Advertisement

ಪತ್ರ ಬರೆದರೂ ಗ್ರಂಥಾಲಯಕ್ಕೆ  ಕಟ್ಟಡ ಹಸ್ತಾಂತರವಿಲ್ಲ !

05:34 AM Mar 14, 2019 | |

ಬಡಗನ್ನೂರು: ಕೃಷಿ ಅಧಿಕಾರಿಗೆಂದು ಎರಡು ದಶಕಗಳ ಹಿಂದೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಿರ್ಮಿಸಲಾಗಿದ್ದ ವಸತಿಗೃಹ ಕಟ್ಟಡ ವಾಸ್ತವ್ಯವಿಲ್ಲದೆ ಪಾಳು ಬಿದ್ದಿದೆ.

Advertisement

ಈ ಸ್ಥಳದಲ್ಲಿ ಗ್ರಂಥಾಲಯ ತೆರೆಯಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದ್ದು, ಈ ಕುರಿತಂತೆ ಕೃಷಿ ಇಲಾಖೆಯು ತನ್ನ ಸುಪರ್ದಿಯಲ್ಲಿರುವ ಈ ಜಾಗವನ್ನು ಗ್ರಂಥಾಲಯ ನಿರ್ಮಾಣಕ್ಕಾಗಿ ಬಿಟ್ಟು ಕೊಡಲು ನಿರ್ಧರಿಸಿ ಸಂಬಂಧಪಟ್ಟ ಅನ್ಯ ಇಲಾಖೆಗೆ ಪತ್ರವನ್ನೂ ಬರೆದಿದೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಕಟ್ಟಡ ಇನ್ನೂ ಗ್ರಂಥಾಲಯಕ್ಕೆ ಹಸ್ತಾಂತರಗೊಂಡಿಲ್ಲ.

ಸುಮಾರು 25 ವರ್ಷಗಳ ಹಿಂದೆ ಪ್ರತೀ ಗ್ರಾಮಕ್ಕೊಂದು ಅಥವಾ ಹೋಬಳಿ ಮಟ್ಟಕ್ಕೆ ಗ್ರಾಮದಲ್ಲಿ ಕೃಷಿ ಸಹಾಯಕ ಅಧಿಕಾರಿ ಇರಬೇಕೆನ್ನುವ ನೆಲೆಯಲ್ಲಿ ಹುದ್ದೆ ಮಂಜೂರುಗೊಳಿಸಿ ಅವರಿಗೆ ವಸತಿಗೃಹವನ್ನೂ ನಿರ್ಮಿಸಲಾಗಿತ್ತು. ಅದರಲ್ಲೇ ಕೃಷಿ ಕಚೇರಿಯನ್ನು ತೆರೆಯಲಾಗಿತ್ತು. ಆದರೆ ಕಾಲಕ್ರಮೇಣ ಸಹಾಯಕ ಕೃಷಿ ಅಧಿಕಾರಿ ಹುದ್ದೆಯೇ ರದ್ದುಗೊಂಡಿತು. ಆ ಬಳಿಕ ಕಟ್ಟಡವೂ ಪಾಳು ಬಿದ್ದಿದೆ. ಪಾಳು ಬಿದ್ದಿರುವ ಮನೆಯಲ್ಲಿ 20 ವರ್ಷಗಳಿಂದ ಯಾರೂ ವಾಸ್ತವ್ಯವಿಲ್ಲ. ಪರಿಣಾಮ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕುಂಬ್ರ ಪೇಟೆಗೆ ತಾಗಿಕೊಂಡೇ ಇರುವ ಈ ಕಟ್ಟಡ ಕೆಡವಿ ಅದೇ ಜಾಗದಲ್ಲಿ ಗ್ರಂಥಾಲಯವನ್ನು ನಿರ್ಮಾಣ ಮಾಡಬಹುದೆಂದು ಕೃಷಿ ಇಲಾಖೆಯು ಗ್ರಂಥಾಲಯ ಇಲಾಖೆಗೆ ಪತ್ರ ಬರೆದಿದೆ.

