ಕುಮಟಾ: ಕರಾವಳಿಯಲ್ಲಿ ಆರೆಂಜ್ ಅಲರ್ಟ್(Orange Alert) ಎಚ್ಚರಿಕೆಯ ಆದೇಶದ ಬೆನ್ನಲ್ಲೇ ತಾಲೂಕಿನಲ್ಲಿ ವಿಪರೀತ ಮಳೆಯಾಗಿ ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ.
ಶನಿವಾರ ಹಾಗೂ ರವಿವಾರ ಸುರಿದ ಭಾರಿ ಮಳೆ(Heavy rain)ಗೆ ತಾಲೂಕಿನ ಕಂದವಳ್ಳಿ ಗ್ರಾಮದಲ್ಲಿ ನಾಗಿ ಶಿವು ಮುಕ್ರಿ ಎನ್ನುವವರ ವಾಸ್ತವ್ಯದ ಮನೆಯು ಸಂಪೂರ್ಣ ಕುಸಿದು ಬಿದ್ದು ಹಾನಿಯಾಗಿದೆ. ಮನೆ ಕಳೆದುಕೊಂಡ ಕುಟುಂಬಕ್ಕೆ ಈಗ ದಿಕ್ಕೇ ತೋಚದ ಪರಿಸ್ಥಿತಿ ಎದುರಾಗಿದ್ದು ಸಂಬಂಧಪಟ್ಟ ಇಲಾಖೆ ಸೂರು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಮಳೆ-ಗಾಳಿಯಿಂದಾಗಿ ಕಲಭಾಗ ಗ್ರಾಮದಲ್ಲಿ ವಿನಾಯಕ ದತ್ತ ಕಲಭಾಗ ಎನ್ನುವವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಮುರಿದುಬಿದ್ದು ಭಾಗಶಃ ಹಾನಿಯಾಗಿದ್ದು ಅಂದಾಜು 20 ಸಾವಿರ ರೂ.ಗಳ ಹಾನಿ ಆಗಬಹುದಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಯಾವುದೇ ಜನ ಜಾನುವಾರುಗಳಿಗೆ ಹಾನಿಯಾಗಿರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.