Advertisement

ನರಕಯಾತನೆ ತಪ್ಪಿಸಿ, ನ್ಯಾಯ ಕೊಡಿಸಿ

05:40 PM Nov 15, 2018 | Team Udayavani |

ಕುಮಟಾ: ತಾಲೂಕಿನಲ್ಲಿ ಪ್ರಮುಖವಾಗಿ ಅಂಬಿಗ ಸಮಾಜದಲ್ಲಿ ಸಾಕಷ್ಟು ಕಡೆ ಜಾತಿ ಬಹಿಷ್ಕಾರದ ಪ್ರಕರಣಗಳು ಕಂಡುಬಂದಿರುವುದರಿಂದ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ದಿವಗಿಯ ಬಹಿಷ್ಕಾರಗೊಂಡ ಕುಟುಂಬದವರು ಸಹಾಯಕ ಆಯುಕ್ತೆ ಪ್ರೀತಿ ಗೆಲ್ಹೋಟ್‌ ರಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ದೀವಗಿಯ ಸಂತೋಷ ಅಂಬಿಗ ಹಾಗೂ ಸಹೋದರ ಸಂದೀಪ ಅಂಬಿಗ ಕುಟುಂಬದವರಿಗೆ ಅಂಬಿಗ ಸಮಾಜದ ಯಜಮಾನನಿಂದ ಜಾತಿ ಬಹಿಷ್ಕಾರದ ಕುರಿತು ಮನವಿಯಲ್ಲಿ ಉಲ್ಲೇಖೀಸಲಾಗಿದೆ. ಜಾತಿ ಬಹಿಷ್ಕಾರದಿಂದ ನರಕಯಾತನೆ ಅನುಭವಿಸುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಕೋರಲಾಗಿದೆ.

ಇದಕ್ಕೆ ಸಹಾಯಕ ಆಯುಕ್ತೆ ಪ್ರೀತಿ ಗೆಲ್ಹೋಟ್‌ ಪ್ರತಿಕ್ರಿಯಿಸಿ, ದಿವಗಿ ಹಾಗೂ ಉಪ್ಪಿನಪಟ್ಟಣದಲ್ಲಿ ಇಂಥ ಬಹಿಷ್ಕಾರದ ಪ್ರಕರಣಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿಗೆ ಹೋಗಿ ಪಂಚಾಯಿತಿ ಸದಸ್ಯರು ಹಾಗೂ ಜಾತಿ ಮುಖಂಡರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಇನ್ನು ಮುಂದೆ ಬಹಿಷ್ಕಾರ ಪದವನ್ನು ಬಳಸದಂತೆ ಹೇಳುತ್ತೇನೆ. ಶೀಘ್ರದಲ್ಲೇ ಪೊಲೀಸ್‌ ಹಾಗೂ ತಹಶೀಲ್ದಾರರ ಜೊತೆಗೂಡಿ ಸ್ಥಳಕ್ಕೆ ತೆರಳುತ್ತೇನೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಾಸಕ ದಿನಕರ ಶೆಟ್ಟಿ, ಇಂತಹ ಆಚರಣೆಯನ್ನು ನಾನು ಹಲವಾರು ವರ್ಷಗಳ ಹಿಂದೆಯೇ ವಿರೋಧಿಸಿಕೊಂಡು ಬರುತ್ತಿದ್ದೇನೆ. ಕೆಲವು ಸಮಾಜಗಳಲ್ಲಿ ಇಂಥ ಆಚರಣೆಗಳು ಜಾರಿಯಲ್ಲಿರುವುದು ದುರದೃಷ್ಟಕರ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಇಂಥ ಆಚರಣೆಗಳು ಮುಕ್ತಾಯ ಆಗಬೇಕು. ಪ್ರಕರಣದಲ್ಲಿ ಎರಡೂ ಕಡೆಯವರು ಕುಳಿತು ಚರ್ಚಿಸಿ ಬಗೆಹರಿಸಬೇಕಾದ ವಿಚಾರ ಇದಾಗಿದ್ದು, ಈ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತೇನೆ ಎಂದರು.

ಚುರುಕಾದ ತಾಲೂಕಾಡಳಿತ
ಈ ನಡುವೆ ಉಪ್ಪಿನಪಟ್ಟಣ ಹಾಗೂ ದಿವಗಿಯಲ್ಲಿ ಜಾತಿ ಬಹಿಷ್ಕಾರದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಚುರುಕಾದ ತಾಲೂಕಾಡಳಿತ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಮಾಹಿತಿ ಲಭಿಸಿದೆ. ತಹಶೀಲದಾರ ಮೇಘರಾಜ ನಾಯ್ಕ, ಉಪ್ಪಿನಪಟ್ಟಣಕ್ಕೆ ತೆರಳಿ ಬಹಿಷ್ಕಾರಗೊಂಡ ಕುಟುಂಬಗಳನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಸಭೆ ನಡೆಸಿ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next