Advertisement

ಕುಮಟಾ:ಇನ್ನೂ ನಿರ್ಮಾಣವಾಗದ ಸರ್ವೀಸ್‌ ರಸ್ತೆ; ಅವೈಜ್ಞಾನಿಕ ಚತುಷ್ಪಥ ಕಾಮಗಾರಿ

06:40 PM Feb 15, 2023 | Team Udayavani |

ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ದೀವಗಿ ಬಳಿ ಐಆರ್‌ಬಿ ಕಂಪನಿಯು ಅವೈಜ್ಞಾನಿಕ ಚತುಷ್ಪಥ ರಸ್ತೆ ಕಾಮಗಾರಿ ನಡೆಸಿದ್ದು, ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದರೂ ಕನಿಷ್ಠ ಸರ್ವೀಸ್‌ ರಸ್ತೆಯನ್ನೂ ಮಾಡದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.

Advertisement

ಕಳೆದ ಐದು ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರು, ಮೇಲ್ಸೇತುವೆ ಹಾಗೂ ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ತಡೆ ನಡೆಸಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್‌.ಬಿ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಳಿಕ ಮಾಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಅಷ್ಟಕ್ಕೇ ಸುಮ್ಮನಾಗಿದ್ದರು. ಬಳಿಕ ಗ್ರಾಮಸ್ಥರು ಅಂದಿನ ಜಿಲ್ಲಾಧಿಕಾರಿ ಹರೀಶ ಕುಮಾರ್‌ ಅವರಿಗೆ, ಸಮಸ್ಯೆ ಇರುವ ಕುರಿತು ಮನವಿ ಮಾಡಿದ್ದರು.

ಆ ನಂತರ ಒಂದೆರಡು ದಿನಗಳ ಕಾಲ ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ಜೆಸಿಬಿಯ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯ ಆರಂಭಿಸಲಾಯಿತಾದರೂ ಅಷ್ಟಕ್ಕೆ ಸ್ಥಗಿತಗೊಳಿಸಲಾಗಿತ್ತು. ಹೆದ್ದಾರಿಯಲ್ಲಿನ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದಂತೆ ಗ್ರಾಮಸ್ಥರು ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಐ.ಆರ್‌. ಬಿ ಸೇರಿದಂತೆ ಹೆದ್ದಾರಿ ಇಲಾಖಾ ಅಧಿಕಾರಿಗಳ ಗಮನ ಸೆಳೆದಿದ್ದರು. ಇದ್ಯಾವುದಕ್ಕೂ ಯಾವುದೇ ಅಧಿಕಾರಿಗಳು ಸ್ಪಂದಿಸದೇ ಜಾಣ ಮೌನ ವಹಿಸಿರುವುದು
ವಿಪರ್ಯಾಸವೇ ಸರಿ.

ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ಗ್ರಾಮಸ್ಥರು, ದೀವಗಿ ಗ್ರಾಮ ಪಂಚಾಯತಿ ಎದುರು ಪ್ರತಿಭಟನಾ ಧರಣಿ ನಡೆಸಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ಅಲ್ಲದೇ ಸರ್ವೀಸ್‌ ರಸ್ತೆ ನಿರ್ಮಿಸುವವರೆಗೆ ಚತುಷ್ಪಥ ರಸ್ತೆಯಲ್ಲಿ ಒಂದು ರಸ್ತೆಯನ್ನು ಬಂದ್‌ ಮಾಡಿ, ಸರ್ವೀಸ್‌ ರಸ್ತೆಯನ್ನಾಗಿಸಿ ಓಡಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ವೇಳೆ ಬಿಗುವಿನ ವಾತಾವರಣ ಉಂಟಾಗಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಭೇಟಿ ನೀಡಿ ಐ.ಆರ್‌ .ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಪ್ರತಿಭಟನೆಯ ನಂತರ ಒಂದು ವಾರಗಳ ಕಾಲಾವಕಾಶ ಕೇಳಿದ್ದ ಐ.ಆರ್‌.ಬಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತದೇ ರಾಗ ಎಂಬಂತೆ ಎರಡು ದಿನಗಳ ಜೆಸಿಬಿಯ ಕೆಲಸ ಮಾಡಿಸಿ ಬಳಿಕ ಕಾಮಗಾರಿಯನ್ನು ಅಷ್ಟಕ್ಕೇ ಕೈಬಿಟ್ಟಿದ್ದರು.

