Advertisement

ಕರಾವಳಿ ರೈತರಿಗೂ ಶೀಘ್ರ ಸಿಗುವುದೇ ಕುಮ್ಕಿ ಹಕ್ಕು?

01:45 AM Sep 08, 2019 | Sriram |

ಮಂಗಳೂರು: ಕೊಡಗಿನಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವ ಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ನೀಡಿದ ಬೆನ್ನಲ್ಲೇ ಕರಾವಳಿ ರೈತರಿಗೆ ಕುಮ್ಕಿ ಭೂಮಿ ಅನುಭವಿಸುವ ಹಕ್ಕು ಒದಗಿಸುವ ರಾಜ್ಯ ಸರಕಾರದ ಹಳೆಯ ತೀರ್ಮಾನಕ್ಕೆ ಮರುಜೀವ ಬಂದಿದೆ.

Advertisement

ಕೃಷಿಕರಿಗೆ ಕುಮ್ಕಿ ಹಕ್ಕು ಕಲ್ಪಿಸುವಂತೆ ಆಗ್ರಹಿಸಿಕೆಲವೇ ದಿನಗಳಲ್ಲಿ ಬಿಜೆಪಿ ಶಾಸಕರು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಇದರಿಂದ ದ.ಕ., ಉಡುಪಿಯ 4 ಲಕ್ಷ ರೈತರು ಕುಮ್ಕಿ ಭೂಮಿ ಮಂಜೂರಾಗುವ ನಿರೀಕ್ಷೆಯಲ್ಲಿದ್ದಾರೆ.

ಕುಮ್ಕಿ ಹಕ್ಕನ್ನು ರೈತರಿಗೆ ನೀಡಲು 2013ರಲ್ಲಿ ಬಿಜೆಪಿ ಸರಕಾರ ತೀರ್ಮಾನಿಸಿ ಕರಡು ಅಧಿಸೂಚನೆ ಹೊರಡಿತ್ತು. ಸಾರ್ವಜನಿಕರ ಆಕ್ಷೇಪ ಸಲ್ಲಿಕೆ, ಪರಿಶೀಲನೆಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುವ ಹೊತ್ತಿಗೆ ಸರಕಾರದ ಅವಧಿ ಮುಗಿದು ಅಷ್ಟರಲ್ಲಿಯೇ ಉಳಿದುಹೋಯಿತು.

ಕೃಷಿಗೆ ಮಾತ್ರ ಅವಕಾಶ
ದ.ಕ. ಜಿಲ್ಲೆ ಮದರಾಸು ಪ್ರಾಂತ್ಯ ಆಡಳಿತದಡಿ ಇದ್ದಾಗ, ಆಗಿನ ಕಂದಾಯ ಅಳತೆಯಂತೆ “ಕದೀಂ’ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಅದರ ಸುತ್ತಲಿನ 450 ಲಿಂಕ್ಸ್‌ /100 ಗಜ (90 ಮೀ.) ಸರಕಾರಿ ಜಮೀನನ್ನು “ಕುಮ್ಕಿ ಸವಲತ್ತಿನ ಜಮೀನು’ ಎಂದು ಪರಿಗಣಿಸಲಾಗಿತ್ತು. ಇದನ್ನು ಕೃಷಿ ಪೂರಕ ಉದ್ದೇಶಕ್ಕಾಗಿ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಈ ಜಾಗದ ಮೇಲೆ ರೈತರಿಗೆ ಪೂರ್ಣ ಹಕ್ಕಿಲ್ಲ; ಕೃಷಿಗೆ ಪೂರಕವಾಗಿ ಅನುಭೋಗಿಸುವ ಹಕ್ಕು ಮಾತ್ರ ಇದೆ.

1973ರ ತನಕ ಕುಮ್ಕಿ ಜಮೀನನ್ನು ಕದೀಂದಾರರಿಗೆ “ದರ್ಖಾಸು’ ನೆಲೆಯಲ್ಲಿ ಮಂಜೂರು ಮಾಡಲಾ ಗುತ್ತಿತ್ತು, ಬಳಿಕ ಸ್ಥಗಿತಗೊಳಿಸಲಾಗಿತ್ತು. ಬಳಿಕ ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು “ಅಕ್ರಮ-ಸಕ್ರಮ’ದಡಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಯಿತು. 2010ರಲ್ಲಿ ಕುಮ್ಕಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಹೊರತುಪಡಿಸಿ ಇನ್ನಿತರ ಮಂಜೂರು ಮಾಡಬಾರದು ಎಂದು ನಿರ್ದೇಶನ ನೀಡಲಾಯಿತು. ಬಳಿಕ 2013ರಲ್ಲಿ ಮತ್ತೆ ರೈತರಿಗೆ ಮಂಜೂರು ಮಾಡುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅದಿನ್ನೂ ಅಂತಿಮಗೊಂಡಿಲ್ಲ.

Advertisement

ಕುಮ್ಕಿ ಬಿಟ್ಟುಕೊಡಲು ಸಿದ್ಧರಿರಬೇಕು!
ಜಿಲ್ಲಾಡಳಿತದ ಪ್ರಕಾರ, ಕರಾವಳಿ ಭಾಗದಲ್ಲಿ ಸದ್ಯ ಕುಮ್ಕಿ ಭೂಮಿಯ 450 ಲಿಂಕ್‌ ಒಳಗೆ ಕೃಷಿ ಚಟುವಟಿಕೆಗೆ ಅವಕಾಶ ಇದೆ. ಆದರೆ ಸರಕಾರ ಯಾವುದೇ ಸಂದರ್ಭದಲ್ಲಿ ಆ ಭೂಮಿಯ ಆವಶ್ಯಕತೆ ಇದೆ ಎಂದು ಹೇಳಿದರೆ ಬಿಟ್ಟುಕೊಡಬೇಕು. ಕೆಲವು ಸಿರಿವಂತರು ಮಾತ್ರ ವರ್ಗ ಜಮೀನಿನ ಹತ್ತಿರದಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಸರಕಾರಿ ಭೂಮಿಯನ್ನು ಕುಮ್ಕಿ ಎನ್ನುತ್ತಿದ್ದಾರೆ. ಇದಕ್ಕೆ ಆಸ್ಪದವಿಲ್ಲ.

ಕೃಷಿಕರಿಗೆ ಕುಮ್ಕಿ ಹಕ್ಕು ನೀಡುವ ಸಂಬಂಧ ಕೆಲವೇ ದಿನದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿ ಆಗಿರುವ ಕಾರ್ಯ ಮತ್ತು ರೈತರ ಬೇಡಿಕೆಗಳ ಬಗ್ಗೆ ವಿಶೇಷವಾಗಿ ಮಾತುಕತೆ ನಡೆಸಿ, ಕೃಷಿಕರಿಗೆ ಅನುಕೂಲಕರ ತೀರ್ಮಾನ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next