ್ದಾರ್ ಕಚೇರಿ ಕೆಲ ಅಧಿಕಾರಿಗಳ ಪಾತ್ರವಿರುವುದು ಕಂಡುಬರುತ್ತದೆ.
ನಾಗರಾಜ ನಾಯ್ಕ,
ಊರಕೇರಿ ಗ್ರಾಮಸ್ಥ