Advertisement

ಈ ಭಾಗದಲ್ಲಿ ಸರ್ವೀಸ್‌ ರಸ್ತೆ ಇಲ್ಲದಿರುವುದು ಎಖಮುಖ ದಾರಿಯಲ್ಲಿ ದ್ವಿಮುಖವಾಗಿ ಸಂಚರಿಸುವ ಅನಿವಾರ್ಯ ವಾಹನ ಸವಾರರದ್ದಾಗಿದೆ. ಇದರಿಂದ ಅನೇಕ ಬಾರಿ ಎದುರು ಬರುವ ವಾಹನಗಳಿಗೆ ಡಿಕ್ಕಿಯಾಗಿ ಅಪಘಾತಗಳು ಸಂಭವಿಸಿದೆ. ಅಲ್ಲದೇ ಪಾದಾಚಾರಿಗಳು ಸಂಚರಿಸಲು ರಸ್ತೆಯ ಪಕ್ಕದಲ್ಲಿ ದಾರಿಯೇ ಇಲ್ಲದ ಸ್ಥಿತಿ ಇರುವುದರಿಂದ ಅಂಗೈಯಲ್ಲಿ ಜೀವ ಹಿಡಿದು ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಜೊತೆಗೆ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿ ವೇಳೆ ಸಂಚರಿಸುವಾಗ ಹೆದ್ದಾರಿ ಪಕ್ಕದ ಗುಂಡಿಯಲ್ಲಿ ಬಿದ್ದು, ಕೈಕಾಲು ಮುರಿದುಕೊಂಡ ಘಟನೆಗಳು ಈಗಾಗಲೇ ನಡೆದಿದೆ. ಇಷ್ಟಾದರೂ ಈವರೆಗೆ ಯಾವುದೇ ರೀತಿಯಲ್ಲಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಜನಸಾಮಾನ್ಯರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಹೆದ್ದಾರಿಯನ್ನು ಬಂದ್‌ ಮಾಡುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡುತ್ತೇವೆ ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತ ನಾಗರಿಕರು.

ಶಾಲಾ ಮಕ್ಕಳು, ವಯೋವೃದ್ಧರು, ದನಕರುಗಳು ಪ್ರತಿನಿತ್ಯ ಓಡಾಡುವ ಇಲ್ಲಿ ಸರ್ವೀಸ್‌ ರಸ್ತೆ ಅತೀ ಅಗತ್ಯವಿದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಲೇಬೇಕು. ಈವರೆಗೆ ಜನರ ತಾಳ್ಮೆ ಪರೀಕ್ಷಿಸಿದ್ದು ಸಾಕು. ಇನ್ನು ಮುಂದೆಯಾದರೂ ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳಲಿ. ಇಲ್ಲವಾದರೆ ರಸ್ತೆ ತಡೆ ನಡೆಸುವುದು ಅನಿವಾರ್ಯ. ಕನಿಷ್ಟ ನಮಗಾಗುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಾಗದ ಇಂದಿನ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದರ ಪರಿಣಾಮ ಎದುರಿಸಬೇಕಾದಿತು.
ರಾಜು ಮಾಸ್ತಿಹಳ್ಳ, ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು

ಈಗಾಗಲೇ ದೀವಗಿಯ ಸರ್ವೀಸ್‌ ರಸ್ತೆ ನಿರ್ಮಿಸುವ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಪ್ರಸ್ತಾವನೆಯು ಪ್ರಕ್ರಿಯೆ ಹಂತದಲ್ಲಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯ ವರೆಗೆ ತುರ್ತಾಗಿ ಅಗತ್ಯತೆ ಇರುವಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವಂತೆ ಪೊಲೀಸ್‌ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ.
ರಾಘವೇಂದ್ರ ಜಗಲಾಸರ,
ಉಪವಿಭಾಗಾಧಿಕಾರಿ ಕುಮಟಾ

ಮಂಜುನಾಥ ದೀವಗಿ

Advertisement

Udayavani is now on Telegram. Click here to join our channel and stay updated with the latest news.

Next