ಗ್ರಂಥಾಲಯಕ್ಕೆ ಸೂಕ್ತ ಜಾಗ
ಒಳಮೊಗ್ರು ಗ್ರಾ.ಪಂ.ನಲ್ಲಿ ಸೂಕ್ತ ಗ್ರಂಥಾಲಯವಿಲ್ಲ. ಗ್ರಾ.ಪಂ. ಕಚೇರಿಯ ಒಂದು ಓಣಿಯಲ್ಲಿ ಸದ್ಯಕ್ಕೆ ಗ್ರಂಥಾಲಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಓದಲು ಸರಿಯಾದ ಜಾಗವಿಲ್ಲ. ಪುಸ್ತಕ ಹುಡುಕಲು ಆಗುತ್ತಿಲ್ಲ ಮತ್ತು ಪುಸ್ತಕವನ್ನು ಇಡಲೂ ಜಾಗವಿಲ್ಲದಂತಹ ಪರಿಸ್ಥಿತಿ ಇದೆ. ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಜಾಗವನ್ನು ಸೂಚನೆ ಮಾಡುವಂತೆ ಗ್ರಾ.ಪಂ. ಕಂದಾಯ ಇಲಾಖೆಗೆ ಮನವಿ ಮಾಡಿದರೂ, ಇದುವರೆಗೂ ಜಾಗ ಮಂಜೂರಾಗಿಲ್ಲ. ಇದೀಗ ಕೃಷಿ ಇಲಾಖೆಯೇ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಜಾಗ ಬಿಟ್ಟುಕೊಡಲು ಮುಂದಾಗಿದೆ. ವಸತಿಗೃಹ ಇರುವ ಜಾಗ ಗ್ರಂಥಾಲಯಕ್ಕೆ ಸೂಕ್ತ ಸ್ಥಳ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕಾಲೇಜಿಗೂ ಹತ್ತಿರ
ವಸತಿಗೃಹದ ಪಕ್ಕದಲ್ಲೇ ಸರಕಾರಿ ಪ.ಪೂ. ಕಾಲೇಜು ಹಾಗೂ ಪ್ರಾಥಮಿಕ ಶಾಲೆ, ಖಾಸಗಿ ವಸತಿ ಶಾಲೆಗಳು ಇರುವ ಕಾರಣ ಗ್ರಂಥಾಲಯವನ್ನು ಪ್ರಾರಂಭ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಕಾಲೇಜಿನಲ್ಲೂ ಗ್ರಂಥಾಲಯದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಕುಂಬ್ರದಲ್ಲಿ ಗ್ರಂಥಾಲಯದ ಆವಶ್ಯಕತೆ ಇರುವ ಕಾರಣ ಕಟ್ಟಡದ ಜಾಗವನ್ನು ಸದ್ಬಳಕೆ ಮಾಡಿಕೊಂಡಲ್ಲಿ ಕುಂಬ್ರದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗಬಹುದು. ಗ್ರಂಥಾಲಯ ನಿರ್ಮಾಣ ಆಗಬೇಕೆನ್ನುವುದು ಗ್ರಾಮಸ್ಥರ ಬೇಡಿಕೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಇಲಾಖೆಗೆ ಪತ್ರವನ್ನೂ ಬರೆದಿದೆ. ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ, ಬೇಡಿಕೆ ಈಡೇರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಹಸ್ತಾಂತರದ ಬಳಿಕ ಕ್ರಮ
ಕಟ್ಟಡವನ್ನು ಪರಿಶೀಲನೆ ಮಾಡಿದ್ದೇನೆ. ಕೃಷಿ ಇಲಾಖೆಯ ಕಟ್ಟಡ ಇನ್ನೂ ಗ್ರಂಥಾಲಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಗ್ರಾ.ಪಂ.ನಿಂದಲೂ ಇಲಾಖೆಗೆ ಪತ್ರ ಬರೆಯಲಾಗಿದೆ. ಹಸ್ತಾಂತರವಾದ ಬಳಿಕ ಪರಿಶೀಲನೆ ನಡೆಸಿ ಅಲ್ಲಿ ಗ್ರಂಥಾಲಯ ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ.
-ಮಮತಾ
ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ

ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next